ಉಡುಪಿ, ಜ.27: ಈಗಾಗಲೇ ಹಲವು ಪಕ್ಷಗಳನ್ನು ಕಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೊಡ್ಡ ಪಕ್ಷಾಂತರಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಶುಕ್ರವಾರ ಅಮ್ಮುಂಜೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.
‘ನನ್ನನ್ನು ಪಕ್ಷಾಂತರಿ ಎಂದು ಸಂಬೋಧಿಸಿದ ಸಿದ್ಧರಾಮಯ್ಯ ಪಕ್ಷಾಂತರ ಮಾಡಿದವರಲ್ಲವೇ?’ ಎಂದು ಪ್ರಶ್ನಿಸಿದ ಪ್ರಮೋದ್, 1978 ರಲ್ಲಿ ನಂಜುಂಡಸ್ವಾಮಿಯವರ ಕರ್ನಾಟಕ ರೈತ ಸಂಘದಲ್ಲಿದ್ದ ಸಿದ್ಧರಾಮಯ್ಯ 1983ರಲ್ಲಿ ಭಾರತೀಯ ಲೋಕದಳ, ಮುಂದೆ ಸಮಾಜವಾದಿ ಜನತಾದಳ, ಜನತಾದಳ, ಜಾತ್ಯತೀತ ಜನತಾದಳ ಸೇರಿದರು.
ಆಗ ಉಪಮುಖ್ಯಮಂತ್ರಿ ಸ್ಥಾನ ಚ್ಯುತಿ ಮಾಡಿದ್ದರಿಂದ ಕುಪಿತಗೊಂಡು ಜೆಡಿಎಸ್ ನಲ್ಲಿದ್ದಾಗಲೇ ಅಹಿಂದ ಸ್ಥಾಪಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರು.
ಕಾಂಗ್ರೆಸ್ ಪಕ್ಷವನ್ನು ತನ್ನ ಸ್ವಾರ್ಥಕ್ಕಾಗಿ ಸೇರಿದ ಸಿದ್ಧರಾಮಯ್ಯ, ಇದೀಗ ನನಗೆ ಪಕ್ಷಾಂತರಿ ಎಂದು ಆರೋಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯವಾಗಿದ್ದು, ನಾನೇನು ಪಕ್ಷ ಬದಲಿಸಿದ ಮೊದಲಿಗನಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಕಾಂಗ್ರೆಸ್ ನಲ್ಲಿ ಅನ್ಯ ಪಕ್ಷದಿಂದ ಬಂದವರಿಲ್ಲವೇ ಎಂದು ಪ್ರಶ್ನಿಸಿದ ಪ್ರಮೋದ್, ಅನ್ಯ ಪಕ್ಷದವರು ಕಾಂಗ್ರೆಸಿಗೆ ಬರಬಹುದಾದರೆ ಕಾಂಗ್ರೆಸ್ ನಿಂದ ಬೇರೆ ಪಕ್ಷಗಳಿಗೆ ಹೋಗಬಾರದು ಎನ್ನುವುದು ಎಷ್ಟು ಸರಿ ಎಂದರು.
ಅನ್ಯ ಪಕ್ಷಗಳಿಂದ ಬರುವ ಯಾರನ್ನೂ ಕಾಂಗ್ರೆಸ್ ಸೇರ್ಪಡೆಗೊಳಿಸುವುದಿಲ್ಲ ಎಂದು ಕೆಪಿಸಿಸಿ ನಿರ್ಣಯ ಮಾಡಲಿ ಎಂದು ಪ್ರಮೋದ್ ಮಧ್ವರಾಜ್ ಸವಾಲೆಸೆದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್- ಮೈತ್ರಿ ವೇಳೆ ತಾನು ತಾಂತ್ರಿಕವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ ಪ್ರಮುಖರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದೆ.
ಚಿಕ್ಕಮಗಳೂರಿನಲ್ಲಿ ಸ್ವತಃ ಸಿದ್ಧರಾಮಯ್ಯ ನನ್ನ ಪರ ಪ್ರಚಾರಕ್ಕೆ ಬಂದಿದ್ದರು ಎಂದು ಸ್ಮರಿಸಿದ ಪ್ರಮೋದ್ ಮಧ್ವರಾಜ್, ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ನವರು ಹಣ ಪಡೆದಿದ್ದಾರೆಯೇ ಹೊರತು ತಾನು ಒಂದು ರೂಪಾಯಿ ಕೂಡಾ ಪಡೆದಿಲ್ಲ. ಪಕ್ಷ ನೀಡಿರುವ ಹಣವನ್ನು ಉಡುಪಿ ಹಾಗೂ ಚಿಕ್ಕಮಗಳೂರಿಗೆ ಸಮನಾಗಿ ಹಂಚಿರುವುದಾಗಿ ತಿಳಿಸಿದರು.
ತನ್ನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವನಾಗಿದ್ದ ನನಗೆ ಏಕವಚನದಲ್ಲಿ ಅವಾಚ್ಯ ಪದ ಪ್ರಯೋಗ ಮಾಡುವ ಸಿದ್ಧರಾಮಯ್ಯ, ಸಾಮಾನ್ಯ ಜನರೊಂದಿಗೆ ಹೇಗೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರಂತೆ ಕೆಟ್ಟ ಪದ ಬಳಕೆ ಮಾಡಲು ನಮಗೆ ಸಂಸ್ಕಾರ ಅಡ್ಡಬರುತ್ತದೆ ಎಂದರು.
ಪಕ್ಷಕ್ಕೆ ನೆಲೆ ಪ್ರಮೋದ್ ಮಧ್ವರಾಜ್ ಮಾತ್ರವಲ್ಲದೇ ಅವರ ತಂದೆ, ತಾಯಿಗೂ ಕಾಂಗ್ರೆಸ್ ಅವಕಾಶ ನೀಡಿದ್ದರೂ ಪ್ರಮೋದ್ ಕಾಂಗ್ರೆಸ್ ಗೆ ದ್ರೋಹ ಮಾಡಿದ್ದಾರೆ ಎಂಬ ಡಿಕೆ ಶಿವಕುಮಾರ್ ಆರೋಪಕ್ಕೆ ಉತ್ತರಿಸಿದ ಪ್ರಮೋದ್, ನಮ್ಮ ತಂದೆ ಸ್ವಂತ ಹಣ ಖರ್ಚು ಮಾಡಿ ಪಕ್ಷದಲ್ಲಿ ಸ್ಥಾನ ಪಡೆದರೆ, ಪ್ರಾಮಾಣಿಕತೆಯಿಂದ ತಾಯಿಗೆ ಸ್ಥಾನ ಲಭಿಸಿತು. ಉಡುಪಿಯಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಗೆ ನೆಲೆ ಒದಗಿಸಿದ್ದೇ ನಾನು ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಾಗ, ಆ ಬಳಿಕ ಅವರ ಕುಟುಂಬದ ವೈವಾಹಿಕ ಸಂಬಂಧ ಬೆಳೆಸಿಕೊಂಡ ಡಿಕೆಶಿಯವರಿಗೆ ಎಸ್. ಎಂ. ಕೃಷ್ಣ ಪಕ್ಷಾಂತರಿ ಎಂದೆನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಉಡುಪಿಯಲ್ಲಿ ಐದೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬಾರದು. ಬಿಜೆಪಿ ತನ್ನ ಸ್ವಂತ ಶಕ್ತಿಯಿಂದ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಮೋದ್ ಮಧ್ವರಾಜ್ ಭವಿಷ್ಯ ನುಡಿದರು.
ತಾನು ಯಾವುದೇ ಲಾಲಸೆಯಿಂದ ಬಿಜೆಪಿ ಸೇರಿಕೊಂಡಿಲ್ಲ. ಪಕ್ಷ ಅವಕಾಶ ನೀಡಿದಲ್ಲಿ ಸ್ಪರ್ಧಿಸುತ್ತೇನೆ, ಇಲ್ಲವಾದಲ್ಲಿ ಕಾರ್ಯಕರ್ತನಾಗಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಪ್ರಮೋದ್ ಮಧ್ವರಾಜ್ ತಿಳಿಸಿದರು.