Home ಅಂಕಣ ಕಷ್ಟಗಳಿಗೆ ಹೆದರಬೇಡಿ

ಕಷ್ಟಗಳಿಗೆ ಹೆದರಬೇಡಿ

ಬದುಕಿನಲ್ಲಿ ಭರವಸೆ ಕಳೆದುಕೊಳ್ಳಬೇಡಿ, ಆತ್ಮವಿಶ್ವಾಸದಿಂದ ಬದುಕಿ.

1102
0

ಷ್ಟಗಳು ನಮ್ಮ ತಾಳ್ಮೆ ಪರೀಕ್ಷಿಸಲೆಂದೆ ಬರುತ್ತವೆ! ನೀವು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೀರಿ ಅಂತ ನಿಮ್ಮ ಮನಸಿಗೆ ಅನಿಸಿದಾಗ ಒಮ್ಮೆ ಮರಗಳನ್ನು ನೋಡಿ. ಒಂದು ಸಮಯದಲ್ಲಿ ಅವು ತನ್ನೆಲ್ಲಾ ಎಲೆಗಳನ್ನು ಕಳೆದುಕೊಂಡರು ಎಂದಿಗೂ ಅವು ಕುಗ್ಗುವುದಿಲ್ಲ. ಅವು ತಮ್ಮ ಸಮಯಕ್ಕಾಗಿ ಕಾಯುತ್ತವೆ. ಹಾಗೆ ನಾವು ಕೊಡ ಸಮಸ್ಯೆಗಳಿಗೆ ಹತಾಶರಾಗದೆ ಅವಮಾನಗಳಿಗೆ ಕುಗ್ಗದೆ ಬದುಕೋಣ. ಸಮಸ್ಯೆ ಯಾರಿಗಿಲ್ಲ ಹೇಳಿ. ಹಾಗಂತ ತಲೆಯ ಮೇಲೆ ಕೈ ಹೊತ್ತು ಕುಳಿತರೆ ಬದುಕು ಸಾಗುವುದಿಲ್ಲ. ನಾವು ನಮಗಿಂತ ಮೇಲಿನವರನ್ನು ನೋಡಿ ನೊಂದುಕೊಳ್ಳುವುದಕ್ಕಿಂತ ನಮಗಿಂತ ಸಂಕಷ್ಟದಲ್ಲಿರುವ ಇತರರನ್ನು ನೋಡಿದರೆ ಸಾಕು. ನಮಗೆ ಭಗವಂತ ಇಷ್ಟನ್ನಾದರೂ ಕರುಣಿಸಿದ್ದಾನಲ್ಲ ಎಂಬ ತೃಪ್ತ ಭಾವ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯುನಿವರ್ಸಿಟಿಗಳಿಂದ ಕಲಿಯುವ ಪಾಠಕ್ಕಿಂತ ಬದುಕು ಕಲಿಸುವ ಪಾಠ ದೊಡ್ಡದು.

ನಾವು ಎಷ್ಟೋ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ. ಆದರೆ ನಮಗೆ ಸಮಸ್ಯೆ ಅಂತ ಬಂದಾಗ ತುಂಬ ಕಷ್ಟಪಡುತ್ತೇವೆ. ಕೆಲವರು ಹೇಳುವುದುಂಟು ನೀವು ಪತ್ರಕರ್ತರು, ಬರಹಗಾರರಿಗೆ ಏನು.. ಎಲ್ಲರ ಪರಿಚಯ ಉಂಟು. ನಿಮಗೆ ಬೇಕಾದ ಕೆಲಸ ಕೊಡಲೆ ಮಾಡಿಸಿಕೊಳ್ಳಬಹುದು ಹಾಗೆ ಹೀಗೆ ಅಂತ. ಆದರೆ ನೈಜತೆಯೇ ಬೇರೆ. ಬೇರೆಯವರ ಸಮಸ್ಯೆ ಅಂತ ಬಂದಾಗ ಸ್ವಾಭಿಮಾನ ಬಿಟ್ಟು ಅವರಿವರ ಗಮನಕ್ಕೆ ತಂದು ಪರಿಹಾರ ಒದಗಿಸುವ ನಾವು ನಮಗೆ ಸಮಸ್ಯೆ ಅಂತ ಬಂದಾಗ ತುಂಬಾ ಒದ್ದಾಡುತ್ತೇವೆ. ಅದನ್ನು ಯಾರಲ್ಲೂ ಹೇಳಿಕೊಳ್ಳುವ ಗೋಜಿಗೆ ಹೋಗದೆ ನಮ್ಮೊಳಗೆ ಇಟ್ಟುಕೊಂಡು ಸಮಾಜದ ಎದುರು ಕಷ್ಟಗಳೇ ಇಲ್ಲ ಎಂದು ಬದುಕುತ್ತೇವೆ. ಸಮಾಜದ ಕಷ್ಟಗಳಿಗೆ ಧ್ವನಿಯಾಗುವ ವ್ಯಕ್ತಿ ತನಗೆ ಕಷ್ಟ ಇದೆ ಅಂತ ಯಾರಲ್ಲೂ ಯಾವತ್ತೂ ಹೇಳುವುದಿಲ್ಲ.

ದೇವರು ನಮಗೆ ಒಂದು ಒಳ್ಳೆಯ ಉಡುಗೊರೆ ಕೊಟ್ಟಿದ್ದಾನೆ. ಎಷ್ಟೆ ಕಷ್ಟ ಬಂದರೂ, ಎಷ್ಟೇ ನೋವುಗಳಿದ್ದರೂ ಖುಷಿ ಖುಷಿಯಾಗಿರಿ ಅಂತ. ಒಂದು ಹಂತದವರೆಗೆ ನೋವು ಸಹಿಸಿದ ನಂತರ ಮನುಷ್ಯ ಮೌನವಾಗುತ್ತಾನೆ. ನಂತರ ಯಾರನ್ನು ದೂಷಿಸುವುದೂ ಇಲ್ಲ, ಯಾರಿಂದ ನಿರೀಕ್ಷಿಸುವುದು ಇಲ್ಲ. ಪ್ರತಿಯೊಬ್ಬರ ಜೀವನವು ನಾವು ಅಂದುಕೊಂಡಷ್ಟು ಖುಷಿಯಾಗಿರುವುದಿಲ್ಲ. ಪ್ರತಿಯೊಬ್ಬರಲ್ಲೂ ನೋವು ನಲಿವುಗಳಿವೆ. ಅದನ್ನು ಗುರುತಿಸಿ ಅನುಭವಿಸುವ ಮನಸ್ಸು ಇರಬೇಕಷ್ಟೆ. ಇತರರ ಕಷ್ಟಗಳಿಗೆ ನೆರವಾಗುವುದರಲ್ಲೆ ಖುಷಿ ಕಂಡುಕೊಂಡವರು ಎಷ್ಟೋ ಜನ ಇದ್ದಾರೆ. ಹಾಗಂದ ಮಾತ್ರಕ್ಕೆ ಅವರಿಗೆ ಕಷ್ಟಗಳೇ ಇಲ್ಲವೆಂದಲ್ಲ. ಇನ್ನೊಬ್ಬರ ಸಂತೋಷದಲ್ಲೇ ತಮ್ಮ ಖುಷಿ ಕಂಡುಕೊಂಡವರು. ಅಂತಹ ಖುಷಿ ಅನುಭವಿಸುವವರು ನಾವಾಗಬೇಕು. ಬಹಳ ಕಷ್ಟಕರವಾದ ಕೆಲಸವೆಂದರೆ, ಎಲ್ಲರನ್ನೂ ಖುಷಿಪಡಿಸುವುದು. ಬಹಳ ಸುಲಭವಾದ ಕೆಲಸವೆಂದರೆ, ಎಲ್ಲರೊಂದಿಗೂ ಖುಷಿಯಾಗಿರುವುದು. ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ. ಆದರೆ ಎಲ್ಲರೊಂದಿಗೂ ಖುಷಿಯಾಗಿರುವುದು ಸಾಧ್ಯವಿದೆ. ಅದನ್ನೇ ಎಲ್ಲರೂ ಮಾಡೋಣ.

ಸದಾ ಇನ್ನೊಬ್ಬರಿಗೆ ಕೆಡುಕನ್ನು ಬಯಸಿ ಇನ್ನೊಬ್ಬರ ಸಂಕಷ್ಟಕ್ಕೆ ಕಾರಣಿಕರ್ತರು ನಾವಾಗಬಾರದು. ಇರುವ ಮೂರು ದಿವಸ ನಾಲ್ಕು ಜನಕ್ಕೆ ಹೆಗಲಾಗಲು ಪ್ರಯತ್ನಿಸೋಣ. ಬರಿ ದ್ವೇಷ ಅಸೂಯೆಯಿಂದಲೆ ಜೀವನ ಕೊನೆಯಾಗುವುದರಲ್ಲಿ ಅರ್ಥವಿಲ್ಲ. ನಾವು ಈ ಭೂಮಿಯ ಮೇಲೆ ಹುಟ್ಟಿದ್ದೇವೆ ಎಂದರೆ ಅದಕ್ಕೊಂದು ಕಾರಣ ಇದ್ದೆ ಇದೆ. ನಿಮ್ಮಿಂದ ಒಂದು ಕೆಲಸ ಮಾಡಿಸುವುದಕ್ಕೆ ಆ ಭಗವಂತ ಇಲ್ಲಿಗೆ ಕಳಿಸಿದ್ದಾನೆಂದ ಮೇಲೆ ಒಳ್ಳೆಯದು ಕೆಟ್ಟದು ಮಾಡುವುದು ನಮ್ಮ ಕೈಯಲ್ಲೆ ಇದೆ. ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡೋಣ. ಒಳ್ಳೆಯ ನೆನಪುಗಳನ್ನು ಈ ಭೂಮಿಯ ಮೇಲೆ ಬಿಟ್ಟು ಹೋಗೋಣ.

“ಮೊದಲು ಬೇರೆಯವರು ನಿಮ್ಮನ್ನು ನಿರ್ಲಕ್ಷ್ಯಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಆ ನಂತರ ನಿಮ್ಮೊಂದಿಗೆ ಹೋರಾಡುತ್ತಾರೆ. ನಂತರ ನೀವು ಗೆಲ್ಲುತ್ತೀರಿ” ಎನ್ನುತ್ತಾರೆ ಮಹಾತ್ಮ ಗಾಂಧಿಜಿ. ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಕಷ್ಟಗಳು ಇರಬೇಕು, ಇನ್ನೊಂದು ಕಡೆ ಭಗವಂತ ತನ್ನ ಕೈ ಬಿಡುವುದಿಲ್ಲ ಎಂಬ ಅಚಲವಾದ ನಂಬಿಕೆ ಇರಬೇಕು. ಕಷ್ಟಗಳು ಪಾಠ ಕಲಿಸಿದರೆ ನಂಬಿಕೆ ಶಕ್ತಿ ತುಂಬುತ್ತದೆ. ಛತ್ರಿಗೆ ಮಳೆಯನ್ನು ನಿಲ್ಲಿಸಲು ಸಾಧ್ಯವಾಗದೆ ಇರಬಹುದು ಆದರೆ ಅದು ಮಳೆಯನ್ನು ಎದುರಿಸುವ ಧೈರ್ಯವನ್ನು ಕೊಡುತ್ತದೆ. ಹಾಗಾಗಿ ಬದುಕಿನಲ್ಲಿ ಭರವಸೆ ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸದಿಂದ ಬದುಕಿ.

-ರವಿರಾಜ್ ಬೈಂದೂರು
(ಯುವ ಬರಹಗಾರ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.