ಮಂಗಳೂರು: ಡಾ. ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಸಮಾಜಕಾರ್ಯ ವಿಭಾಗದ ಸಾರಥ್ಯ ಸಮಾಜಕಾರ್ಯ ವೇದಿಕೆಯ 2022-23 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಿಸ್ತಿನಿಂದ ಏನನ್ನೂ ಕೂಡ ಸಾಧಿಸಬಹುದು. ಶಿಸ್ತು ಇದ್ದರೆ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದು. ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ.
ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದರು. ವಿದ್ಯಾರ್ಥಿಗಳು ಸಾಫ್ಟ್ ವೇರ್ ಇದ್ದ ಹಾಗೆ. ಸಂಸ್ಥೆಯು ಹಾರ್ಡ್ ವೇರ್ ಇದ್ದ ಹಾಗೆ. ಸಾಫ್ಟ್ ವೇರ್ ಪರಿಣಾಮಕಾರಿಯಾಗಿದ್ದರೆ ಮಾತ್ರ ಹಾರ್ಡ್ ವೇರ್ ನ ಕ್ಷಮತೆ ಉತ್ತಮವಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಜ್ಯೋತಿ ಸೋಶಿಯಲ್ ಸರ್ವಿಸ್ ಸೆಂಟರ್ ಇದರ ಸಂಯೋಜಕರಾದ ವ. ಜೋಯಲ್ ಲಾಸ್ರಾಡೋ ಮಾತನಾಡಿ, ಪ್ರತ್ಯುಪಕಾರ ಬಯಸದೇ ಮಾಡುವ ಸೇವೆಗೆ ಮೌಲ್ಯ ಹೆಚ್ಚು. ತಾರತಮ್ಯ ಇಲ್ಲದ ಸೇವೆಯನ್ನು ಮಾಡಿದರೆ ಸಮಾಜದ ಪ್ರಗತಿಗೆ ಇಂಧನ ಒದಗಿಸಿದಂತಾಗುತ್ತದೆ ಎಂದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ನಿತಿನ್ ಚೋಳ್ವೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನಾತಕ ವಿಭಾಗದ ಚೀಫ್ ಅಕಾಡೆಮಿಕ್ ಅಡ್ವೈಸರ್ ಡಾ. ವಸಂತಿ ಪಿ., ಸ್ನಾತಕೋತ್ತರ ಸಮಾಜಕಾರ್ಯ ಸಂಯೋಜಕರಾದ ಅರುಣಾ ಕುಮಾರಿ, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು, ಸಾರಥ್ಯ ಉಪಾಧ್ಯಕ್ಷರಾದ ಧನುಶ್ರೀ, ಸಮಾಜಕಾರ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ್ ಪ್ರಸಾದ್ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಾರಥ್ಯ ಅಧ್ಯಕ್ಷರಾದ ಜ್ಞಾನೇಶ್ವರಿ ಸ್ವಾಗತಿಸಿ, ಉಪನ್ಯಾಸಕ ಗಣೇಶ್ ವಂದಿಸಿದರು.
ತೃತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.