2023ರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಸ್ಥಿತಿಗತಿಯನ್ನು ನೇೂಡಿದರೆ ಕುಟುಂಬ ಆಧರಿತ ಜೆಡಿಎಸ್ ಪಕ್ಷ ಸೇೂತು ದಿಕ್ಕು ತಪ್ಪಿದ ಅಸಹಾಯಕ ಅತಂತ್ರ ಸ್ಥಿತಿಯಲ್ಲಿ ಬಂದು ನಿಂತಿದೆ ಅನ್ನುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡೆ ನುಡಿಯಿಂದ ಇನ್ನಷ್ಟು ಸ್ವಷ್ಟವಾಗುತ್ತಿದೆ. ಮಾತ್ರವಲ್ಲ ಪಕ್ಷ ಮುನ್ನಡೆಸುವಲ್ಲಿ ಕುಟುಂಬದೊಳಗೆ ಎಲ್ಲವೂ ತಾಳ ಮೇಳ ತಪ್ಪಿದೆ ಅನ್ನುವುದು ಎಚ್.ಡಿ.ರೇವಣ್ಣ ಅವರು ಎಸೆಂಬ್ಲಿಯೊಳಗೆ ಕುಮಾರಸ್ವಾಮಿ ಎದುರೇ ಸಿದ್ದರಾಮಯ್ಯ ನವರನ್ನು ಹಾಡಿ ಹೊಗಳಿದಂತು ಜೆಡಿಎಸ್ ಒಳಗೆ ಸಾಕಷ್ಟು ಊಹಾಪೇೂಹಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯ. ತಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಕಂಡ ಜೆಡಿಎಸ್ ನ ಪಿತಾಮಹ ದೇವೇಗೌಡರಂತೂ ಮಾತುಕತೆ ಇಲ್ಲದೆ ಮೌನಕ್ಕೆ ಶರಣಾಗಿರುವುದು ಕುಟುಂಬದ ಒಳಗೂ ಪಕ್ಷದ ಕಾರ್ಯಕರ್ತರಲ್ಲೂ ಅಸಹಾಯಕ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ.
ರಾಜ್ಯದಲ್ಲಿ ಮುಳುಗುತ್ತಿರುವ ಜೆಡಿಎಸ್ ಹಡಗಿನಿಂದ ಯಾರೆಲ್ಲ ಈಜಿ ದಡ ಸೇರಬಹುದು ಅನ್ನುವುದು ರಾಜಕೀಯದಲ್ಲಿ ಅತ್ಯಂತ ಕುತೂಹಲಕಾರಿ ಪ್ರಸಂಗ. ಅದರಲ್ಲೂ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಮ್ ಸಾಹೇಬ್ರ ಬಾಯಿಗಂತೂ ತಾತ್ಕಾಲಿಕವಾಗಿ ಬೀಗ ಬಿದ್ದಿದೆ ಅನ್ನುವುದು ಈಗಲೇ ಗೇೂಚರವಾಗುತ್ತಿದೆ. ಈ ಹಡಗಿನಿಂದ ಬಿದ್ದು ನೀರಿನಲ್ಲಿ ಮುಳುಗುತ್ತಿರುವರ ಸಹಾಯಕ್ಕೆಂದೇ ರಾಜ್ಯದಲ್ಲಿ ರಾಷ್ಟ್ರಮಟ್ಟದ ಎರಡು ಹಡಗುಗಳು ಸಜ್ಜಾಗಿ ನಿಂತಿರುವುದು ವಾಸ್ತವಿಕ ಸತ್ಯ. ಮುಳುಗುತ್ತಿರುವವರಲ್ಲಿ ಯಾರನ್ನು ತಮ್ಮ ಹಡಗಿಗೆ ಹತ್ತಿಸಿಕೊಂಡರೆ ತಮ್ಮಗೆಷ್ಟು ಲಾಭ ನಷ್ಟ ಅನ್ನುವ ಲೆಕ್ಕಾಚಾರದಲ್ಲಿ ರಾಷ್ಟ್ರಮಟ್ಟದ ಹಡಗುಗಳ ನಾವಿಕರು ತೊಡಗಿರುವುದು ರಾಜ್ಯದ ದಿನನಿತ್ಯದ ಲೆಕ್ಕಾಚಾರವೂ ಹೌದು.
ಮುಳುಗಿದ ಹಡಗಿನ ಹೆಸರನ್ನು ಇಟ್ಟುಕೊಂಡು ಬಿಜೆಪಿ ಹಡುಗನ್ನು ಹತ್ತಿಕೊಳ್ಳುವ ನಿರ್ಧಾರಕ್ಕೆ ಜೆಡಿಎಸ್ ಮಹಾ ನಾವಿಕ ಕುಮಾರಸ್ವಾಮಿ ಬಂದಿರುವುದಂತೂ ಸತ್ಯ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದರೆ ಯಾರಿಗೆ ಲಾಭ ಯಾರಿಗೆ ನಷ್ಟ ಅನ್ನುವ ರಾಜಕೀಯ ಲೆಕ್ಕಾಚಾರ ಈಗಾಗಲೇ ಪಕ್ಷದ ಒಳಗೂ ಹೊರಗೂ ಶುರುವಾಗಿದೆ. ಈ ಮೈತ್ರಿ ಖಂಡಿತವಾಗಿಯೂ ಬಿಜೆಪಿಗೆ ಬೇಡವಾದರು ಬಯಸಿ ಬಂದ ಭಾಗ್ಯ ಅನ್ನುವ ಹಾಗೇ ಕುಮಾರಸ್ವಾಮಿ ಅವರ ಜೊತೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಮುಂದಿನ ಲೇೂಕಸಭಾ ಚುನಾವಣಾ ದೃಷ್ಟಿಯಿಂದ ತಮಗೊಂದಿಷ್ಟು ಲಾಭವಾಗಬಹುದು ಅನ್ನುವುದು ಬಿಜೆಪಿ ದೆಹಲಿ ನಾಯಕರ ಲೆಕ್ಕಾಚಾರವಾದರೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಸಂಪೂರ್ಣವಾಗಿ ಒಮ್ಮೆಲೆ ಮುಳುಗಿ ಹೇೂಗುವುದೊರಳಗೆ ತಮ್ಮ ಕುಟುಂಬದ ಕೆಲವರನ್ನಾದರೂ ರಾಜಕೀಯವಾಗಿ ದಡ ಸೇರಿಸಬಹುದಲ್ಲಾ ಅನ್ನುವ ಕಾರಣಕ್ಕಾಗಿಯೇ ಈ ಮೈತ್ರಿಗೆ ಮುಂದಾಗಿರುವುದಂತು ನಿಜ.
ಬಿಜೆಪಿ ಲೆಕ್ಕಾಚಾರ ಅಂದರೆ ತಮ್ಮ ಬಲ ಕಡಿಮೆ ಇರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಮುಂದಿನ ಚುನಾವಣೆಗೆ ಲಾಭವಾಗಬಹುದು ಅನ್ನುವ ರಾಜಕೀಯ ಲೆಕ್ಕಾಚಾರ. ಒಂದಂತೂ ನಿಜ, ಈ ಮೈತ್ರಿಯಿಂದಾಗಿ ಹೆಚ್ಚು ಲಾಭವಾಗುವುದು ಕಾಂಗ್ರೆಸ್ಗೆ ಅನ್ನುವ ಸೂಕ್ಷ್ಮತೆ ಡಿಲ್ಲಿ ನಾಯಕರಿಗೆ ಇನ್ನೂ ಅರ್ಥವಾಗಿಲ್ಲ. ಅಹಿಂದ ರಾಜಕೀಯವೇ ಪ್ರಧಾನ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಅತೀ ಹೆಚ್ಚಿನ ಜೆಡಿಎಸ್ ಮತಗಳು ಕಾಂಗ್ರೆಸ್ ಪಾಲಾಗುವುದಂತೂ ನೂರಕ್ಕೆ ನೂರು ಸತ್ಯ. ಮಾತ್ರವಲ್ಲ, ಈ ಜೆಡಿಎಸ್ ಬಿಜೆಪಿಯ ಮೈತ್ರಿಯನ್ನು ಒಪ್ಪದ ಜೆಡಿಎಸ್ ಪ್ರಭಾವಿ ನಾಯಕರು ಕಾಂಗ್ರೆಸ್ ಕಡೆ ವಾಲಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಇದನ್ನೇ ಕಾದು ಕುಳಿತಿರುವ ಕಾಂಗ್ರೆಸ್ ತನ್ನ ಬಲೆ ಬೀಸಿದರೂ ಆಶ್ಚರ್ಯವಿಲ್ಲ. ಮಾತ್ರವಲ್ಲ ಸೀಟ್ ಹಂಚುವಿಕೆಯಲ್ಲೂ ಬಿಜೆಪಿ ಜೆಡಿಎಸ್ ಈ ಪ್ರಾಂತ್ಯದ ನಾಯಕರಲ್ಲೂ ಅಸಮಾಧಾನ ಮೂಡಿದರಂತೂ ಬಿಜೆಪಿ ಜೆಡಿಎಸ್ ಮೈತ್ರಿಗೆ ನಷ್ಟವೇ ಜಾಸ್ತಿ. ಈ ಡ್ಯಾಮೇಜನ್ನು ಮೇೂದಿಯಾಗಲಿ ಅಮಿತ್ ಶಾ ಆಗಲಿ ತುಂಬಲು ಸಾಧ್ಯವಿಲ್ಲ ಅನ್ನುವುದು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಖಾತ್ರಿಯಾಗಿದೆ. ಮುಳುಗುತ್ತಿರುವ ಜೆಡಿಎಸ್ ತನ್ನ ಜೀವ ರಕ್ಷಣೆಗಾಗಿ ಬಿಜೆಪಿ ಹಡುಗನ್ನು ಆಶ್ರಯಿಸಬಹುದೇ ಹೊರತು ಇದು ಹೃದಯದಲ್ಲಿ ಮೂಡಿಬಂದ ಮೈತ್ರಿ ಅಂತೂ ಖಂಡಿತವಾಗಿಯೂ ಅಲ್ಲ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.