ಉಡುಪಿ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಹಾಗೂ ಉಡುಪಿ ಜಿಲ್ಲಾ ಶಾಖೆ ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಇಂದಿರಾನಗರ ಕುಕ್ಕಿಕಟ್ಟೆಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಮೇಳ ಮತ್ತು ಉಚಿತ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಶಿಬಿರ ನಡೆಯಿತು. ನಗರಸಭಾ ಸದಸ್ಯ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಸಮಾಜಕ್ಕೆ ನೀಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಉತ್ತಮ ಆರೋಗ್ಯ ಕಾಪಾಡುವ ಕುರಿತು ಮಾಹಿತಿ ನೀಡಿ, ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ. ರಚನಾ ಪ್ರಭು, ಡಾ. ಪ್ರಜ್ಞಾ ಕಿಣಿ, ಪಿ.ಎಮ್.ಜೆ.ಎಫ್ ವಿ.ಜಿ. ಶೆಟ್ಟಿ, ಫ್ಯಾಮಿಲಿ ಪ್ಲಾನಿಂಗ್ ಇಂಡಿಯಾ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಭಾಪತಿ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಬಿ. ರತ್ನಾಕರ್ ಶೆಟ್ಟಿ ಸ್ವಾಗತಿಸಿ, ಸಂಸ್ಥೆಯ ಗೌರವ ಖಚಾಂಚಿ ರಮಾದೇವಿ ವಂದಿಸಿದರು.
ಯೆನೆಪೋಯ ಮೆಡಿಕಲ್ ಕಾಲೇಜಿನ ಸುಮಾರು 24 ವಿವಿಧ ಭಾಗದ ತಜ್ಞರು ಭಾಗವಹಿಸಿ ವಿಶೇಷವಾಗಿ ಮಹಿಳಾ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್‍ಗಳನ್ನು ಎರಡು ಹೈಟೆಕ್ ಬಸ್ಸುಗಳ ಮೂಲಕ ಸುಮಾರು 185 ಮಹಿಳಾ ಶಿಬಿರಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.