ಧರ್ಮಶಾಲ, ಅ.22: (ಉಡುಪಿ ಬುಲೆಟಿನ್ ವರದಿ) ಇಲ್ಲಿಯ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆದಿತ್ಯವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಅಭೂತಪೂರ್ವ ಗೆಲುವನ್ನು ಸಾಧಿಸಿ ವಿಶ್ವಕಪ್ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ದಿಗ್ವಿಜಯ ಸಾಧಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ, ಆರಂಭದಲ್ಲೇ ನ್ಯೂಜಿಲೆಂಡಿಗೆ ಆಘಾತ ನೀಡಿತು. ಸ್ಪೋಟಕ ಆಟಗಾರ ಕಾನ್ವೇ ಶೂನ್ಯಕ್ಕೆ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ವಿಲ್ ಯಂಗ್ ಕೂಡ ಮಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಜತೆಗೂಡಿದ ಮಿಶೆಲ್- ರಚಿನ್ ರವೀಂದ್ರ ಜೋಡಿ ಉತ್ತಮವಾಗಿ ಆಡುತ್ತಾ ರನ್ ರೇಟ್ ಏರಿಸುವಲ್ಲಿ ಗಮನ ಹರಿಸಿದರು. 127 ಎಸೆತಗಳಲ್ಲಿ 5 ಸಿಕ್ಸರ್, 9 ಬೌಂಡರಿ ಮೂಲಕ 130 ರನ್ ಗಳಿಸಿದ ಮಿಶೆಲ್ ತಂಡವನ್ನು ಆಧರಿಸಿದರು. ರವೀಂದ್ರ 75 ರನ್ ಗಳಿಸಿದರು. 50 ಓವರ್ ಗಳಲ್ಲಿ ನ್ಯೂಜಿಲೆಂಡ್ 273ಕ್ಕೆ ಆಲ್ ಔಟ್ ಆಗಿತು. ಮಹಮ್ಮದ್ ಶಮಿ 5 ವಿಕೆಟ್ ಪಡೆದರು.
274 ರನ್ ಗಳ ಸವಾಲನ್ನು ಬೆನ್ನತ್ತಿದ್ದ ಭಾರತ ಉತ್ತಮ ಆರಂಭ ಕಂಡಿತು. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ತನ್ನ ಸ್ಪೋಟಕ ಆಟಕ್ಕೆ ಆದ್ಯತೆ ನೀಡಿದರು. 40 ಎಸೆತಗಳಲ್ಲಿ ತಲಾ 4 ಸಿಕ್ಸರ್ ಮತ್ತು ಬೌಂಡರಿ ಮೂಲಕ 46 ರನ್ ಗಳಿಸಿದ ರೋಹಿತ್ ಅವಸರ ಮಾಡುವ ಮೂಲಕ ವೇಗಿ ಫೆರ್ಗ್ಯುಸನ್ ಗೆ ವಿಕೆಟ್ ಒಪ್ಪಿಸಿದರು. ಕೆಲವೇ ನಿಮಿಷಗಳ ನಂತರ ಶುಭ್ಮನ್ ಗಿಲ್ 26 ಗಳಿಸಿ ಔಟ್ ಆದರು. ನಂತರ ಜತೆಗೂಡಿದ ಕೊಹ್ಲಿ-ಐಯ್ಯರ್ ಜೋಡಿ ತಂಡವನ್ನು ಆಧರಿಸುವಷ್ಟರಲ್ಲಿ ಶ್ರೇಯಸ್ ಐಯ್ಯರ್ 33ಕ್ಕೆ ನಿರ್ಗಮಿಸಿದರು. ಮತ್ತೊಮ್ಮೆ ಲಯ ಕಂಡುಕೊಂಡ ಕೊಹ್ಲಿ- ಕೆ.ಎಲ್. ರಾಹುಲ್ ಜೋಡಿ ರನ್ ಅಂತರವನ್ನು ಕಡಿಮೆಗೊಳಿವತ್ತ ಗಮನ ಹರಿಸಿದರು. 27 ರನ್ ಗಳಿಸಿದ ರಾಹುಲ್ ನಿರ್ಗಮಿಸಿದ ನಂತರ ಆಗಮಿಸಿದ ಸೂರ್ಯಕುಮಾರ್ ಯಾದವ್ ಬೇಗನೇ ಔಟಾದರು. ನಂತರ ಆಗಮಿಸಿದ ರವೀಂದ್ರ ಜಡೇಜಾ ಕೊಹ್ಲಿಗೆ ಸಾಥ್ ನೀಡಿದರು.
ಅತ್ಯುತ್ತಮವಾಗಿ ಆಡಿದ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ ಏಕದಿನ ಶತಕದ ದಾಖಲೆಯನ್ನು ಸಮಗೊಳಿಸುವಲ್ಲಿ ವಿಫಲರಾದರು. 104 ಎಸೆತಗಳನ್ನು ಎದುರಿಸಿದ ಕೊಹ್ಲಿ 95 ರನ್ ಗಳಿಸಿ ಗೆಲ್ಲಲು 5 ರನ್ ಇರುವಾಗಲೇ ನರ್ವಸ್ ನೈಂಟಿಗೆ ಔಟಾದರು. ಗೆಲುವಿನ ರನ್ ಬಾರಿಸಿದ ಜಡೇಜಾ ಅಜೇಯ 39 ರನ್ ಗಳಿಸಿದರು. ಭಾರತ 48 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಅಂಕಪಟ್ಟಿಯಲ್ಲಿ ಭಾರತ 5 ಗೆಲುವಿನೊಂದಿಗೆ 10 ಅಂಕ ಪಡೆದು ಅಗ್ರಸ್ಥಾನಕ್ಕೆ ಮರಳಿದೆ. ಆಕರ್ಷಕ ಬೌಲಿಂಗ್ ನಡೆಸಿದ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು