ಉಡುಪಿ: ರಾಜ್ಯದಲ್ಲಿ ಸಾಲು ಸಾಲು ಸಾಲು ಹಬ್ಬಗಳು ಪ್ರಾರಂಭವಾಗಿರುವುದರಿಂದ ಹಬ್ಬಗಳನ್ನು ನಂದಿನಿಯೊಂದಿಗೆ ಆಚರಿಸಿ ಸಂತಸ ಪಡೋಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ಕೆ. ರವಿರಾಜ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ವರ್ಷದಲ್ಲಿ ಎರಡು ಬಾರಿ ಸಿಹಿ ಉತ್ಸವ ಆಚರಿಸುತ್ತಿದೆ.
ಉತ್ಸವದ ಅವಧಿಯಲ್ಲಿ ಉತ್ಪನ್ನಗಳಿಗೆ 10% ರಿಯಾಯಿತಿಯನ್ನು ನೀಡುವ ಗ್ರಾಹಕ ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ. ದಿನಾಂಕ 19.08.2021 ರಿಂದ 31.8.2021ರ ತನಕ ಒಟ್ಟು 13 ದಿನಗಳ ಕಾಲ ಈ ಉತ್ಸವವನ್ನು ಆಚರಿಸುತ್ತಿದೆ. ಈ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನನ್ನನ್ನು ಇನ್ನಷ್ಟು ಜನರಿಗೆ ಪರಿಚಯಿಸಿ ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ರಾಜ್ಯದ ಹೈನುಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸುಧಾಕರ್, ಮಾರುಕಟ್ಟೆ ವಿಭಾಗದ ಅಧಿಕಾರಿ ಸಂದೀಪ್ ಮತ್ತು ಸತೀಶ್ ಪೂಜಾರಿ, ನಂದಿನಿ ಮಳಿಗೆಯ ಮಾಲಕ ಪ್ರಭಾತ್ ಕೋಟ್ಯಾನ್ ಉಪಸ್ಥಿತರಿದ್ದರು.