ಉಡುಪಿ: ಮಾನವ ಹಕ್ಕು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಇದನ್ನು ಯಾರು ಯಾವ ಸಂದರ್ಭದಲ್ಲಿಯೂ ಉಲ್ಲಂಘಿಸಲು ಸಾಧ್ಯವಿಲ್ಲ. ಇದು ಯಾವುದೇ ಸರ್ಕಾರ, ವ್ಯಕ್ತಿ ನೀಡಿದ ಹಕ್ಕಾಗಿರದೇ ಪ್ರಕೃತಿದತ್ತವಾಗಿ ಪಡೆದ ಹಕ್ಕು.
ಮಾನವ ಹಕ್ಕುಗಳನ್ನು ಗುರುತಿಸುವಲ್ಲಿ ಭಾರತ ಉತ್ಕೃಷ್ಟ ಸ್ಥಾನದಲ್ಲಿ ನಿಲ್ಲುತ್ತದೆ. ಭಾರತೀಯ ಸನಾತನ ಪರಂಪರೆಯಲ್ಲಿ ಮಾನವ ಹಕ್ಕುಗಳನ್ನು ಗುರುತಿಸಿ ಗೌರವಿಸಬೇಕು ಅನ್ನುವ ದಾಖಲೆಗಳು ನಮ್ಮ ವೇದ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಆದರೆ ಈ ಜ್ಞಾನವನ್ನು ಜಗತ್ತಿಗೆ ತಿಳಿಸುವಲ್ಲಿ ನಾವು ಹಿಂದಿರುವ ಕಾರಣ ನಮ್ಮ ಪಠ್ಯ ಪುಸ್ತಕಗಳಲ್ಲಿ ಮಾನವ ಹಕ್ಕುಗಳ ಕೊಡುಗೆಗಳಲ್ಲಿ ಪಾಶ್ಚಾತ್ಯರ ಹೆಸರುಗಳು ರಾರಾಜಿಸುತ್ತಿರುವುದು ವಿಪರ್ಯಾಸವೇ ಸರಿ.
ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ವಿಶ್ವ ಸಂಸ್ಥೆಯೇ ಸೇೂತಿರುವುದು ಅದರಲ್ಲೂ ವಿಶ್ವ ಸಂಸ್ಥೆಯ ಖಾಯಂ ಸದಸ್ಯರುಗಳಾದ ಅಮೇರಿಕಾ, ರಷ್ಯಾ, ಚೀನಾದಂತಹ ರಾಷ್ಟ್ರಗಳೇ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿರುವುದು ನಿಜಕ್ಕೂ ಬೇಸರದ ಬೆಳವಣಿಗೆ.
ಭಾರತದಂತಹ ರಾಷ್ಟ್ರಗಳು ವಿಶ್ವಸಂಸ್ಥೆಯ ಮುಂದಾಳತ್ವ ವಹಿಸುವ ಕಾಲ ಕೂಡಿಬಂದಿದೆ ಎಂದು ಅಂಕಣಕಾರ ರಾಜಕೀಯ ವಿಶ್ಲೇಷಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಮಾನವ ಹಕ್ಕು ಘಟಕ, ಐ.ಕ್ಯೂ.ಎ.ಸಿ, ರೆಡ್ ಕ್ರಾಸ್ ಘಟಕ ಹಾಗೂ ರಾಜಕೀಯಶಾಸ್ತ್ರ, ಇತಿಹಾಸ ವಿಭಾಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಚಿತ್ರಪಾಡಿ ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು.
ಮಾನವ ಹಕ್ಕು ಘಟಕದ ಸಂಚಾಲಕ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸುಬೇೂಧ ಪೈ ಪ್ರಾಸ್ತಾವನೆಗೈದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ವಿನ್ಯಾಸ್ ಪೈ ಸ್ವಾಗತಿಸಿ, ವಿಜೇತಾ ಹೆಗಡೆ ವಂದಿಸಿದರು. ಕೆ.ಎಂ. ಪವಿತ್ರಾ ನಿರೂಪಿಸಿದರು.