ಬೆಳ್ತಂಗಡಿ, ಮೇ 1: ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ದುರ್ಗಾ ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ಶಾಸನವನ್ನು ದೇವಾಲಯದ ಆಡಳಿತ ಮಂಡಳಿಯ ಮೇರೆಗೆ, ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್ ಇಲ್ಲಿನ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಲಿಟ್ಟಿರುವ ಈ ದಾನ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 17 ಸಾಲುಗಳನ್ನು ಒಳಗೊಂಡಿದ್ದು, ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಶಿವಲಿಂಗ ಹಾಗೂ ನಂದಿಯ ರೇಖಾ ಚಿತ್ರವನ್ನು ಕೊರೆಯಲಾಗಿದೆ.
ಸ್ವಸ್ತಿ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು 1411ನೆಯ ಸೌಮ್ಯ ಸಂವತ್ಸರದ ಮೀನ ಮಾಸ ಪ್ರಥಮ ಆದಿತ್ಯವಾರ ಅಂದರೆ ಸಾಮಾನ್ಯ ವರ್ಷ 1489ಕ್ಕೆ ಸೇರುತ್ತದೆ.
ಈ ಕಾಲಘಟ್ಟದಲ್ಲಿ ಅಜಿಲ ಮನೆತನದ ಮಾಂಡಳಿಕ ಸೋಮನಾಥ ಪೆರ್ನ್ನಂಣರಸ ಒಡೆಯ ತನ್ನ ತಾಯಿಯಾದ ರಾಮಾದೇವಿಯ ನಿರೂಪದಂತೆ ಬಳಂಜದ ಪಂಚಲಿಂಗ ದೇವರ ನೈವೇದ್ಯಕ್ಕೆ ಭೂದಾನವನ್ನು ನೀಡಿದ್ದು, ಈ ಭೂಮಿಯಿಂದ ಪ್ರತಿವರ್ಷ 1 ಕ್ಕಂ ಭತ್ತವನ್ನು ಬಳ್ಳ 30 ರ ಲೆಕ್ಕದಲ್ಲಿ ಅಚಂದ್ರಾರ್ಕಸ್ಥಾಯಿಯಾಗಿ ನಡೆಸಿಕೊಂಡು ಬರಬೇಕೆಂದು ಶಾಸನವು ಉಲ್ಲೇಖಿಸುತ್ತದೆ. ಶಾಸನವು ಕೊನೆಯಲ್ಲಿ ಶಾಪಾಶಯ ವಾಕ್ಯದಿಂದ ಮುಕ್ತಾಯಗೊಂಡಿದೆ.
ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ, ದೇವಾಲಯದ ಅರ್ಚಕರಾದ ಮಂಜುನಾಥ ಭಟ್ ಹಾಗೂ ಆನಂದ ದೇವಾಡಿಗ ಮತ್ತು ರವಿ ಸಂತೋಷ ಆಳ್ವ ಸಹಕಾರ ನೀಡಿರುತ್ತಾರೆ.