ಮಂಗಳೂರು, ಡಿ. 4: ಕನಕದಾಸರ ಜೀವನ ಪ್ರೀತಿ ಸತ್ಯ ನಿಷ್ಠುರ, ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತ. ಪರಿಪಕ್ವ ಅನುಭವಗಳ ಕಾವ್ಯಗಳು, ಭಾವಪರವಶತೆಯ ಕೀರ್ತನೆಗಳು, ಒಡೆಯಲಾಗದ ಮುಂಡಿಗೆಗಳಲ್ಲಿ ತುಂಬಿರುವ ಆಧ್ಯಾತ್ಮ ತತ್ವಗಳು ಸಹೃದಯರನ್ನು ಎಚ್ಚರಿಸುತ್ತಲೇ ಇರುತ್ತವೆ ಎಂದು ಡಾ. ನಾಗವೇಣಿ ಮಂಚಿ ಹೇಳಿದರು. ಅವರು ಡಾ.ಪಿ. ದಯಾನಂದ ಪೈ ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಲಲಿತಕಲಾ ಸಂಘ ಹಾಗೂ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ‘ಕನಕನ ಸ್ಮರಿಸೋಣ ಹಾಗೂ ಪ್ರತಿಭೆಯ ಶೋಧಿಸೋಣ’ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ನವೀನ್ ಕೊಣಾಜೆ ಅವರು ಕನಕದಾಸರ ಕೃತಿಗಳಲ್ಲಿ ಕಂಡುಬರುವ ಜೀವನಾನುಭವದ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹವುಗಳೆಂದು ವಿವರಿಸಿದರು. ಕಾರ್ಯಕ್ರಮದ ಮೊದಲಿಗೆ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಐಕ್ಯೂಎಸಿ ಸಹ ಸಂಯೋಜಕರಾದ ಡಾ. ಜ್ಯೋತಿಪ್ರಿಯಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್, ಅರುಣ ಕುಮಾರಿ ಹಾಗೂ ಕ್ಷಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಾದ ಅಪರ್ಣ ರಾವ್, ಸಾತ್ವಿಕ, ಅಜಿತಾಶ್ರೀ, ದೀಪಾ, ಅಶ್ವಿನಿ, ರಿತಿಕಾ, ದೀಕ್ಷಾ ಕನಕ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಲಲಿತಕಲಾ ಸಂಘದ ಕಾರ್ಯದರ್ಶಿ ಸಾತ್ವಿಕ ಸ್ವಾಗತಿಸಿ ಲಲಿತಕಲಾ ಸಂಘದ ಸಂಯೋಜಕರಾದ ಡಾ. ಕೃಷ್ಣಪ್ರಭ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ವಿಜೇತ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭೆ ಶೋಧಿಸೋಣ ಕಾರ್ಯಕ್ರಮದಲ್ಲಿ ಲಲಿತಕಲಾ ಸಂಘದ ವಿದ್ಯಾರ್ಥಿಗಳು ಪ್ರಹಸನ, ನೃತ್ಯ, ಗಾಯನ ಇತ್ಯಾದಿ ಪ್ರಸ್ತುತಪಡಿಸಿದರು.