ಉಡುಪಿ, ಡಿ.15: (ಉಡುಪಿ ಬುಲೆಟಿನ್ ವಿಶೇಷ ವರದಿ) ಭಾರತ ಜಾಗತಿಕ ಮಟ್ಟದಲ್ಲಿ ಒಂದರ ಮೇಲೊಂದು ಸಾಧನೆ ಮಾಡುತ್ತಿದೆ. ಜಿ20 ಸಮ್ಮೇಳನದಿಂದ ಚಂದ್ರಯಾನದವರೆಗೆ. ಸ್ವಚ್ಛತೆಯನ್ನು ಕಾಪಾಡಲು ಉಡುಪಿ ಜಿಲ್ಲಾಡಳಿತ, ನಗರಸಭೆ, ಗ್ರಾಮ ಪಂಚಾಯತ್ ಗಳು ಕಟಿಬದ್ಧವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಶಿಕ್ಷಿತರು ಎಂದು ಬಿಂಬಿಕೊಳ್ಳುತ್ತಿರುವ ಕೆಲವರು ತಮ್ಮ ‘ಹೀನ ಮನಸ್ಥಿತಿ’ಯನ್ನು ಪ್ರತಿನಿತ್ಯ ಅನಾವರಣಗೊಳಿಸುತ್ತಿದ್ದಾರೆ.
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಿಂದ ಬ್ರಹ್ಮಾವರ ಮಾರ್ಗವಾಗಿ ಹೋಗುವಾಗ ಸಿಗುವ ಮೊದಲ ಸೇತುವೆಯಲ್ಲಿ ದಿನನಿತ್ಯ ತ್ಯಾಜ್ಯ ಪೊಟ್ಟಣಗಳನ್ನು ತಮ್ಮ ವಾಹನದಿಂದ ಸ್ವರ್ಣಾ ನದಿಗೆ ಎಸೆಯುವ ಅನಾಗರಿಕರು ಹಂತಹಂತವಾಗಿ ಉಡುಪಿ ಜಿಲ್ಲೆಗೆ ನೀರುಣಿಸುವ ತಾಯಿ ಸ್ವರ್ಣೆಯ ನಾಶಕ್ಕೆ ಟೊಂಕ ಕಟ್ಟಿದ್ದಾರೆ. ಹೌದು, ಈ ರಾಕ್ಷಸರು ಎಷ್ಟು ಮುಂದುವರಿದಿದ್ದಾರೆ ಅಂದರೆ, ಹಾಡುಹಗಲೇ ತಮ್ಮ ವಾಹನ ನಿಲ್ಲಿಸಿ ಕೊಳೆತ ತ್ಯಾಜ್ಯ, ಬ್ಯಾಟರಿ ಸೆಲ್, ಬಳಕೆ ಮಾಡಿದ ಪ್ಲಾಸ್ಟಿಕ್ ವಸ್ತುಗಳು, ಸೀಸದ ಬಾಟಲ್, ಟ್ಯೂಬ್ ಲೈಟ್, ಗಾಜಿನ ಚೂರು, ಕೋಳಿ ತ್ಯಾಜ್ಯ, ಈ ರೀತಿ ವಿಷಕಾರಿ ಮತ್ತು ನದಿಯ ವಾತಾವರಣವನ್ನು ಕೆಡಿಸುವ ತ್ಯಾಜ್ಯಗಳನ್ನು ಎಸೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನವಾಗಿ ಕುಳಿತಿದೆ. ತಮ್ಮ ಗುರುತು ಸಿಗಬಾರದೆಂದು ಕೆಲವರು ಸಂಜೆಯ ಬಳಿಕ ಎಸೆದರೆ, ಉಳಿದವರು ಬೆಳಿಗ್ಗೆ ತಮ್ಮ ದೈನಂದಿನ ದಿನಚರಿಯ ಭಾಗವಾಗಿ ತ್ಯಾಜ್ಯ ಎಸೆಯಲು ಸ್ವರ್ಣಾ ನದಿಯನ್ನು ಆಯ್ಕೆ ಮಾಡಿದ್ದಾರೆ.
ಉಡುಪಿಯತ್ತ ಚಲಿಸುತ್ತಿದ್ದ ಕೇರಳ ನೊಂದಣಿಯ ಕಾರೊಂದು ಸ್ವರ್ಣಾ ನದಿಯ ಸೇತುವೆಯ ಬಳಿ ನಿಲ್ಲಿಸದನ್ನು ಹಾಗೂ ಕಾರನ್ನು ಚಲಾಯಿಸುತ್ತಿದ್ದ ಓರ್ವ ‘ಹಿರಿಯ ನಾಗರಿಕ’ ತ್ಯಾಜ್ಯ ಎಸೆದು ವಾಪಾಸು ಬರುತ್ತಿದ್ದ ದೃಶ್ಯವನ್ನು ಹಿಂದಿನಿಂದ ಗಮನಿಸಿದ ಸ್ಥಳೀಯ ಸಮಾಜ ಸೇವಕರೊಬ್ಬರು ವಿಚಾರಿಸಿದಾಗ, ‘ನಾವು ಹೂವುಗಳನ್ನು ನದಿಗೆ ಅರ್ಪಿಸಿದ್ದು, ಏನು ಮಾಡ್ತಿರೋ ಮಾಡಿ’ ಎಂದು ಉಡಾಫೆ ಉತ್ತರ ನೀಡಿದರು. ಅವರು ತ್ಯಾಜ್ಯವನ್ನೇ ಎಸೆದಿದ್ದರು ಎಂದು ‘ಉಡುಪಿ ಬುಲೆಟಿನ್’ ಗೆ ಸಮಾಜ ಸೇವಕ ಮಾಹಿತಿ ನೀಡಿದ್ದಾರೆ. ಇಬ್ಬರು ಮಹಿಳೆಯರು ನಿರ್ಭೀತಿಯಿಂದ ಕಸದ ಬುಟ್ಟಿಗೆ ಕಸ ಹಾಕುವ ಹಾಗೆ ಸ್ವರ್ಣಾ ನದಿಗೆ ತ್ಯಾಜ್ಯದ ಪೊಟ್ಟಣವನ್ನು ಖಾಲಿ ಮಾಡಿದ ಘಟನೆಯನ್ನು ನೋಡಿರುವ ಬಗ್ಗೆ ಇದೇ ಸಮಾಜ ಸೇವಕರು ಮಾಹಿತಿ ನೀಡಿದ್ದಾರೆ.
ನದಿಯಲ್ಲಿಯೂ ಒಂದು ಪ್ರಪಂಚವಿದೆ: ನೆಲದ ಮೇಲೆ ಇಕೋಸಿಸ್ಟಮ್ ಇದ್ದ ಹಾಗೆ ನದಿಯೊಳಗೆ ಕೂಡ ಒಂದು ಪ್ರಪಂಚವಿದೆ. ಅಲ್ಲಿಯೂ ಜೀವಿಗಳಿವೆ. ಈ ರೀತಿ ತ್ಯಾಜ್ಯದ ಅಂಶದ ಹೆಚ್ಚಾದ ಹಾಗೆ ನೀರಿನ ವಾತಾವರಣ ಹಾಳಾಗಿ ಜಲಚರಗಳ ಸಾವಿಗೂ ಕಾರಣವಾಗುತ್ತದೆ. ವಿಷಕಾರಿ ರಾಸಾಯನಿಕ ಅಂಶಗಳ ಮಿಶ್ರಣದಿಂದ ನೀರಿನ ಗುಣಮಟ್ಟ ಕೂಡ ಕ್ರಮೇಣ ಕುಸಿದು ಇದು ಜಿಲ್ಲೆಯ ಒಟ್ಟಾರೆ ಕೃಷಿ, ಜನಜೀವನದ ಮೇಲೆ ಪರಿಣಾಮ ಬೀರುತ್ತದೆ.
ಕಾರ್ಯಪಡೆ ರಚನೆಯಾಗಲಿ: ಇದು ಕೇವಲ ಸ್ವರ್ಣಾ ನದಿ ಸೇತುವೆ ಮಾತ್ರವಲ್ಲದೇ ಜಿಲ್ಲೆಯ ಕಟಪಾಡಿ, ಹೇರೂರು, ಬಾರ್ಕೂರು, ಹಂಗಾರಕಟ್ಟೆ ಸೇರಿದಂತೆ ಇತರೆ ಕಡೆಗಳಲ್ಲಿಯೂ ನದಿಗೆ ತ್ಯಾಜ್ಯಗಳನ್ನು ಎಸೆಯುವ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಸ್ಥಳೀಯ ಉತ್ಸಾಹಿ, ಸಾಮಾಜಿಕ ಕಳಕಳಿಯುಳ್ಳ ಯುವಕರ ಪಡೆಯನ್ನು ಸರ್ಕಾರವೇ ಮುತುವರ್ಜಿಯಿಂದ ರಚಿಸಬೇಕು. ತ್ಯಾಜ್ಯ ಎಸೆಯುವ ಘಟನೆಗಳ ಮೇಲೆ ಗುಪ್ತವಾಗಿ ನಿಗಾ ವಹಿಸಲು ಯೋಜನೆ ರೂಪಿಸಿ ಕಠಿಣ ಕ್ರಮಗಳಾದ ತ್ಯಾಜ್ಯ ಎಸೆಯುವವರ ಛಾಯಾಚಿತ್ರವನ್ನು ವಾಹನದ ನೊಂದಣಿ ಸಂಖ್ಯೆ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ‘ಮರ್ಯಾದೆಗೆ ಅಂಜಿಯಾದರೂ’ ಇಂತಹ ಹೀನ ಮನಸ್ಥಿತಿಯ ಘಟನೆಗಳು ಕಡಿಮೆಯಾಗುವಲ್ಲಿ ಸಂಶವಯೇ ಇಲ್ಲ. ಇಷ್ಟು ಮಾತ್ರವಲ್ಲದೇ ದಂಡ ವಸೂಲಿಯಂತಹ ಕ್ರಮಗಳನ್ನು ಕೂಡ ಕೈಗೊಳ್ಳಬೇಕು. ಜೊತೆಗೆ, ಸ್ಥಳೀಯ ಪರಿಸರದಲ್ಲಿ ಜಲಮಾಲಿನ್ಯದ ಪರಿಣಾಮ ಮತ್ತು ತಡೆಗಟ್ಟುವಿಕೆಯ ಬಗ್ಗೆ ವಿಸ್ತ್ರತವಾದ ಮಾಹಿತಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಗಳಾಗಬೇಕಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯು ಮೇಲಿನ ವರದಿಯನ್ನು ನೋಡಿ ಎಚ್ಚೆತ್ತುಕೊಂಡು ಸ್ವರ್ಣೆಯ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿ ಎಂಬುದೇ ‘ಉಡುಪಿ ಬುಲೆಟಿನ್’ ಆಶಯ.