ಮಂಗಳೂರು, ಫೆ.11: ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ, ದ.ಕ ಜಿಲ್ಲೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ರಿ. ಪಡಿ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ನೇತ್ರಾವತಿ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಾರೋಪ ಕಾರ್ಯಕ್ರಮದ ಪ್ರಯುಕ್ತ ‘ಮಕ್ಕಳೊಂದಿಗೆ ಸಂವಾದ’ಕಾರ್ಯಕ್ರಮ ನಡೆಯಿತು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ಶೋಭಾ ಬಿ.ಜಿ ಇವರು ಮಕ್ಕಳ ಹಕ್ಕುಗಳ ಮಾಸೋತ್ಸವ 2023-24ರ ಮುಖ್ಯ ನಿರ್ಣಯಗಳ ಪುಸ್ತಕವನ್ನು ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂವಿಧಾನದಲ್ಲಿ ಮಕ್ಕಳಿಗೆ ಕೆಲವೊಂದು ಮೂಲಭೂತ ಹಕ್ಕನ್ನು ನೀಡಲಾಗಿದೆ, ಆ ಹಕ್ಕುಗಳನ್ನು ಮಕ್ಕಳು ಓದಿ ಅರಿತುಕೊಳ್ಳಬೇಕು ಮತ್ತು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ಮಕ್ಕಳು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಮಕ್ಕಳಿಗೆ ಯಾವುದೇ ಸಮಸ್ಯೆಯಾದರು ಅದನ್ನು ಪ್ರಶ್ನಿಸುವ ಹಕ್ಕು ಆ ಮಗುವಿಗೆ ಇದೆ, ಒಂದು ಮಗು ಜನಿಸಿದಾಗ ಆ ಮಗುವಿನ ರಕ್ಷಣೆ ಮಾಡುವುದು, ಶಿಕ್ಷಣ ನೀಡುವುದು ಕೇವಲ ತಂದೆ ತಾಯಿಯ ಜವಾಬ್ದಾರಿಯಲ್ಲ, ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ನಮ್ಮ ಸರಕಾರ ಜವಾಬ್ದಾರಿ ಕೂಡ ಪ್ರತಿಯೊಂದು ಮಗುವನ್ನು ಉತ್ತಮ ಪ್ರಜೆಯನ್ನಾಗಿ ಮಾಡುವುದು ಮತ್ತು ಸಮುದಾಯದವರ ಜವಾಬ್ದಾರಿ ಕೂಡ ಆಗಿದೆ. ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆಯಿಂದಾಗಿ ಹೆಚ್ಚಿನ ಬೇರೆ ಬೇರೆ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಅಂದರೆ ಅವರು ಮಾನಸಿಕವಾಗಿ, ದೈಹಿಕ, ಲೈಂಗಿಕ ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮಕ್ಕಳಿಗೆ ಪೋಕ್ಸೋ ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ, ದ.ಕ ಜಿಲ್ಲಾಧ್ಯಕ್ಷರಾದ ರೆನ್ನಿ ಡಿಸೋಜ ಇವರು, ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ಹಲವಾರು ಶಾಲಾ, ಕಾಲೇಜು, ಮಕ್ಕಳಿಗೆ ಸಂಬಂಧಪಟ್ಟ ಇಲಾಖೆ, ಸರಕಾರೇತರ ಸಂಘ ಸಂಸ್ಥೆಗಳ ಜೊತೆಗೂಡಿ ಸುಮಾರು 78 ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಪರವಾಗಿ ಒಟ್ಟು 38 ನಿರ್ಣಯಗಳನ್ನು ಮಾಡಲಾಗಿದೆ. ಒಟ್ಟು ಹತ್ತು ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಪಟ್ಟ ಕಾಯಿದೆ ಕಾನೂನುಗಳ ಕುರಿತು ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾದ್ಯಮದವರು ಸಾಕಷ್ಟು ಸಹಕಾರವನ್ನು ನೀಡಿರುತ್ತಾರೆ ಮತ್ತು ಹೆಚ್ಚಿನ ಜನರಿಗೆ ಈ ಒಂದು ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಸಹಕರಿಸಿರುತ್ತಾರೆ. ಮದ್ಯದಲ್ಲಿ ಸ್ಥಳೀಯವಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿ ಪರಿಹರಿಸಲಾಯಿತು. ಅಲ್ಲಲ್ಲಿ ಕಾರ್ಯಕ್ರಮದಲ್ಲಿ ಕಂಡು ಕೊಂಡ ಮಕ್ಕಳ ಪ್ರಮುಖ ಸಮಸ್ಯೆಗಳನ್ನು ಮಕ್ಕಳಿಂದಲೇ ಕೇಳಿ ಪಡೆದು ಪಟ್ಟಿ ಮಾಡಿ ನಿರ್ಣಯನ್ನಾಗಿ ಮಾಡಿ ಅದನ್ನು ಅನುಷ್ಠಾನ ಮಾಡಲು ಸಂಬಂಧಪಟ್ಟ ಇಲಾಖೆ ಮತ್ತು ಸರಕಾರವನ್ನು ಒತ್ತಾಯಿಸುವುದು ಎಂದು ಹೇಳಿದರು. ಪಡಿ ಮಂಗಳೂರು ವಕಾಲತ್ತು ಸಂಯೋಜಕ ಯೋಗೀಶ್ ಇವರು ಮಕ್ಕಳ ಹಕ್ಕುಗಳ ಮಾಸೋತ್ಸವದ ಪ್ರಮುಖ 38 ನಿರ್ಣಯವನ್ನು ಮಂಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಮಕ್ಕಳ ರಕ್ಷಣಾ ಘಟಕ ದಕ್ಷಿಣ ಕನ್ನಡ ಜಿಲ್ಲೆ ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಕಾರ್ಮಿಕ ಅಧಿಕಾರಿ ಕಾವೇರಿ, ಮಕ್ಕಳ ಮಾಸೋತ್ಸವ ಸಮಿತಿ ಸಂಚಾಲಕಿ ನಂದಾ ಪಾಯಿಸ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ರಿ. ದ.ಕ ಜಿಲ್ಲೆ ಅಧ್ಯಕ್ಷೆ ನಯನಾ ರೈ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾ ವಿದ್ಯಾರ್ಥಿನಿ ಡಯಾನಾ ವೈ ಶೆಟ್ಟಿ, ಜೋಕಟ್ಟೆ ಅಂಜುಮಾನ್ ಯತೀಂ ಖಾನ್ ಮತ್ತು ಮಸಾಕೀನ್ ಸೆಂಟರ್ ವಿದ್ಯಾರ್ಥಿ ಮಹಮ್ಮದ್ ಸಫಾನ್, ಮಕ್ಕಳ ಮಾಸೋತ್ಸವ ಸಮಿತಿಯ ಸಹಸಂಚಾಲಕರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರದ ಸರ್ವ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಶಾಲಾ ಕಾಲೇಜಿನ ಶಿಕ್ಷಕ-ಶಿಕ್ಷಕಿಯರು, ಪಡಿ ಸಂಸ್ಥೆ, ಮಕ್ಕಳ ರಕ್ಷಣಾ ಘಟಕ, ಚೈಲ್ಡ್-ಲೈನ್-1098ರ ಸಿಬ್ಬಂಧಿ ವರ್ಗದವರು ಮತ್ತು ವಿವಿಧ ಶಾಲಾ, ಕಾಲೇಜಿನಿಂದ ಬಂದ ಮಕ್ಕಳು ಉಪಸ್ಥಿತಿ ಇದ್ದರು. ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಮಲಾ ಗೌಡ ವಂದಿಸಿದರು.