ಮಣಿಪಾಲ: ತಾತ್ವಿಕವಾಗಿ, ಬೌದ್ಧ ಧರ್ಮವು ಪರಿಸರಾತ್ಮಕ ದೃಷಿಕೋನ ಮತ್ತು ಜೀವನ ವಿಧಾನವನ್ನು ಪ್ರತಿಪಾದಿಸುತ್ತದೆ ಮತ್ತು ಪ್ರಸ್ತುತ ನಡೆಯುತ್ತಿರುವ ಸಿ.ಓ.ಪಿ27 ಸಮ್ಮೇಳನದ ತತ್ವಗಳನ್ನು ಒಳಗೊಂಡಂತೆ ಜಗತ್ತನ್ನು ಪ್ರಾಕೃತಿಕ ಸುಸ್ಥಿರತೆಯತ್ತ ಕೊಂಡೊಯ್ಯುವ ಪ್ರಯತ್ನಗಳಿಗೆ ಇದೊಂದು ದಾರಿಯಾಗಿದೆ ಎಂದು ಬೌದ್ಧ ಸನ್ಯಾಸಿ, ರಾಟೊ ಡ್ರಾಟ್ಸಾಂಗ್ ಮೊನಾಸ್ಟರಿಯ ಮುಖ್ಯಸ್ಥ ನಿಕೋಲಸ್ ವ್ರೀಲ್ಯಾಂಡ್ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ಟಿಬೆಟಿನ ಬೌದ್ಧ ಧರ್ಮದ ಛಾಯೆಗಳು’ ಕುರಿತು ಉಪನ್ಯಾಸ ನೀಡಿದ ಇವರು, ಟಿಬೆಟಿಗೆ ಬೌದ್ಧ ಧರ್ಮವು ಜೀವನದ ಸಂಕೋಲೆಗಳಿಂದ ಮುಕ್ತಿ ಮತ್ತು ಜ್ಞಾನದ ಸಂದೇಶವನ್ನು ಹೊತ್ತು ಭಾರತದಿಂದಲೇ ವಿಸ್ತರಿಸಿದ್ದು ಎಂದರು.
ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು ಮತ್ತು ಪದ್ಮಸಂಭವ ಅಲ್ಲಿನ ಬೌದ್ಧ ಧರ್ಮಗುರುವಾಗಿ ಟಿಬೆಟ್ ನಲ್ಲಿ ಬೌದ್ಧ ಧರ್ಮವನ್ನು ವಿಸ್ತರಿಸಿದರು ಎಂದು ನಂಬಲಾಗಿದೆ ಎಂದು ಅವರು ಹೇಳಿದರು. ಬೌದ್ಧಧರ್ಮದಲ್ಲಿ ಮಹಾಯಾನ ಮತ್ತು ಹಿನಯಾನದಂತಹ ವಿಭಿನ್ನ ಛಾಯೆಗಳು ಇರಬಹುದಾದರೂ, ಒಟ್ಟಾರೆಯಾಗಿ ಬೌದ್ಧ ಧರ್ಮದ ಸಿಧ್ದಹಂತಗಳು ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ ನ ಮತ್ತು ಕಾನ್ಫರೆನ್ಸ್ ಒಫ್ ಪಾರ್ಟೀಸ್ ಗಳೊಂದಿಗೆ ಹೊಂದಿಕೆಯಾಗುತ್ತದೆ. ತಮ್ಮ ಛಾಯಾಗ್ರಹಣದಲ್ಲಿನ ಉತ್ಸಾಹದ ಬಗ್ಗೆ ಪ್ರತಿಕ್ರಿಯಿಸಿದ ಅಬಾಟ್ ವ್ರೀಲ್ಯಾಂಡ್, ಛಾಯಾಗ್ರಹಣವು ಅವರಿಗೆ
ಪತ್ರಿಕೋದ್ಯಮವಲ್ಲ ಬದಲಾಗಿ ಅದೊಂದು ಕಾವ್ಯ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಜಿಸಿಪಿಎಎಸ್‌ನ ಶೈಕ್ಷಣಿಕ ಕ್ಷೇತ್ರಗಳಾದ ಪರಿಸರ, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಬೌದ್ಧ ಧರ್ಮದ ಸಾರದೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಜಿಸಿಪಿಎಎಸ್ ಎಲ್ಲಾ ಧರ್ಮಗಳು ಮತ್ತು ತತ್ವಗಳಿಗೆ ತನ್ನನ್ನು ತೆರೆದುಕೊಳ್ಳುತ್ತದೆ, ಹಾಗೂ ಅಬಾಟ್ ವ್ರೀಲ್ಯಾಂಡ್ ಅವರ ಛಾಯಾಗ್ರಹಣವು ಅವರ ತತ್ವದೃಷ್ಟಿಯ ತಾತ್ವಿಕ ಅಭಿವ್ಯಕ್ತಿಯಾಗಿದೆ ಎಂದರು.
ಪ್ರೊ. ತುಂಗೇಶ್, ಪ್ರೊ. ಶ್ರೀರಾಜ್ ಗುಡಿ, ವಿದುಷಿ ಭ್ರಮರಿ ಶಿವಪ್ರಕಾಶ್ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಫ್ಘಾನಿಸ್ತಾನದ ಸಾಗರ್ ಅಡಾ ಕಾರ್ಯಕ್ರಮ ನಿರೂಪಿಸಿದರು.