Home ಅಂಕಣ ಸಂತ, ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು

ಸಂತ, ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು

859
0

ಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಕೇರಳ ಹಾಗೂ ಕರ್ನಾಟಕದ ಜನಜೀವನ ಧಾರ್ಮಿಕ ಕಂದಾಚಾರದ ಶೃಂಖಲೆಯಲ್ಲಿ ಬಂಧಿತವಾಗಿ ಅಸ್ಪೃಶ್ಯತೆ, ಮೂಢನಂಬಿಕೆ, ಬಡತನ, ಅಜ್ಞಾನ ಹಾಗೂ ಜಾತೀಯತೆ ತಾಂಡವವಾಡುತ್ತಿದ್ದು ಸಂಪೂರ್ಣ ಕೇರಳವೇ ಒಂದು ಭ್ರಾಂತಾಲಯವೆಂದು ಸ್ವಾಮೀ ವಿವೇಕಾನಂದರಿಂದ ಕರೆಯಲ್ಪಟ್ಟ ದಿನಗಳವು. ಬಿಡುಗಡೆಯಲ್ಲದ ಬೇಡಿಯಿಂದ ಶತಮಾನಗಳಿಂದಲೂ ಅಸ್ಪೃಶ್ಯರು ಮೇಲ್ವರ್ಗದವರೆಂದು ಗುರುತಿಸಲ್ಪಟ್ಟ ಜನರಿಂದ ತುಳಿತಕ್ಕೊಳಪಟ್ಟಿದ್ದರು. ಜಾತಿ ಭೇದದ ಬೇರುಗಳ ಜೊತೆ ದಾಸ್ಯದ ಸಂಕೇತಗಳು, ಅಸ್ಪೃಶ್ಯತೆಯ ಭೀಕರತೆ ಜನಜೀವನದಲ್ಲಿ ಬಹಳ ಆಳಕ್ಕೆ ಇಳಿದಿತ್ತು.

ಸಮಾಜದಲ್ಲಿ ಹಂಚಿ ತಿನ್ನೋಣವೆಂಬ ಸದುದ್ದೇಶದಿಂದ ಅಳವಡಿಸಿದ ವರ್ಣ ವ್ಯವಸ್ಥೆಯು ಜಾತಿ ವ್ಯವಸ್ಥೆಯಾಗಿ ಪರಿಣಮಿಸಿ ಧರ್ಮ, ದೇವರು, ದೇವಾಲಯ, ವಿದ್ಯೆ, ಜ್ಞಾನವೆಲ್ಲವೂ ಒಂದು ವರ್ಗಕ್ಕೆ ಸೀಮಿತವಾಗುಳಿದು ಇತರರನ್ನು ಹಿಂದುಳಿದವರು, ದಲಿತರು, ಅಸ್ಪೃಶ್ಯರೆಂದು ವಿಂಗಡಿಸಿ ಇವೆಲ್ಲವುಗಳಿಂದ ದೂರವಿರಿಸಿ ಅಜ್ಞಾನದ ಅಂಧಕಾರದಲ್ಲಿ ಮೂಕ ಪ್ರಾಣಿಗಳ ಹಾಗೆ ಬದುಕುವಂತೆ ಮಾಡಲಾಯಿತು. ಕ್ರಮೇಣ ಈ ಅಸ್ಪೃಶ್ಯತೆ ಹಾಗೂ ಅದರ ಕ್ರೌರ್ಯಗಳಿಂದ ಬಿಡುಗಡೆ ಹೊಂದಲು ಈ ಜನರು ಅನ್ಯಮತಗಳನ್ನು ಅರಸುವ ಮತಾಂತರವೂ ಇನ್ನೊಂದು ಕಡೆ ಸಮಾಜವನ್ನು ಬಾಧಿಸುತ್ತಿತ್ತು. ಇಂತಹ ಸಂದಿಗ್ಧ ಕಾಲದಲ್ಲಿ ಸಮಾಜ ಸುಧಾರಕರಾಗಿ, ದಲಿತೋದ್ಧಾರಕರಾಗಿ ಉದಯಿಸಿದ ಮಹಾ ಚೇತನವೇ ಶ್ರೀ ನಾರಾಯಣಗುರು.

ಭರತ ಖಂಡ ಕಂಡ ಶಿಕ್ಷಕರಲ್ಲಿ, ಸಂತರಲ್ಲಿ, ಋಷಿಮುನಿಗಳಲ್ಲಿ, ಸಮಾಜ ಸುಧಾರಕರಲ್ಲಿ ಹಾಗೆಯೇ ರಾಷ್ಟ್ರಕಟ್ಟುವ ಚಿಂತಕರಲ್ಲಿ ಶ್ರೀ ನಾರಾಯಣಗುರುವರ್ಯರು ಅತ್ಯಂತ ಶ್ರೇಷ್ಠರೆಂಬುದು ಈ ಜಗತ್ತು ಕಂಡುಕೊಂಡ ಸತ್ಯ. ದಿನಾಂಕ 20-8-1854ರಂದು ಕೇರಳದ ಚೆಂಬಳಂತಿಯಲ್ಲಿ ಕುಟ್ಟಿ ಅಮ್ಮಾಳ್ ಮದನ್ ಆಸಾನ್ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿ, ‘ನಾಣು’ ಎಂಬ ಹೆಸರಿನಲ್ಲಿ ಬಾಲ್ಯದಲ್ಲಿ ಬೆಳೆದು, ಬೆಳೆಯುತ್ತಿರುವಾಗ ಸುತ್ತ ಸಮಾಜದಲ್ಲಿದ್ದ ಜಾತಿಭೇದ, ಜಾತಿಯ ಹೆಸರಲ್ಲಿ ಮನುಷ್ಯ ಮನುಷ್ಯರಲ್ಲಿದ್ದ ವ್ಯತ್ಯಾಸ, ಮೇಲುಕೀಳೆಂಬ ಭಾವನೆ, ದೀನದಲಿತರು, ಅಸ್ಪೃಶ್ಯರೆಂದು ಗುರುತಿಸಲ್ಪಟ್ಟ ಜನರ ಬದುಕಿನ ದಾರುಣ ಸ್ಥಿತಿ ಕಂಡು ಈ ಜನರ ಉದ್ದಾರಕ್ಕಾಗಿ ಶ್ರೀ ನಾರಾಯಣ ಗುರುಗಳು ಕಂಡುಕೊಂಡ ಮಾರ್ಗ ಧ್ಯಾನ ಮಾರ್ಗ.

ಸುದೀರ್ಘವಾದ ಧ್ಯಾನ, ತಪಸ್ಸುಗಳಿಂದ ಭಗವತ್ ಸಾಕ್ಷಾತ್ಕಾರವನ್ನು ಪಡೆದು ಪ್ರಕೃತಿಯ ನಿಗೂಢ ಸತ್ಯ, ಮಾನವ ಜನಾಂಗ, ಮಾನವೀಯತೆ, ವಿವಿಧ ಮತಧರ್ಮಗಳು, ದೇವರು ಮುಂತಾದ ವಿಚಾರಗಳ ಬಗ್ಗೆ ಸಾರ್ವಕಾಲಿಕ ಸತ್ಯವನ್ನು ಕಂಡುಕೊಂಡರು. ಜಾತಿ, ಮತ, ಪಂಥದ ನೆಲೆಯಲ್ಲಿ ಮಾನವ ಜನಾಂಗದಲ್ಲಿರುವ ವ್ಯತ್ಯಾಸವನ್ನು ಗುರುತಿಸಿ ಅದರ ಮೂಲವನ್ನು ಶೋಧಿಸಿದರು. ಮುಂದೆ ತನ್ನ ಅಪ್ರತಿಮ ಜ್ಞಾನ ಸಾಧನೆಯಿಂದ ಈ ದೀನದಲಿತರು, ಅಸ್ಪೃಶ್ಯ ಜನಾಂಗದ ಉದ್ಧಾರಕ್ಕಾಗಿ ಪಣತೊಟ್ಟರು. ಧರ್ಮ, ದೇವರು, ವಿದ್ಯೆ, ದೇವಾಲಯಗಳಿಂದ ದೂರವಿರಿಸಲ್ಪಟ್ಟ ಜನರಿಗಾಗಿ ದೇವಾಲಯ ನಿರ್ಮಾಣ, ವಿದ್ಯಾಲಯಗಳ ಆರಂಭ, ಗುಡಿ ಕೈಗಾರಿಕೆಗಳ ಸ್ಥಾಪನೆ ಮುಂತಾದ ಸುಧಾರಣಾ ಕಾರ್ಯಗಳನ್ನು ನಡೆಸಿದರು.

1888ರಲ್ಲಿ ಕೇರಳದ ಅರವೀಪುರಂನಲ್ಲಿ ಸ್ಥಾಪಿಸಿದ ದೇವಸ್ಥಾನದ ಆರಂಭದಿಂದ ಮುಂದೆ ಮಂಗಳೂರಿನ ಕುದ್ರೋಳಿಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವೂ ಸೇರಿದಂತೆ ಸುಮಾರು 79 ದೇವಸ್ಥಾನಗಳನ್ನು ಇಂತಹ ಜನರಿಗಾಗಿ ದಕ್ಷಿಣ ಭಾರತದಾದ್ಯಂತ ನಿರ್ಮಿಸಿದರು. ಹಾಗೆಯೇ ವಿದ್ಯಾಲಯಗಳನ್ನು, ಗುಡಿಕೈಗಾರಿಕೆಗಳನ್ನು ಆರಂಭಿಸಿ, ಜನರು ಸ್ವಾವಲಂಬಿಗಳಾಗಿ, ಗೌರವಯುತವಾಗಿ, ಸಾತ್ವಿಕರಾಗಿ ಬದುಕುವರೇ ಅವಕಾಶ ಮಾಡಿಕೊಟ್ಟರು.

ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪಡೆದು, ನಿರಂತರ ಧ್ಯಾನ ತಪಸ್ಸಿನಿಂದ ಆಧ್ಯಾತ್ಮಿಕ ತತ್ವ ಚಿಂತನೆಯಲ್ಲಿ ಪರಿಣತಿ ಹೊಂದಿದ ಶ್ರೀ ನಾರಾಯಣ ಗುರುಗಳು ಭಾರತೀಯ ತತ್ವಜ್ಞಾನದಲ್ಲಿ ಅಚಂದ್ರಾರ್ಕವಾಗಿ ನಿಲ್ಲಬಲ್ಲ ದರ್ಶನಮಾಲಾ ಮತ್ತು ಅತ್ಮೋಪದೇಶ ಶತಕಂ ಎಂಬ ಸಾಹಿತ್ಯ ಸೃಷ್ಟಿಸಿದರು. ದಲಿತ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ದೇವಸ್ಥಾನಗಳ ಸ್ಥಾಪನೆ ಮಾಡಿದ ಗುರುಗಳು, ಅಸ್ಪೃಶ್ಯತೆ ನಿವಾರಣೆಗಾಗಿ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡರು. ತಾಮಸ ಪೂಜಾ ಪದ್ಧತಿಯನ್ನು ವರ್ಜಿಸಿ ಸಾತ್ವಿಕ ಪೂಜಾ ಪದ್ಧತಿಯನ್ನು ಅನುಸರಿಸುವಂತೆ ಜನರ ಮನ ಪರಿವರ್ತನೆ ಮಾಡಿದರು. ವಿವಾಹ ಪದ್ಧತಿಯಂತಹ ಸಾಮಾಜಿಕ, ಕೌಟುಂಬಿಕ ಕಾರ್ಯಕ್ರಮಗಳ ಸರಳೀಕರಣ ಮಾಡಿ ಮಾನವರೆಲ್ಲರಿಗೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಕರೆ ನೀಡುವುದರೊಂದಿಗೆ ‘ಏಕಂ ಸತ್ ವಿಪ್ರಾ ಬಹುದಾವದಂತಿ’ ಎಂಬ ಸನಾತನ ಧರ್ಮದ ವಿಶ್ವಮಾನ್ಯ ಪರಿಚಯ ಮಾಡಿಸಿಕೊಟ್ಟರು.

‘ಪಾವುಟ್ಟು ಯೋಗಂ’, ‘ಶ್ರೀ ನಾರಾಯಣ ಧರ್ಮ ಪಾಲನಾ ಯೋಗಂ’, ‘ಶ್ರೀ ನಾರಾಯಣ ಧರ್ಮ ಸಂಘಂ’ ಮುಂತಾದ ಸಂಘಟನೆಗಳನ್ನು ಸ್ಥಾಪಿಸಿ ಅವುಗಳ ಮುಖೇನ ಸಮಾಜ ಸುಧಾರಣಾ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ ಶ್ರೀ ನಾರಾಯಣ ಗುರುಗಳು, ಸರ್ವಧರ್ಮ ಸಮ್ಮೇಳನಗಳನ್ನು ಆಯೋಜನೆ ಮಾಡಿ ಜನರಿಗೆ ಅಂತಃಕರಣ ಶುದ್ಧಿಯನ್ನು ಪರಿಚಯಿಸಿದರು. ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎನ್ನುವ ಕರೆಯೊಂದಿಗೆ ಜಗತ್ತಿಗೆ ಬೋಧನೆ ನೀಡಿದರು. ಹೀಗೆ ಹತ್ತು ಹಲವು ರೀತಿಯ ಸಮಾಜ ಸುಧಾರಣೆಯಿಂದಾಗಿ ಶತಮಾನಗಳಿಂದ ಅಜ್ಞಾನದ ಕತ್ತಲಲ್ಲಿದ್ದ ಜನಕೋಟಿಗೆ ಜ್ಞಾನದ ಬೆಳಕನ್ನೂ, ಆತ್ಮಸ್ಥೈರ್ಯವನ್ನೂ ನೀಡಿ ದೀನದಲಿತರ, ಅಸ್ಪೃಶ್ಯರ ಬದುಕನ್ನು ಉದ್ದರಿಸಿದ ಮಹಾಪುರುಷ ಶ್ರೀ ನಾರಾಯಣಗುರು.

-ಮುದ್ದು ಮೂಡುಬೆಳ್ಳೆ (ಮಾಜಿ ನಿರ್ದೇಶಕರು, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.