ಮಂಗಳೂರು, ಮಾ.೯: ತೊಟ್ಟಿಲನ್ನು ತೂಗುವ ಕೈ ದೇಶವನ್ನಾಳಬಲ್ಲದು, ಮಹಿಳೆ ಶಿಕ್ಷಿತಳಾದರೆ ಇಡೀ ದೇಶವೇ ಸುಶಿಕ್ಷಿತವಾಗುತ್ತದೆ. ಇಂದು ಮಹಿಳೆಯರು ವಿಜ್ಞಾನ, ಕ್ರೀಡೆ, ರಾಜಕೀಯ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸ್ಫೂರ್ತಿಯಾಗಿದ್ದಾರೆ. ಆದರೆ ಸಮಾಜದಲ್ಲಿ ಇಂದಿಗೂ ಅಸಮಾನತೆ ಮತ್ತು ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ. ಆದುದರಿಂದ ಕನಸುಗಳನ್ನು ಸಾಧಿಸಲು ಇದ್ದ ಅವಕಾಶಗಳನ್ನು ಪಡೆಯಬೇಕು, ಮಹಿಳೆಯರನ್ನು ಗೌರವಿಸುವ ಸಮಾಜ ನಿರ್ಮಾಣವಾಗಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಹೇಳಿದರು. ಮಾನಿನಿ ರಾಜ್ಯ ಮಹಿಳಾ ಸಂಘ (ರಿ) ಬೆಂಗಳೂರು ಹಾಗೂ ಸಮೃದ್ಧಿ ಜಿಲ್ಲಾ ಮಹಿಳಾ ಒಕ್ಕೂಟ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 9 ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಿನಿ ರಾಜ್ಯ ಮಹಿಳಾ ಸಂಘ (ರಿ) ಬೆಂಗಳೂರು ಇದರ ಅಧೀನದಲ್ಲಿರುವ ಕರ್ನಾಟಕದ ವಿವಿಧ ಜಿಲ್ಲಾ ಒಕ್ಕೂಟಗಳಿಂದ 1000ಕ್ಕೂ ಹೆಚ್ಚು ಮಹಿಳೆಯರು ಈ ಸಮಾವೇಶಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮಂಜುಳಾ ಜೋನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಎ.ಸಿ.ಪಿ ನಜ್ಮಾ ಫಾರೂಕಿ, ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಕೆ, ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಶುಭ ಹಾರೈಸಿದರು. ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾನೂನು ಅಧೀಕ್ಷಕ ಕೆ. ಗೋಪಾಲಕೃಷ್ಣ ಶೆಟ್ಟಿ ಅವರು ಮಹಿಳೆಯರಿಗಾಗಿ ಇರುವ ಉಚಿತ ಕಾನೂನು ನೆರವು ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಭಾಗ್ಯಮೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಯಶ್ರೀ ಅಧ್ಯಕ್ಷರು ಸಮೃದ್ಧಿ ಜಿಲ್ಲಾ ಮಹಿಳಾ ಒಕ್ಕೂಟ, ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊಫೆಸರ್ ರೀಟಾ ನೊರೊನ್ಹಾ, ತಬಸ್ಸುಮ್ ಮತ್ತು ಸಬಿತಾ ಮೋನಿಸ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ವಂ.ಫಾ. ರಿಚರ್ಡ್ ಪಾಯ್ಸ್, ವಂ. ಫಾ ವಿನ್ಸೆಂಟ್ ಡಿಸೋಜ, ಮಹಿಳಾ ಸಬಲೀಕರಣ ಯೋಜನೆಯ ರಾಜ್ಯ ಸಂಯೋಜಕರಾದ ವಂ.ಸಿಸ್ಟರ್ ನ್ಯಾನ್ಸಿ ಲೋಬೊ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಕೆ ಸಂಜೀವ ಗೌಡ ಇವರನ್ನು ಸನ್ಮಾನಿಸಲಾಯಿತು. 8 ಒಕ್ಕೂಟಗಳ ಸದಸ್ಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ವೇತ ಸ್ವಾಗತಿಸಿ, ಸುಪ್ರಿಯಾ ವಂದಿಸಿದರು. ವಾಣಿ ಮತ್ತು ಗೀತಾ ಗಸ್ತೆ ಕಾರ್ಯಕ್ರಮ ನಿರೂಪಿಸಿದರು.




By
ForthFocus™