ಕರಾವಳಿ ಎಂದ ತಕ್ಷಣ ಕೇವಲ ನದಿ ಸಮುದ್ರವೆಂಬ ಪ್ರಾಕೃತಿಕ ಸೊಬಗಷ್ಟೇ ಅಲ್ಲ, ಒಂದೆಡೆ ಸಮುದ್ರದ ಪ್ರಾಕೃತಿಕ ಜಗತ್ತು ಇನ್ನೊಂದೆಡೆ ಕಾಡು ಬೆಟ್ಟ ಗುಡ್ಡ ಇಲ್ಲಿನ ಕಂಬಳ, ದೈವಾರಾಧನೆ ಇಲ್ಲಿನ ಭಾಷೆ ಇವೆಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತದೆ.
ದಟ್ಟಾರಣ್ಯದ ನಡುವೆ ಕರಾವಳಿಯ ಜನರ ಸಂಘರ್ಷದ ಬದುಕು, ನಂಬಿಕೆ, ದೈವಾರಾಧನೆ, ಕರಾವಳಿಯ ಸಂಸ್ಕೃತಿಯ ಒಟ್ಟಾರೆ ಚಿತ್ರಣವೇ ‘ಕಾಂತಾರ’ ಒಕ್ಕಲೆಬ್ಬಿಸುವಿಕೆ, ಅರಣ್ಯ ಭೂಮಿ ಒತ್ತುವರಿ, ಕಾಡಿನ ಲೂಟಿ, ಅರಣ್ಯಾಧಿಕಾರಿಗಳೊಂದಿಗೆ ಜನರ ಸಂಘರ್ಷದ ಬದುಕನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಆರಂಭದಲ್ಲಿ ಕಂಬಳ ವೈಭವ ಕಣ್ಣಿಗೆ ಕಟ್ಟುವಂತೆ ಅದ್ಬುತವಾಗಿ ತೋರಿಸಲಾಗಿದೆ. ಇನ್ನುಳಿದಂತೆ ನಾಯಕಿಯ ಪ್ರೀತಿಯಲ್ಲಿ ಬೀಳುವ ಶಿವ ಹಾಗೂ ಅವರಿಬ್ಬರ ನಡುವೆ ನಡೆಯುವ ಸಲ್ಲಾಪ, ಹಾಗೂ ಮಧ್ಯದಲ್ಲಿ ಬರುವ ‘ಸಿಂಗಾರ ಸಿರಿಯ’ ಅದ್ಬುತ ಸಾಹಿತ್ಯ, ಸಂಗೀತದೊಂದಿಗೆ ಕಚಗುಳಿ ಇಡುವ ಹಾಡು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ.
ಕರಾವಳಿ ಕುಂದಾಪುರ ಹುಡುಗಿಯಾಗಿ ನಾಯಕಿ ಸಪ್ತಮಿ ಗೌಡ ಸುಂದರವಾಗಿ ಅಭಿನಯಿಸಿದ್ದಾರೆ. ಹಾಗೆಯೇ ಕಾಡಿನಲ್ಲಿ ರಿಷಬ್ ಶೆಟ್ಟರ ಕಾದಾಟದ ಸಾಹಸದ ದೃಶ್ಯಗಳ ಅದ್ಬುತವಾಗಿ ತೋರಿಸಲಾಗಿದೆ. ರಿಷಬ್ ಶೆಟ್ಟಿಯವರ ಕೊನೆಯ 20 ನಿಮಿಷದ ದೃಶ್ಯಗಳು ಪ್ರೇಕ್ಷಕರ ಮೈ ನವಿರೇಳಿಸುತ್ತದೆ.
ಭೂತ ಕೋಲ ಕಟ್ಟಿಕೊಂಡ ರಿಷಬ್ ಶೆಟ್ಟರ ಮೈಮೇಲೆ ಆವೇಶ ಬಂದಂತೆ ನೈಜ ಅಭಿನಯ ಕಣ್ಣಿಗೆ ಕಟ್ಟುವಂತಿದೆ. ಇಲ್ಲಿನ ಜನರ ನಂಬಿಕೆ, ದೈವ ನುಡಿ ಭೂತ ಕೋಲ ದೃಶ್ಯಗಳು ನೋಡುವ ಪ್ರೇಕ್ಷಕರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ. ಊರಿನ ಜನಕ್ಕಾಗಿ ಅಧಿಕಾರಿಗಳೊಂದಿಗೆ ಕಾದಾಟಕ್ಕಿಳಿಯುವ ಶಿವ(ರಿಷಬ್ ಶೆಟ್ಟಿ) ಕುತಂತ್ರಿ ರಾಜಕಾರಣಿಯ ಪಾತ್ರದಲ್ಲಿ ನಟ ಅಚ್ಯುತ್ ಹಾಗೂ ಪ್ರಮೋದ್ ಶೆಟ್ಟಿ ಹಾಗೂ ಇವರೆಲ್ಲರ ನಡುವೆ ಯಾರಿಗೂ ಜಗ್ಗದ ಖಡಕ್ ಅರಣ್ಯಾಧಿಕಾರಿಗಳ ಪಾತ್ರದಲ್ಲಿ ನಟಿಸಿರುವ ನಟ ಕಿಶೋರ್ ಅವರ ಅಭಿನಯ ಅದ್ಬುತವಾಗಿ ಮೂಡಿಬಂದಿದೆ.
ಕುತಂತ್ರಿ ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್ ಅವರ ಅಭಿನಯ ಇಷ್ಟವಾಗುತ್ತದೆ. ಶಿವನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ಇಷ್ಟವಾಗುತ್ತರೆ. ಇನ್ನುಳಿದಂತೆ ಸ್ಥಳೀಯ ನಟರಾದ ರಘು ಪಾಂಡೇಶ್ವರ, ಪ್ರಭಾಕರ್ ಕುಂದರ್ ಹಾಗೂ ಯೋಗೀಶ್ ಬಂಕೇಶ್ವರ ಇವರ ಪಾತ್ರ ಗಮನ ಸೆಳೆಯುತ್ತದೆ.
ನವೀನ್ ಡಿ ಪಡಿಲ್, ಪ್ರಕಾಶ್ ತಮ್ಮಿನಾಡು, ದೀಪಕ್ ರೈ ಪಾಣಾಜೆ ಸಂದರ್ಭಕ್ಕನುಗುಣವಾಗಿ ನಗಿಸಿಕೊಂಡು ಸಾಗುತ್ತಾರೆ. ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಅದ್ಬುತ.
ಇಷ್ಟೆಲ್ಲಾ ಸಾಹಸ ಮಾಡಿರುವ ನಿರ್ದೇಶಕರು ಕುಂದಗನ್ನಡವನ್ನು ಒಂದಷ್ಟು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ಒಟ್ಟಾರೆಯಾಗಿ ಕಾಂತಾರ ಎಂಬ ದಂತಕಥೆ ಕರಾವಳಿಯ ನಂಬಿಕೆ ಹಾಗೂ ಸಂಸ್ಕೃತಿಯ ಅನಾವರಣ ಎಂದರೂ ತಪ್ಪಾಗಲಾರದು.