ಟೆಲ್ ಅವಿವ್ (ಇಸ್ರೇಲ್), ಅ.7: ಇಸ್ರೇಲ್ ಮೇಲೆ ಶನಿವಾರ ಮುಂಜಾನೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಆರೋಗ್ಯ ಸಚಿವಾಲಯದ ಪ್ರಕಾರ, ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡ ಸುಮಾರು 908 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಸ್ರೇಲಿ ಪಡೆಗಳು ಗಾಝಾ ಗಡಿಯ ಎಲ್ಲಾ ಪಟ್ಟಣಗಳನ್ನು ತಲುಪಿವೆ ಎಂದು ಇಸ್ರೇಲ್ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಕುರಿತು ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಯುದ್ಧದಲ್ಲಿದೆ ಮತ್ತು ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಅಮೆರಿಕ ಬೆಂಬಲ: ಇಸ್ರೇಲ್ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಭಯೋತ್ಪಾದಕರ ವಿರುದ್ಧ ಹೋರಾಡಲು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ.
ಎರಡು ವಿಮಾನಗಳ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ: ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿಯ ಹಿನ್ನೆಲೆಯಲ್ಲಿ ನವದೆಹಲಿಯಿಂದ ಟೆಲ್ ಅವೀವ್ ಗೆ ತೆರಳುವ ವಿಮಾನ ಮತ್ತು ಟೆಲ್ ಅವೀವ್ ನಿಂದ ನವದೆಹಲಿಗೆ ಹಿಂದಿರುಗುವ ವಿಮಾನವನ್ನು ರದ್ದುಪಡಿಸಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.