ಉಡುಪಿ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯಲ್ಲಿ ಸತತ, ಪ್ರಾಮಾಣಿಕ ಪ್ರಯತ್ನ ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಬಿಟ್ಟು ಕೊಡದೆ ಮುಂದುವರಿದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮೆಲಕ ಮಣಿಪಾಲ್ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ. ಉಲ್ಲಾಸ್ ಕಾಮತ್ ಹೇಳಿದರು.
ಇವರು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಉಡುಪಿಯ ನಾಗಬನ ಕ್ಯಾಂಪಸ್ ನಲ್ಲಿರುವ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ‘ಜ್ಞಾನ ಸಂಭ್ರಮ’ದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾರಂಭದ ಇನ್ನೋರ್ವ ಮುಖ್ಯ ಅತಿಥಿಗಳಾದ ಕರಾವಳಿ ಭದ್ರತಾ ಪಡೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ. ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಿಂದ ಸುಲಭವಾಗಿ ಆಕರ್ಷಿತಗೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ತಮ್ಮ ಹೆತ್ತವರಿಗೂ ಕೆಟ್ಟ ಹೆಸರು ತಂದು ಬಲಿಯಾಗುತ್ತಿದ್ದಾರೆ. ಇವುಗಳಿಂದ ವಿದ್ಯಾರ್ಥಿಗಳು ದೂರವಿದ್ದು, ಕಲಿಕೆಯ ಕಡೆ ಗಮನಕೊಟ್ಟು, ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ವೈಧ್ಯಕೀಯ, ಇಂಜಿನಿಯರಿಂಗ್ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಮುಂದುವರಿದು, ಉನ್ನತ ವ್ಯಾಸಂಗ ಪಡೆಯುವುದರೊಂದಿಗೆ ಸಮಾಜದಲ್ಲಿ ಹೃದಯವಂತರಾಗಿರಬೇಕು ಎಂದರು.
ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು.
ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ವಿಭಾಗ ಮುಖ್ಯಸ್ಥರಾದ ಕೀರ್ತಿ ಹರೀಶ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಉಪಪ್ರಾಂಶುಪಾಲರಾದ ಸಂತೋಷ್ ಸ್ವಾಗತಿಸಿ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೊಪಿಸಿದರು.