ಉಡುಪಿ: ಕಳೆದ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಎಸ್. ಡಿ.ಪಿ.ಐಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಜನಜನಿತ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಇದಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಪುರಾವೆ ಕೇಳುವ ಬಿಜೆಪಿ, ಚುನಾವಣೆ ಸಮಯದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗಳಿಗೆ ಹಿಂಬಾಗಿಲಿಂದ ಆರ್ಥಿಕ ಸಹಾಯ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಹೊಂದಾಣಿಕೆಗಳು ಗುಟ್ಟಾಗಿ ಉಳಿದಿಲ್ಲ. ಮುಸ್ಲಿಂ ಸಮುದಾಯದ ಮೇಲಿನ ದ್ವೇಷದಿಂದ ಅವರ ಮತಗಳನ್ನು ವಿಭಜಿಸಲು ಬಿಜೆಪಿ ಈ ಹುನ್ನಾರ ನಡೆಸಿದೆ. ಇದರ ಹಿಂದೆ ಮುಸ್ಲಿಮರನ್ನು ಏಕಾಂಗಿಯಾಗಿಸುವ ಹುನ್ನಾರವೂ ಅಡಗಿದೆ. ಎಸ್.ಡಿ.ಪಿ.ಐ ಮಾತೃ ಸಂಘಟನೆಯಾದ ಪಿ.ಎಫ್.ಐಯನ್ನು ನಿಷೇಧಿಸಿರುವುದೆ ಹೆಗ್ಗಳಿಕೆ ಎನ್ನುವ ಬಿಜೆಪಿಗೆ ಎಸ್. ಡಿ.ಪಿ.ಐಯನ್ನು ನಿಷೇಧಿಸಲು ಮೀನ ಮೇಷವೇಕೆ? ಮುಂದೊಂದು ದಿನ ಅಧಿಕಾರ ಪಡೆಯಲು ಬೇಕಾಗಬಹುದೆಂಬ ಮುಂದಾಲೋಚನೆಯೇ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಶ್ನಿಸಿದ್ದಾರೆ.