ಉಡುಪಿ: ಒಂದು ರಾಷ್ಟ್ರ ಒಂದೇ ತೆರಿಗೆ ಎಂಬ ಪರಿಕಲ್ಪನೆಯೊಂದಿಗೆ ಜಾರಿಗೊಳಿಸಲಾದ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯು ಭಾರತದಲ್ಲಿ ಕ್ರಾಂತಿಯನ್ನು ಮಾಡಿದೆ. ಈ ಪದ್ಧತಿಯು ಪಾವತಿದಾರರಿಗೆ ತೆರಿಗೆ ಪಾವತಿಯ ಪ್ರಕ್ರಿಯೆಯನ್ನು ಸರಳಗೊಳಿಸಿ ದೇಶದ ಸಂಪನ್ಮೂಲ ವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಎಲ್ಲಾ ಸರಕು ಹಾಗೂ ಸೇವೆಗಳು ಈ ತೆರಿಗೆ ಪದ್ಧತಿಯ ವ್ಯಾಪ್ತಿಗೆ ಒಳಪಟ್ಟಾಗ ದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಭಾರತ ಸರಕಾರದ ಕಸ್ಟಮ್ಸ್ ತೆರಿಗೆ ವಿಭಾಗ ಮಂಗಳೂರಿನ ಉಪ ಆಯುಕ್ತ ಶ್ರೇಯಸ್ ಕೆ.ಎಸ್. ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ಸರಕು ಮತ್ತು ಸೇವಾ ತೆರಿಗೆ – ಭಾರತದ ಅನುಭವ ಎಂಬ ಅಂತರ್ಜಾಲ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ತೆರಿಗೆ ಪಾವತಿಯು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯಾಗಿದೆ. ದೇಶದಲ್ಲಿ ತೆರಿಗೆ ವ್ಯವಸ್ಥೆಯ ಬದಲಾವಣೆಗಳು ಅಭಿವೃದ್ಧಿಗೆ ಪೂರಕವಾಗಿದ್ದು ಸರಕಾರದ ಪ್ರಗತಿಪರ ಯೋಜನೆಗಳ ಸೂಕ್ತ ಅನುಷ್ಠಾನಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ತಿಮ್ಮಣ್ಣ ಜಿ. ಭಟ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮೇವಿ ಮಿರಾಂದ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ. ವಿಚಾರ ಸಂಕಿರಣವನ್ನು ಸಂಯೋಜಿಸಿ ನಿರೂಪಿಸಿದರು.