ಮಂಗಳೂರು, ಫೆ.24: ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆಯಾಗಿದ್ದು, ನಮ್ಮ ತರಗತಿ ಕೊಠಡಿಗಳು ಸಮಾಜದ ಪ್ರತಿಬಿಂಬಗಳಾಗಿವೆ. ಈ ಸೂಕ್ಷ್ಮತೆಗಳನ್ನು ನಾವು ಅರ್ಥೈಸಿಕೊಂಡು ಬೋಧನೆ, ಕಲಿಕಾ ಚಟುವಟಿಕೆಗಳನ್ನು ರೂಪಿಸಬೇಕಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಛೇರಿ, ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ ಆರ್ ಕಾಲೇಜು ಅಧ್ಯಾಪಕರಿಗೆ ಕಿವಿಮಾತು ಹೇಳಿದರು. ಅವರು ಕಾಲೇಜು ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಪರಿಷತ್ತು ಮತ್ತು ಡಾ ಪಿ ದಯಾನಂದ ಪೈ- ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರಿಗೆ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ವೈವಿಧ್ಯತೆ, ಸಮತೆ ಮತ್ತು ಒಳಗೊಳ್ಳುವಿಕೆ ವಿಷಯದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ರೂಸಾ ಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ವೈಯಕ್ತಿಕ ವೈವಿಧ್ಯತೆಗಳನ್ನು ಗುರುತಿಸಿ, ಅವರ ಸಾಮರ್ಥ್ಯವನ್ನು ಉತ್ತೇಜಿಸುವ ಮತ್ತು ಅವರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಹೊಣೆಗಾರಿಕೆ ಅಧ್ಯಾಪಕರಿಗಿದೆ. ವಿವಿಧ ಸಂಸ್ಕೃತಿ, ಆರ್ಥಿಕತೆ, ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿದಾಗ, ಅದರ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸಿದಾಗ ಮತ್ತು ಪರಸ್ಪರ ಗೌರವ, ಸಹಿಷ್ಣುತೆಯನ್ನು ಬೆಳೆಸಿಕೊಂಡಾಗ, ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮತ್ತು ರಾಷ್ಟ್ರೀಯ ಹಾಗೂ ರಾಜ್ಯ ಶಿಕ್ಷಣ ನೀತಿಗಳಲ್ಲಿ ವೈವಿಧ್ಯತೆ, ಸಮತೆ ಮತ್ತು ಒಳಗೊಳ್ಳುವಿಕೆಗಳನ್ನು ಉತ್ತೇಜಿಸಲು ನೀಡಲಾಗಿರುವ ಮಹತ್ವದ ಬಗ್ಗೆ ವಿವರಿಸಿದರು. ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಛೇರಿಯ ಸಹಾಯಕ ನಿರ್ದೇಶಕರಾದ ಸತ್ಯಶಂಕರ, ರೂಸಾ ಸಂಯೋಜಕರಾದ ಉಮಾ ಎ.ಬಿ., ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕರಾದ ಕುಮಾರಸ್ವಾಮಿ, ಮತ್ತು ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಡಾ. ಅಶ್ವಿನಿ ಎಸ್ ಶೆಟ್ಟಿಯವರು ತರಗತಿಗಳಲ್ಲಿ ಹಾಗೂ ಉದ್ಯೋಗ ಸ್ಥಳಗಳಲ್ಲಿ ವೈವಿಧ್ಯತೆ, ಸಮತೆ ಹಾಗೂ ಒಳಗೊಳ್ಳುವಿಕೆಯ ವಿವಿಧ ಆಯಾಮಗಳ ಬಗ್ಗೆ ಉಪನ್ಯಾಸ ನೀಡಿದರು..
ಐ.ಕ್ಯೂ.ಎ.ಸಿ, ಸಂಚಾಲಕರಾದ ದೇವಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜ್ಯೋತಿಪ್ರಿಯ ನಿರೂಪಿಸಿ, ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 200ರಷ್ಟು ಅಧ್ಯಾಪಕರು ಕಾರ್ಯಾಗಾರದ ಪ್ರಯೋಜನ ಪಡೆದರು.




By
ForthFocus™