Sunday, January 19, 2025
Sunday, January 19, 2025

ಮಾವ್ಲಿನ್ ನೋಂಗ್- ಏಷ್ಯಾದ ಸ್ವಚ್ಛ ಹಳ್ಳಿ

ಮಾವ್ಲಿನ್ ನೋಂಗ್- ಏಷ್ಯಾದ ಸ್ವಚ್ಛ ಹಳ್ಳಿ

Date:

ಪ್ರಕೃತಿಯೊಂದಿಗೆ ಅನುಸಂಧಾನ ನಡೆಸುವ ಇಲ್ಲಿಯ ನಿವಾಸಿಗಳೇ ಈ ಹಳ್ಳಿಯ ಆಸ್ತಿ. ಪ್ರಾಕೃತಿಕ ವಿಸ್ಮಯಗಳಿಂದ ಕೂಡಿದ ದೇವರ ಉದ್ಯಾನವನ ಎಂದು ಕರೆಯಲ್ಪಡುವ ಈ ಹಳ್ಳಿಯು ಹಲವಾರು ಆಯಾಮಗಳಿಂದ ವಿಶ್ವದಾದ್ಯಂತ ಅಧ್ಯಯನಕ್ಕೆ ಕೇಂದ್ರಬಿಂದುವಾಗಿದೆ. ಇಲ್ಲಿಯ ಜನರು ಪ್ರಕೃತಿಯನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಕೌಶಲ್ಯ ಹಾಗೂ ಅದಮ್ಯ ಇಚ್ಛಾಶಕ್ತಿಯನ್ನು ಪರಿಣಾಮಕಾರಿಯಾಗಿ ಮಿಶ್ರಣ ಮಾಡಿದ ಫಲದಿಂದಲೇ ಮರದ ಬೇರಿನಿಂದ ವಿಸ್ಮಯಕಾರಿಯಾದ ಸೇತುವೆಯ ನಿರ್ಮಾಣವು ಸಾವಿರಾರು ವರ್ಷಗಳ ಹಿಂದೆಯೇ ನಡೆದಿದೆ. ಈ ಹಳ್ಳಿಯ ಬಗ್ಗೆ ಟ್ರೈಲರ್ ಮಾತ್ರ ಬಿಟ್ಟಿದ್ದೇನೆ. ಈ ಹಳ್ಳಿಯನ್ನು ಒಮ್ಮೆ ಸುತ್ತಿ ಬರೋಣ.

ಮೇಘಾಲಯದ ರಾಜಧಾನಿ ಶಿಲ್ಲಾಂಗಿನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಮಾವ್ಲಿನ್ ನೋಂಗ್ ಎಂಬ ಪ್ರಾಕೃತಿಕ ಸಂಪನ್ಮೂಲಗಳ ತವರೂರಾಗಿರುವ ಪುಟ್ಟ ಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲಿ ಅಂದರೆ ಪೂರ್ವ ಖಾಸಿ ಪರ್ವತ ಶ್ರೇಣಿಯಿಂದ ಸುತ್ತುವರಿದ ಪ್ರದೇಶದಲ್ಲಿ ವರ್ಣರಂಜಿತ ವಾತಾವರಣವು ನಿಮ್ಮ ಪ್ರವಾಸಕ್ಕೆ ಮುನ್ನುಡಿ ಬರೆಯುತ್ತದೆ. ಸುತ್ತಲೂ ದಟ್ಟವಾದ ಅರಣ್ಯಗಳಿಂದ ಕೂಡಿದ ಪ್ರದೇಶ, ಎಷ್ಟೋ ಕಿ.ಮೀ. ದೂರದಿಂದ ಹೊರಬರುವ ಪುಟ್ಟ ಪತಂಗಗಳ ಗಟ್ಟಿಯಾದ ಕೂಗನ್ನು ಕೇಳಿದ ನಂತರ ಪ್ರವಾಸಿಗರಿಗೆ ಮನದಟ್ಟಾಗುವ ವಿಚಾರ ಈ ಹಳ್ಳಿಗೂ ಅನ್ವಯವಾಗುತ್ತದೆ, ಅದು ಏನೆಂದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಈ ಗಾದೆಯನ್ನು ಪ್ರತಿನಿತ್ಯ ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಈ ಹಳ್ಳಿಗೂ ಮೇಲಿನ ಗಾದೆಮಾತಿಗೂ ಎತ್ತಣ ಸಂಬಂಧವಯ್ಯಾ? ಕೇವಲ 90 ಮನೆಗಳು, 500 ಜನಸಂಖ್ಯೆಯಿರುವ ಶೇ. 95 ರಷ್ಟು ಸಾಕ್ಷರತೆಯನ್ನು ಹೊಂದಿರುವ ಬಯಲುಶೌಚ ಮುಕ್ತವಾಗಿ ಸ್ವಚ್ಛತೆಯಿಂದ ಕಂಗೊಳಿಸುತ್ತಿರುವ ಮಾವ್ಲಿನ್ ನೋಂಗ್ ಎಂಬ ಹಳ್ಳಿಯು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಗೆ ಒಳ್ಳೆಯ ಉದಾಹರಣೆಯಾಗಿದೆ. ಖಾಸಿ ಬುಡಕಟ್ಟು ಜನಾಂಗದವರೇ ಹೆಚ್ಚಿರುವ ಈ ಹಳ್ಳಿಯು ಭಾರತ-ಬಾಂಗ್ಲಾದೇಶ ಗಡಿಗೆ ತಾಗಿಕೊಂಡಿದೆ.

ಸ್ವಚ್ಛತೆ ಹಾಗೂ ಪರಿಸರ ಕಾಳಜಿ:

ಬಹಳ ವಿಭಿನ್ನತೆಯಿಂದ ಕೂಡಿದ ಈ ಹಳ್ಳಿಯ ಸ್ವಚ್ಛತಾ ವ್ಯವಸ್ಥೆಯು ಜನರಿಂದ ಜನರಿಗಾಗಿ ಎಂಬಂತಿದೆ. ಈ ಪುಟಾಣಿ ಹಳ್ಳಿಯ ಪ್ರತಿಯೊಂದು ಮನೆಯಿಂದ ಇಂತಿಷ್ಟು ಮಂದಿ ಪ್ರತಿನಿತ್ಯವೂ ಹಳ್ಳಿಯ ಸ್ವಚ್ಛತೆಯನ್ನು ಎತ್ತಿ ಹಿಡಿಯುವಲ್ಲಿ ಶ್ರಮಿಸುತ್ತಾರೆ. ರಸ್ತೆ ಬದಿಯಲ್ಲಿ ಯಾವುದೇ ಕಸ ಕಡ್ಡಿಯು ಇರದ ಹಾಗೆ ಕಾಳಜಿಯನ್ನು ವಹಿಸುವ ಜನರು ಸಮುದಾಯ ಆಧಾರಿತ ಸ್ವಚ್ಛತಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.

ಈ ಹಳ್ಳಿಯ ಬಹುತೇಕ ಕಡೆಗಳಲ್ಲಿ ಬಿದಿರಿನಿಂದ ನಿರ್ಮಿಸಿದ ತ್ರಿಕೋನಾಕಾರದ ಅತ್ಯಾಕರ್ಷಕ ಕಸದ ಬುಟ್ಟಿಗಳನ್ನು ಪ್ರತಿ 50 ಅಡಿಗಳ ಅಂತರದಲ್ಲಿ ಇರಿಸಲಾಗಿದೆ. ಇದರಿಂದ ಅವರಲ್ಲಿರುವ ಪರಿಸರ ಕಾಳಜಿ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸುವ ಪರಿಕಲ್ಪನೆ ಎದ್ದು ಕಾಣುತ್ತದೆ. ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವ ಹಳ್ಳಿಯ ಜನ ಇದರಿಂದ ಗೊಬ್ಬರವನ್ನು ತಯಾರಿಸಿ ಕೃಷಿ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ಅಡಿಕೆ ಕೃಷಿಯು ಈ ಹಳ್ಳಿಯ ಆದಾಯಕ್ಕೆ ಪ್ರವಾಸೋದ್ಯಮದ ಬಳಿಕ ಇರುವ ಇನ್ನೊಂದು ಮೂಲ. ಕಸದಿಂದ ರಸ ಇವರ ದಿನಚರಿಯಲ್ಲಿ ಹಾಸುಹೊಕ್ಕಾಗಿದೆ. ಪ್ರತಿಯೊಬ್ಬರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಹಳ್ಳಿಯವರೇ ಕಾಳಜಿ ವಹಿಸುತ್ತಾರೆ. ಪ್ರತಿ ವಾರಾಂತ್ಯದಲ್ಲಿ ಮಕ್ಕಳೂ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಹಳ್ಳಿಯಲ್ಲಿ ಧೂಮಪಾನ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಹಳ್ಳಿಯ ಜನರೇ ಮುಂದಾಳತ್ವವನ್ನು ವಹಿಸಿ ನಿಷೇಧಿಸಿದ್ದಾರೆ.

ಪ್ರವಾಸಿಗರು ಕೂಡ ಈ ನಿಯಮಗಳನ್ನು ಪಾಲಿಸುವಂತೆ ಸಮುದಾಯದ ಮಂದಿ ಆಗ್ರಹಿಸಿ ಸೂಕ್ತ ರೀತಿಯಲ್ಲಿ ತಮ್ಮ ನಿಯಮಗಳಿಗೆ ಧಕ್ಕೆಯಾಗದಂತೆ ಫಾಲೋ ಅಪ್ ಮಾಡುತ್ತಾರೆ. ಮಳೆ ನೀರು ಕೊಯ್ಲನ್ನು ಉತ್ತೇಜಿಸುವ ಈ ಹಳ್ಳಿಯವರು ಪ್ರತಿಯೊಂದು ಮನೆಯಲ್ಲಿಯೂ ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಳವಡಿಸಿರುತ್ತಾರೆ. ಇದರ ದೀರ್ಘಕಾಲಿಕ ಉಪಯೋಗಗಳ ಬಗ್ಗೆ ಪ್ರವಾಸಿಗರಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಇಲ್ಲಿಯ ಜನರು ಮನೆಯ ವಿನ್ಯಾಸದ ಆಧಾರದಲ್ಲ್ಲಿ ಗೌರವನ್ನು ನೀಡುವ ಬದಲು ಮನೆಯ ಹೊರಗಡೆ ಇರುವ ಸ್ವಚ್ಛತೆಯನ್ನು ಪರಿಗಣಿಸಿ ಗೌರವ ನೀಡುತ್ತಾರೆ. ಸುಮಾರು 5000 ಅಡಿಗಳಷ್ಟು ಎತ್ತರವಿರುವ ಈ ಹಳ್ಳಿಯಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳು ಕಾಣಿಸಿಕೊಂಡಿಲ್ಲ. ಜನರ ಸಾಂಘಿಕ ಪ್ರಯತ್ನದ ಪರಿಣಾಮದಿಂದ ಖ್ಯಾತ ಪ್ರವಾಸೋದ್ಯಮ ನಿಯತಕಾಲಿಕೆ ಡಿಸ್ಕವರ್ ಇಂಡಿಯಾ, ಏಷ್ಯಾದ ಅತ್ಯಂತ ಸ್ವಚ್ಛ ಹಳ್ಳಿ ಎಂಬ ಬಿರುದನ್ನು ಮಾವ್ಲಿನ್ ನೋಂಗ್ ಗೆ ನೀಡಿತು. ಸ್ವಚ್ಛತೆ ಹಾಗೂ ಪರಿಸರ ಕಾಳಜಿಯ ಬಗೆಗೆ ಈ ಹಳ್ಳಿಯ ಜನರಲ್ಲಿ ಇರುವ ನಾಗರಿಕ ಪ್ರಜ್ಞೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

ಜೀವಂತ ಬೇರಿನ ಸೇತುವೆ:

ಸುಮಾರು 1100 ವರ್ಷಗಳ ಹಿಂದೆ ಮಾವ್ಲಿನ್ ನೋಂಗ್ ಜನರು ಯಾವುದೇ ತಂತ್ರಜ್ಞಾನದ ಮೊರೆ ಹೋಗದೇ ತಮ್ಮ ಬಳಿ ಇದ್ದ ಜ್ಞಾನ ಭಂಡಾರವನ್ನು, ಅದಮ್ಯ ಉತ್ಸಾಹ ಮತ್ತು ಕೌಶಲದ ಪರಿಣಾಮಕಾರಿ ಮಿಶ್ರಣವನ್ನು ಮಾಡಿಕೊಂಡು ನೈಸರ್ಗಿಕವಾಗಿಯೇ ನಿರ್ಮಿಸಿದ ಸೇತುವೆ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ನದಿಯ ಅಕ್ಕಪಕ್ಕ ಬೆಳೆದಿರುವ ಬ್ರ‍ಹತ್ ರಬ್ಬರ್ ಮರಗಳ ಬೇರುಗಳನ್ನು ಅಚ್ಚುಕಟ್ಟಾಗಿ ನೇಯ್ದು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಿ ತಮ್ಮ ಕೈಚಳಕದಿಂದ ನಿರ್ಮಿಸಿದ ಈ ಸೇತುವೆಯ ರಹಸ್ಯವನ್ನು ಬೇಧಿಸಲು ಹಲವಾರು ಸಂಶೋಧನಾತ್ಮಕ ಅಧ್ಯಯನಗಳು ನಡೆಯುತ್ತಿವೆ.

ಈ ಸೇತುವೆಯ ಕೇಂದ್ರಬಿಂದುವಾಗಿರುವ ಬ್ರಹತ್ ರಬ್ಬರ್ ಮರಗಳನ್ನು ಪ್ರತಿ ತಲೆಮಾರಿನವರು ಸಂರಕ್ಷಿಸಿ ಸೇತುವೆಯನ್ನು ಮತ್ತಷ್ಟು ಬಲಿಷ್ಠವನ್ನಾಗಿಸುತ್ತಿದ್ದಾರೆ. ಈ ಸೇತುವೆಯ ಸಹಾಯದಿಂದಲೇ ಇಲ್ಲಿನ ಜನರು ತಮ್ಮ ವ್ಯಾಪಾರು ವಹಿವಾಟುಗಳನ್ನು ಅಕ್ಕಪಕ್ಕದ ಹಳ್ಳಿಗಳಿಗೆ ವಿಸ್ತರಿಸಿಕೊಂಡಿದ್ದಾರೆ. ಮೇಘಾಲಯದ ಇತರ ಪ್ರದೇಶಗಳಿಗೂ ಪ್ರಾಕೃತಿಕ ಸೇತುವೆಗಳನ್ನು ನಿರ್ಮಿಸಲು ಮಾವ್ಲಿನ್ ನೋಂಗಿನ ಬೇರಿನ ಸೇತುವೆ ಸ್ಪೂರ್ತಿಯಾಗಿದೆ. ಈ ಸೇತುವೆಯು ಅಂದಿನ ತಲೆಮಾರಿನವರ ದೂರದೃಷ್ಟಿ ಹಾಗೂ ಮುಂದಿನ ತಲೆಮಾರಿನವರ ದೀರ್ಘಕಾಲಿಕ ಬಳಕೆಗೆ ಅವರಲ್ಲಿ ಅಡಗಿದ್ದ ತ್ಯಾಗ ಹಾಗೂ ಅರ್ಪಣ ಮನೋಭಾವ ಶ್ಲಾಘನೀಯವಾಗಿದೆ ಎಂದು ಹಲವಾರು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮಾತೃಪ್ರಧಾನ ವ್ಯವಸ್ಥೆ:

ಬಹುತೇಕ ಸಮಾಜಗಳಲ್ಲಿ ಪಿತ್ರಪ್ರಧಾನ ವ್ಯವಸ್ಥೆಯಿದೆ. ಇದನ್ನು ಪೇಟ್ರಿಯಾರ್ಕಿ ಎಂದು ಕರೆಯುತ್ತೇವೆ. ಆದರೆ ಖಾಸಿ ಜನಾಂಗದವರ ಬಾಹುಳ್ಯವಿರುವ ಮಾವ್ಲಿನ್ ನೋಂಗ್ ನಲ್ಲಿ ಆಸ್ತಿಯು ತಾಯಿಯಿಂದ ತನ್ನ ಕಿರಿಯ ಮಗಳಿಗೆ ವರ್ಗಾವಣೆಯಾಗುತ್ತದೆ. ಇಷ್ಟು ಮಾತ್ರವಲ್ಲದೇ ಮಗಳು ತಾಯಿಯ ಕೌಟುಂಬಿಕ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿಯ ಆದೇಶವೇ ಅಂತಿಮವಾಗಿದೆ. ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿಯೂ ತಾಯಿಯು ಮುಖ್ಯ ಭೂಮಿಕೆಯಲ್ಲಿರುತ್ತಾಳೆ. ಮದುವೆಯಾದ ಬಳಿಕ ಪುರುಷರು ಅತ್ತೆಯ ಮನೆಯಲ್ಲಿಯೇ ಬಿಡಾರ ಹೂಡಬೇಕು.

ಹೇಗಿರಲಿದೆ ಅನುಭವ:

ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ಈ ಹಳ್ಳಿಯ ಭೌಗೋಳಿಕ ವಿನ್ಯಾಸವು ಅನೇಕ ವಿಸ್ಮಯಕಾರಿ ಅನುಭವಗಳನ್ನು ನೀಡಲಿದೆ. ಪ್ರಕ್ರತಿಯ ಮಡಿಲಿನಲ್ಲಿ ಕಳೆದು ಹೋದ ಅನುಭವವು ಪ್ರತಿಯೊಬ್ಬ ಪ್ರವಾಸಿಗನಿಗೂ ಉಂಟಾಗುವುದು ಈ ಹಳ್ಳಿಯ ವಿಶೇಷತೆ. ದಟ್ಟವಾದ ಅರಣ್ಯದಲ್ಲಿ ಹಕ್ಕಿಗಳ ಗೂಡಿನಂತಿರುವ ಬಿದಿರು ಹಾಗೂ ಹುಲ್ಲಿನಿಂದ ನಿರ್ಮಿಸಿರುವ ಎತ್ತರದ ಮನೆಗಳು, ಮರದಿಂದಲೇ ನಿರ್ಮಿಸಿರುವ ಹೋಂ ಸ್ಟೇಗಳು ರೋಚಕವಾದ ಅನುಭವಗಳನ್ನು ನೀಡುವಲ್ಲಿ ಎರಡು ಮಾತಿಲ್ಲ. ಇಲ್ಲಿ ನಿಂತುಕೊಂಡು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಬಾಂಗ್ಲಾದೇಶವನ್ನೂ ವೀಕ್ಷಿಸಬಹುದು. ತಂಪಾದ ಗಾಳಿ, ಮನಮೋಹಕ ವಾತಾವರಣ, ಸಾವಿರಾರು ಹಕ್ಕಿಗಳ ಕಲರವ ಮತ್ತು ಸರಣಿ ಜಲಪಾತಗಳು ನಿಮ್ಮ ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುವುದು. ಇಲ್ಲೇ ಪಕ್ಕದಲ್ಲಿರುವ ಒಂಟಿಯಾದ ಬ್ರಹತ್ ಗಾತ್ರದ ಬಂಡೆಗಲ್ಲು (ಇದನ್ನು ಮಾವ್ ರಿಂಗ್ಕೀವ್ ಶರಾತಿಯಾ ಎಂದು ಕರೆಯುತ್ತಾರೆ) ಇನ್ನೇನು ಬೀಳಲಿದೆ ಎಂಬಂತೆ ನಿಂತಿದೆ. ಇದು ಹಳ್ಳಿಯ ಮತ್ತೊಂದು ವಿಸ್ಮಯ ಮತ್ತು ಆಕರ್ಷಣೀಯ ಸ್ಥಳ. ಸಣ್ಣಪುಟ್ಟ ಅಂಗಡಿಗಳಲ್ಲಿ ಬುಡಕಟ್ಟು ಜನರೇ ನಿರ್ಮಿಸಿರುವ ಅತ್ಯಾಕರ್ಷಕ ಕರಕುಶಲ ವಸ್ತುಗಳು ಲಬ್ಯವಿದೆ. ಮರುಬಳಕೆಗೆ ಇಲ್ಲಿಯ ಜನರು ಆದ್ಯತೆಯನ್ನು ನೀಡುತ್ತಾರೆ.

ಹೇಗೆ ತಲುಪುವುದು?

ಮೇಘಾಲಯದ ರಾಜಧಾನಿ ಶಿಲ್ಲಾಂಗಿಗೆ ಬಹುತೇಕ ಕಡೆಗಳಿಂದ ವೈಮಾನಿಕ ಸಂಪರ್ಕಗಳಿವೆ. ಇಲ್ಲಿಂದ 90 ಕಿ.ಮೀ. ದೂರದಲ್ಲಿರುವ ಮಾವ್ಲಿನ್ ನೋಂಗ್ ಹಳ್ಳಿಯನ್ನು ರಸ್ತೆಯ ಮೂಲಕ (ಸುಮಾರು ಎರಡೂವರೆ ಗಂಟೆಗಳ ಪ್ರಯಾಣ) ಟ್ಯಾಕ್ಸಿ ಅಥವಾ ಇತರ ವಾಹನಗಳ ಮೂಲಕ ತಲುಪಬಹುದು. ಚಿರಾಪೂಂಜಿಯಿಂದ 92 ಕಿ.ಮೀ. ದೂರದಲ್ಲಿದೆ ಮಾವ್ಲಿನ್ ನೋಂಗ್. ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡುಲೈ ಅಂತರಾಷ್ಟ್ರ‍ೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಸ್ತೆಯ ಮೂಲಕ ಶಿಲ್ಲಾಂಗಿಗೆ ಆಗಮಿಸಿ ಬಳಿಕ ಮಾವ್ಲಿನ್ ನೋಂಗ್ ತಲುಪಬಹುದು, ಅಂದರೆ ಗುವಾಹಟಿಯಿಂದ ಒಟ್ಟು 188 ಕಿ.ಮೀ ಪ್ರಯಾಣಿಸಬೇಕು. ನೇರವಾಗಿ ಮಾವ್ಲಿನ್ ನೋಂಗ್ ಯಾವುದೇ ರೈಲು ಸಂಪರ್ಕ ಇರದ ಕಾರಣ ಹತ್ತಿರದ ರೈಲು ನಿಲ್ದಾಣ ಗುವಾಹಟಿಯಾಗಿದ್ದು ಅಲ್ಲಿಂದ ರಸ್ತೆಯ ಮೂಲಕವೇ ಮಾವ್ಲಿನ್ ನೋಂಗ್ ಸಂಪರ್ಕಿಸಬೇಕು. ಅಕ್ಟೋಬರ್ ತಿಂಗಳಿಂದ ಆರಂಭಗೊಂಡು ಮೇ ತಿಂಗಳ ಅಂತ್ಯದವರೆಗೆ ಪ್ರವಾಸಕ್ಕೆ ಅನುಕೂಲವಾಗಿರುವ ಸಮಯ. ಹಾಗಾದರೆ ಮುಂದೆ ಅವಕಾಶ ಸಿಕ್ಕರೆ ಈಶಾನ್ಯ ಭಾರತದ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಿ.

– ಗಣೇಶ್ ಪ್ರಸಾದ್ ಜಿ. ನಾಯಕ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!