Sunday, January 19, 2025
Sunday, January 19, 2025

ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ ಐ.ಎ.ಎಸ್

ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ ಐ.ಎ.ಎಸ್

Date:

ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ ಐ.ಎ.ಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕನು ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ ದೊಡ್ಡ ಸುದ್ದಿ. ಅದೂ ಕೂಡ ಶೈಕ್ಷಣಿಕ ಕ್ರಾಂತಿಯ ಮೂಲಕ ಅನ್ನುವಾಗ ಇನ್ನೂ ಹೆಚ್ಚು ರೋಮಾಂಚನ ಆಗ್ತದೆ. ಅದಕ್ಕೆ ಕಾರಣರಾದವರು ಆದಿತ್ಯ ರಂಜನ್.

ಸರಕಾರಿ ಶಾಲೆಗಳಲ್ಲಿ ಓದಿ ಐಎಎಸ್ ಬರೆದರು: ಅವರು ಮೂಲತಃ ಕೈಗಾರಿಕಾ ನಗರವಾದ ಬೋಕಾರೋದ ಒಂದು ಮಧ್ಯಮವರ್ಗದ ಕುಟುಂಬದಿಂದ ಬಂದವರು. ಸರಕಾರಿ ಶಾಲೆಗಳಲ್ಲಿ ಓದಿದರು. ಮುಂದೆ ಬಿ. ಟೆಕ್ ಪದವಿಯನ್ನು ಪಡೆದು ಶ್ರೀಮಂತವಾದ ಬಹುರಾಷ್ಟ್ರೀಯ ಕಂಪೆನಿಯಾದ ORACLE ಇದರ ಬೆಂಗಳೂರು ಕಚೇರಿಯಲ್ಲಿ ಉದ್ಯೋಗವನ್ನು ಮಾಡಿದರು. ಲಕ್ಷ ಲಕ್ಷ ಸಂಬಳ ಬರುವ ಉದ್ಯೋಗ, ಅದನ್ನು ಹಿಂಬಾಲಿಸಿಕೊಂಡು ಬರುವ ಆಧುನಿಕ ಲೈಫ್ ಸ್ಟೈಲ್ ಎಲ್ಲಾ ಇದ್ದರೂ ಒಂದೂವರೆ ವರ್ಷದಲ್ಲಿ ಅವರು ರಾಜೀನಾಮೆ ಕೊಟ್ಟು ಹೊರಬಂದರು. ಕಾರಣ ಬಾಲ್ಯದಿಂದ ಅವರಿಗಿದ್ದ ಸಮಾಜಸೇವೆಯ ತೀವ್ರವಾದ ತುಡಿತ. ಮುಂದೆ UPSC ಪರೀಕ್ಷೆಯನ್ನು ಬರೆದು(2015) ಅವರು ಐಎಎಸ್ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರಮಟ್ಟದ 99ನೆಯ ರಾಂಕ್ ಅವರಿಗೆ ದೊರಕಿತು. ಪ್ರೊಬೇಷನರಿ ಅವಧಿ ಮುಗಿದ ನಂತರ ಅವರು ಸೇವೆಗೆ ಸೇರಿದ್ದು ಜಾರ್ಖಂಡ್ ರಾಜ್ಯದ ಸಿಂಗಭುಂ ಜಿಲ್ಲೆಯಲ್ಲಿ.

ಸರಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಿಸಲು ಅವರು ಮಾಡಿದ ಯೋಜನೆ: ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಜಿಲ್ಲೆ ಅದು. ಸಾಕ್ಷರತೆಯ ಪ್ರಮಾಣವು ಕೇವಲ 67% ಇತ್ತು. ಅಷ್ಟೊಂದು ಬಡತನ ಇದ್ದರೂ ಜನ ಸಾವಿರ ಸಾವಿರ ಡೊನೇಶನ್ ಸುರಿದು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದರು. ಸರಕಾರಿ ಶಾಲೆಯಲ್ಲಿ ಮಕ್ಕಳ ತೀವ್ರವಾದ ಕೊರತೆ ಇತ್ತು. ಸಮಸ್ಯೆಯನ್ನು ಆಳವಾಗಿ ಜಿಲ್ಲಾಧಿಕಾರಿಯವರು ಅಧ್ಯಯನ ಮಾಡಿದರು.

ಆಗ ಅವರ ಗಮನಕ್ಕೆ ಬಂದ ವಾಸ್ತವ ಏನೆಂದರೆ ಸರಕಾರಿ ಅಂಗನವಾಡಿಗಳ ಸ್ಥಿತಿಯು ತುಂಬಾ ಕೆಟ್ಟು ಹೋಗಿತ್ತು. ಖಾಸಗಿ ಶಾಲೆಗಳು LKG/UKG ಎಂದು ವೈಭವೀಕರಣ ಮಾಡಿ ಪೋಷಕರನ್ನು ಆಕರ್ಷಣೆ ಮಾಡುತ್ತಿದ್ದರು. ಸರಕಾರಿ ಅಂಗನವಾಡಿಗೆ ಬಂದ ಮಕ್ಕಳು ಬೆಳಿಗ್ಗೆ ಇಲಾಖೆ ನೀಡಿದ ಕಿಚಡಿ ತಿಂದು ಮನೆಗೆ ಓಡಿ ಹೋಗುತ್ತಿದ್ದರು! ಅಂಗನವಾಡಿ ಸಹಾಯಕಿಯರು ಪಾಠವನ್ನೇ ಮಾಡುತ್ತಿರಲಿಲ್ಲ.

ಅಂಗನವಾಡಿಗಳ ಉನ್ನತೀಕರಣಕ್ಕೆ ಗಟ್ಟಿ ಸಂಕಲ್ಪ: ಆಗ ಜಿಲ್ಲಾಧಿಕಾರಿ ಆದಿತ್ಯ ರಂಜನ್ ಅವರು ಒಬ್ಬ ಅಂಗನವಾಡಿಯ ಶಿಕ್ಷಕಿಯನ್ನು ಭೇಟಿ ಮಾಡಿದರು.ಆಕೆ ವಿಧವೆ. ಆದರೂ ತಿಂಗಳಿಗೆ 4,500 ರೂಪಾಯಿ ತನ್ನ ಕಿಸೆಯಿಂದ ಖರ್ಚು ಮಾಡಿ ಒಂದು ಮಾದರಿ ಅಂಗನವಾಡಿಯನ್ನು ನಡೆಸುತ್ತಿದ್ದರು. ಅದನ್ನು ನೋಡಿದ ಜಿಲ್ಲಾಧಿಕಾರಿಯವರ ಕಣ್ಣು ತೆರೆಯಿತು. ಅದನ್ನು ಅವರು ಒಂದು ಸವಾಲಾಗಿ ಸ್ವೀಕರಿಸಿದರು.

ಅವರ ಜಿಲ್ಲೆಯಲ್ಲಿ 2330ರಷ್ಟು ಅಂಗನವಾಡಿಗಳು ಇದ್ದವು. ಅದರಲ್ಲಿ 1000 ಅಂಗನವಾಡಿ ಆಯ್ದುಕೊಂಡು ನೀಲನಕ್ಷೆಯನ್ನು ಸಿದ್ಧಪಡಿಸಿದರು. BALA (Buiding As Learning Aid) ಎಂಬ ಹೆಸರಿನ ಯೋಜನೆಯು ಜಾರಿಯಾಯಿತು. ಅವರು ಮಾಡಿದ ಸಣ್ಣ ಸಣ್ಣ ಕೆಲಸಗಳು ಆ ಜಿಲ್ಲೆಯ ಎಲ್ಲಾ ಅಂಗನವಾಡಿಗಳನ್ನು ಶ್ರೀಮಂತಗೊಳಿಸಿದವು.

ಐಎಎಸ್ ಆದಿತ್ಯ ರಂಜನ್ ಚಿತ್ರಣವನ್ನು ಬದಲಾಯಿಸಿದರು:
1) ಅಂಗನವಾಡಿಗಳ ಗೋಡೆಯನ್ನು ಬಣ್ಣ ಬಣ್ಣದ ಚಿತ್ರಗಳಿಂದ ಸಿಂಗಾರ ಮಾಡಿದರು. ಆಕರ್ಷಕವಾಗಿ ಅಕ್ಷರ ಮತ್ತು ಸಂಖ್ಯೆಗಳಿಂದ ತುಂಬಿಸಿದರು. ಪ್ರಾಣಿ ಪಕ್ಷಿಗಳ ಚಿತ್ರಗಳೂ ಮೂಡಿದವು. 2) ಅಂಗನವಾಡಿಗಳ ಕಲಿಕೆಗೆ ಸಿಲೆಬಸ್ ರಚಿಸಿದರು. ಆಕರ್ಷಕ ಪಠ್ಯಪುಸ್ತಕವು ಬಂದಿತು. ದೃಶ್ಯ ಮಾಧ್ಯಮಗಳ ಬಳಕೆ ಆಯಿತು. ಮಕ್ಕಳಿಗೆ ಇಷ್ಟ ಆಗುವ ಆಟಗಳ ಮೂಲಕ ಪಾಠ ಕಲಿಸುವ ವಿಧಾನವು ಜಾರಿಗೆ ಬಂದಿತು. 3) ಅಂಗನವಾಡಿಗಳ ಶಿಕ್ಷಕರಿಗೆ ಸನಿವಾಸ ತರಬೇತಿಯ ಸರಣಿಗಳು ನಡೆದವು. ಸ್ವತಃ DC ಬಂದು ಪಾಠ ಮಾಡಿದರು. ಮಕ್ಕಳನ್ನು ಪ್ರೀತಿಸುವ, ಶಿಕ್ಷೆ ಇಲ್ಲದೇ ಪ್ರೀತಿಯಿಂದ ಮಕ್ಕಳಿಗೆ ಕಲಿಸುವ ವಾತಾವರಣವನ್ನು ಕಲ್ಪಿಸಲಾಯಿತು. ಇಂಗ್ಲಿಷ್ ಪ್ರಾಸ ಪದ್ಯಗಳು (Rhymes) ಬಳಕೆಗೆ ಬಂದವು. 4) E-Sameeksha ಎಂಬ ಆಪ್ ಮೂಲಕ ಪ್ರತೀ ಅಂಗನವಾಡಿಯ ಪ್ರತಿದಿನದ ಪ್ರಗತಿಯನ್ನು ದಾಖಲಿಸುವ ಮತ್ತು ಡಿಸಿ ಮಾನಿಟರ್ ಮಾಡುವ ವ್ಯವಸ್ಥೆಯು ಜಾರಿಯಾಯಿತು.
 5) ವಿವಿಧ ಸೇವಾಸಂಸ್ಥೆಗಳ ಸಹಯೋಗದೊಂದಿಗೆ ಅಂಗನವಾಡಿಯ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಮತ್ತು ಆಟದ ಸಾಮಗ್ರಿ ದೊರೆಯಿತು. ಸಂಗೀತ – ನಾಟಕ ಇತ್ಯಾದಿ ಚಟುವಟಿಕೆಗಳು ಗರಿಗೆದರಿದವು.

ಜಿಲ್ಲೆಯ ಅಂಗನವಾಡಿಗಳು ಸಿಂಗಾರವಾದವು: ಇವೆಲ್ಲದರ ಪರಿಣಾಮವಾಗಿ ಕೇವಲ ಎರಡೇ ವರ್ಷಗಳಲ್ಲಿ ಸರಕಾರಿ ಅಂಗನವಾಡಿಗಳು ಪ್ಲೇ ಸ್ಕೂಲಿಗಿಂತ ಅದ್ಭುತ ಆದವು. ಖಾಲಿಯಾಗಿದ್ದ ಸರಕಾರಿ ಪ್ರಾಥಮಿಕ ಶಾಲೆಗಳು ತುಂಬಿದವು. ಅಂಗನವಾಡಿಗಳನ್ನು ಅವರು ಉನ್ನತೀಕರಣ ಮಾಡಿದ್ದರಿಂದ ಇಡೀ ಜಿಲ್ಲೆಯ ಶೈಕ್ಷಣಿಕ ಚಿತ್ರಣವೇ ಬದಲಾಯಿತು. ಇದಕ್ಕೆ ಕಾರಣರಾದ ವ್ಯಕ್ತಿ ನಮ್ಮ ಜಿಲ್ಲಾಧಿಕಾರಿ ಆದಿತ್ಯ ರಂಜನ್.

ಇನ್ನೆರಡು ಅಪೂರ್ವವಾದ ಯೋಜನೆಗಳು: ಇಂತಹ ನೂರಾರು ಪರಿಕ್ರಮಗಳನ್ನು ಅವರು ಮಾಡಿದ್ದಾರೆ. ಅವರ ಇನ್ನೆರಡು ಯೋಜನೆಗಳು ರಾಷ್ಟ್ರದ ಗಮನವನ್ನು ಸೆಳೆದಿವೆ. ಅವುಗಳ ಬಗ್ಗೆ ನಾನು ಹೇಳಲೇಬೇಕು.

1) Wonder on Wheels (Wow) ಎಂಬ ಯೋಜನೆಯ ಅಡಿಯಲ್ಲಿ ಒಂದು ಸಂಚಾರಿ ವಾಹನವು ನಗರದಾದ್ಯಂತ ಸಂಚರಿಸಿ ದೃಶ್ಯ ಮಾಧ್ಯಮಗಳ ಮೂಲಕ ಸಣ್ಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಾ ಪರಿಣಾಮವಾಗಿ ಮೂಡಿಸುತ್ತಿದೆ. ಆ ಹೆಸರೇ (WOW) ಅದ್ಭುತವಾಗಿದೆ. 2) ಅವರ ಜಿಲ್ಲೆಯು ಕೂಡ ಕೊರೋನಾ ಪೀಡಿತವಾದಾಗ ಜಿಲ್ಲಾಧಿಕಾರಿ ಸ್ವತಃ ಕೆಲಸ ಮಾಡಿ CO- BOT ಎಂಬ ಹೆಸರಿನ ರೋಬೋಟನ್ನು ತಯಾರಿ ಮಾಡಿದರು. ಅದು ರಿಮೋಟ ಮೂಲಕ ಕೆಲಸ ಮಾಡುತ್ತ ಆಸ್ಪತ್ರೆ ಇಡೀ ಓಡಾಡಿ ರೋಗಿಗಳಿಗೆ ಔಷಧಿ, ಆಹಾರ, ಸೇನಿಟೈಸರಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು. ಮಾತ್ರವಲ್ಲದೆ ಅವರನ್ನು ನಗಿಸಿ ಖುಷಿ ಪಡಿಸುವ ಕೆಲಸವನ್ನೂ ಮಾಡುತ್ತಿತ್ತು. ಇದು ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿದೆ!

ಭರತ ವಾಕ್ಯ- ಒಬ್ಬ ಸೇವಾಕಾಂಕ್ಷಿ IAS ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಪರಿವರ್ತನೆಗಳನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಆದಿತ್ಯ ರಂಜನ್ ಒಂದು ಮೇರು ಉದಾಹರಣೆ ಆಗಿದ್ದಾರೆ.

ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!