ಕೋಟ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಇದರಿಂದ ಉಪಯೋಗವಾಗುತ್ತದೆ. ಮಕ್ಕಳಿಗಾಗಿ ಸಹಾಯವಾಣಿ ವ್ಯವಸ್ಥೆಯಿದ್ದು ಅವಶ್ಯ ಸಮಯದಲ್ಲಿ ಉಪಯೋಗಿಸಿಕೊಳ್ಳಿ ಎಂದು ಚೈಲ್ಡ್ ಲೈನ್ 1098 ಆಪ್ತ ಸಮಾಲೋಚಕಿ ತ್ರಿವೇಣಿ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎತ್ತಿನಟ್ಟಿಯಲ್ಲಿ 9ನೇ ಶಿರಿಯಾರ ಗ್ರಾಮ ಪಂಚಾಯತ್ ನ 2021-22ನೇ ಸಾಲಿನ ಮಕ್ಕಳ ಗ್ರಾಮ ಸಭೆಯಲ್ಲಿ ಚೈಲ್ಡ್ ಲೈನ್ 1098 ಕಾರ್ಯವೈಖರಿ, ಮಕ್ಕಳ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮಾತನಾಡುತ್ತಿದ್ದರು. ಪಡಿ ಸಂಸ್ಥೆಯ ತಿಲೋತ್ತಮ ನಾಯಕ್ ಮಾತನಾಡಿ, ಮುಂದಿನ ನಮ್ಮ ಸುಂದರ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯ. ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಪರಿಶ್ರಮದಿಂದ ನಮ್ಮ ಗುರಿ ತಲುಪಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿ ನಾಯಕ ಪ್ರಜ್ವಲ್ ವಹಿಸಿದ್ದರು. ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಆರೋಗ್ಯ ಸಹಾಯಕಿ ಲಾವಣ್ಯ, ಶಾಲೆಯ ಮುಖ್ಯೋಪಾಧ್ಯಾಯರಾದ ಸಾಧು ಶೇರಿಗಾರ್, ಪೂರ್ಣಿಮಾ, ಪಂಚಾಯತ್ ಸದಸ್ಯರಾದ ಚಂದ್ರ ಶೆಟ್ಟಿ, ಕೆ.ರಾಜೀವಿ, ಭಾರತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಶಾಲಾ ಅಧ್ಯಪಕ ವೃಂದದವರು ಉಪಸ್ಥಿತರಿದ್ದರು.
ಅಕ್ಷಯ ಸ್ವಾಗತಿಸಿ, ಬಿಂದು ವಂದಿಸಿದರು, ರಮ್ಯ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಕಾರ್ಯದರ್ಶಿ ಆನಂದ್ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು.