ಕೋಟ: ಲಕ್ಷ್ಮೀ ಸೋಮ ಬಂಗೇರ ಕಾಲೇಜಿನಲ್ಲಿ ರಾಜಕೀಯಶಾಸ್ತ್ರ ವಿಭಾಗದಿಂದ ಆಯೋಜಿಸಲ್ಪಟ್ಟ ಸಂವಿಧಾನ ದಿನಾಚರಣೆಯ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಸುಧಾಕರ್ ದೇವಾಡಿಗ, ಭಾರತದಲ್ಲಿ ಸಂವಿಧಾನದಿಂದ ಪ್ರಜಾಪ್ರಭುತ್ವ ಸಾಕಾರಗೊಂಡಿದೆ.
ಪ್ರಜಾತಂತ್ರ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳೇನಾದರೂ ಸಾಮಾನ್ಯರಿಗೆ ದೊರಕಿದ್ದರೆ ಮತ್ತು ರಕ್ಷಿಸಲ್ಪಟ್ಟಿದ್ದರೆ ಅದು ಸಂವಿಧಾನದಿಂದ. ಬಹುರೂಪಿ ದೇಶವಾಗಿದ್ದರೂ ಐಕ್ಯತೆ ಮತ್ತು ಸಮಗ್ರತೆ ಕೂಡ ಸಂವಿಧಾನದಿಂದಾಗಿ ಸಾಧ್ಯವಾಗಿದೆ.
ಸಂವಿಧಾನ ಆಡಳಿತ ವೈಖರಿಯನ್ನು ನಿರ್ದೇಶಿಸುವ ಗ್ರಂಥವಾಗಿದೆ. ದೇಶವನ್ನು ನಿರ್ಮಾಣ ಮಾಡುವ, ರಕ್ಷಿಸುವ ಹಾಗೂ ಎಲ್ಲಾ ಕಳಂಕಗಳನ್ನು ಹೋಗಲಾಡಿಸುವ ಕನಸಿನ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ್ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾ ಬೋಧಿಸಿ ಸಂವಿಧಾನದ ಆಶಯಗಳನ್ನು ಯುವಜನತೆಗೆ ಅರ್ಥೈಸುವ ಅವಶ್ಯಕತೆಯಿದೆ ಎಂದರು. ರಾಜಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ ಸಂವಿಧಾನ ದಿನಾಚರಣೆಯ ಔಚಿತ್ಯವನ್ನು ತಿಳಿಸಿದರು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ನಾಗರಾಜ ವೈದ್ಯ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕ ಅನಂತಕುಮಾರ್ ಸಿ.ಎಸ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಜಣ್ಣ ಎಂ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮನೋಜ್ ಕುಮಾರ್, ಕಚೇರಿ ಸಹಾಯಕ ಸುಜೀಂದ್ರ ಭಾಗವಹಿಸಿದ್ದರು.
ರಾಜ್ಯಶಾಸ್ತ್ರ ವಿದ್ಯಾರ್ಥಿಗಳಾದ ಸುಧೀರ್ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ಸಿಂಧೂರ ಕಾರ್ಯಕ್ರಮ ನಿರೂಪಿಸಿದರು.