ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆ ಬಿ ಸಿ ಟ್ರಸ್ಟ್ ಬ್ರಹ್ಮಾವರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಕಾರ್ಯಕ್ರಮದಲ್ಲಿ ಮಹಿಳಾ ಆಟೋರಿಕ್ಷಾ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಶಿವರಾಯ ಪ್ರಭು ಉದ್ಘಾಟಿಸಿ, ಜ್ಞಾನವಿಕಾಸದ ಮಹತ್ವದ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಆಟೋ ರಿಕ್ಷಾ ತರಬೇತಿ ಪಡೆದು ಮಹಿಳೆ ಸ್ವಾವಲಂಬನೆ ಹೊಂದುವಂತೆ ಕರೆ ನೀಡಿದರು..
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಲತಾ ಹೆಗ್ಡೆ ಮಾತನಾಡಿ, ಮಹಿಳೆ ಇಂದು ಸ್ವಾವಲಂಬಿ ಬದುಕಿನತ್ತ ಸಾಗುತ್ತಿರುವುದು ಪ್ರಶಂಸನೀಯ, ಮಹಿಳೆಯರು ಇಂದು ಎಲ್ಲಾ ರಂಗದಲ್ಲಿ ಮುಂಚೂಣಿಗೆ ನಿಲ್ಲುತ್ತಿದ್ದಾರೆ.
ಮಹಿಳೆ ಎನ್ನುವುದು ಒಂದು ಶಕ್ತಿಯಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದೆ. ಮಹಿಳೆ ಆಟೋ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಉನ್ನತಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಆಟೋ ರಿಕ್ಷಾ ಚಾಲಕಿ ಜಯಂತಿ ಮಾತನಾಡಿ ಸ್ತ್ರೀ ಬದುಕಿನಲ್ಲಿ ದುಡಿದು ಎಲ್ಲಾ ಕ್ಷೇತ್ರದಲ್ಲೂ ಸೈ ಎನ್ನಿಸಿಕೊಳ್ಳಬಹುದು. ಇದಕ್ಕೆ ನಾನೇ ಸಾಕ್ಷಿ ಎಂದು ತನ್ನ ದುಡಿಮೆ ಕಾಯಕದ ಅನುಭವ ಹಂಚಿಕೊಂಡರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಗಂಗಮ್ಮ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್, ಸಾಸ್ತಾನ ರೋಟರಿ ಅಧ್ಯಕ್ಷ ಮನೋಜ್, ವಿಕಾಸ ಕೇಂದ್ರದ ಸದಸ್ಯರು, ತರಬೇತಿ ಪಡೆದುಕೊಳ್ಳುವ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಜಯಲಕ್ಷ್ಮೀ ಸ್ವಾಗತಿಸಿ, ನಿರ್ಮಲಾ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿರು.