ಮಲ್ಪೆ: ಸೇವಾ ಮನೋಭಾವನೆಯು ಮನುಷ್ಯ ಜೀವನವನ್ನು ಸಾರ್ಥಕ ಮತ್ತು ಸಂತೋಷಗೊಳಿಸುತ್ತದೆ ಎಂದು ಸಮಾಜ ಸೇವಕ ರವಿ ಕಟಪಾಡಿ ಹೇಳಿದರು. ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ವಾರ್ಷಿಕ ಪ್ರತಿಭಾ ದಿನಾಚರಣೆಯ ಅನಾವರಣ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಶಕ್ತರ, ಅನಾರೋಗ್ಯ ಪೀಡಿತರ ಸಹಾಯಕ್ಕೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಸೂಕ್ತ ವೇದಿಕೆ ಸಿಕ್ಕಾಗ ಹಿಂಜರಿಯದೆ ಮುನ್ನುಗ್ಗಿದಾಗ ಮಾತ್ರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ, ಕಾಲೇಜು ಹಂತದಲ್ಲಿ ಸಿಕ್ಕಿದ ಈ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ದಯಾನಂದ ಶೆಟ್ಟಿ ಹಾಗೂ ಸುಶ್ಮಿತಾ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಡಾ. ರಾಘವ ನಾಯ್ಕ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿಜಾ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಧಾಕೃಷ್ಣ, ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್, ಪದವಿ ವಿಭಾಗದ ಸಾಂಸ್ಕೃತಿಕ ಸಂಚಾಲಕರಾದ ಕೃಷ್ಣ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಮನೀಷ, ರಾಜೇಶ್, ಮಂಜುನಾಥ ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್. ಕೆ. ಕಾರ್ಯಕ್ರಮ ನಿರೂಪಿಸಿದರು.