Monday, January 20, 2025
Monday, January 20, 2025

ಮಣಿರತ್ನಂ ಎಂಬ ಮಾಂತ್ರಿಕ ಶಕ್ತಿ

ಮಣಿರತ್ನಂ ಎಂಬ ಮಾಂತ್ರಿಕ ಶಕ್ತಿ

Date:

ಲ್ಕಿ ಎಂಬ ತಮಿಳು ಲೇಖಕನ ಮಹಾಕಾದಂಬರಿಯು ಮಣಿರತ್ನಂ ನಿರ್ದೇಶನದಲ್ಲಿ ಒಂದು ಮೆಗ್ನಮಾಪಸ್ ಸಿನೆಮಾ ಆದದ್ದು ಹೇಗೆ? ಮತ್ತೆ ಒಂದು ದಕ್ಷಿಣ ಭಾರತದ ಸಿನೆಮಾ ಗೆದ್ದು ವಿಜೃಂಭಿಸಿದೆ. ಆ ಸಿನೆಮಾ ಹುಟ್ಟಿದ ಕತೆಯೂ ಸಿನೆಮಾಗಿಂತ ರೋಚಕ ಆಗಿದೆ. ಪೊನ್ನಿಯಿನ್ ಸೆಲ್ವನ್ (ಭಾಗ 1) ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಿ ತಮಿಳು ಚಿತ್ರರಂಗದ ಎಲ್ಲ ದಾಖಲೆ ಮುರಿದಿದ್ದರೆ ಅದೇ ಸಿನೆಮಾದ ಭಾಗ 2 ಈ ವಾರ ಬಿಡುಗಡೆ ಆಗಿ ಜಗತ್ತಿನಾದ್ಯಂತ ಹುಡಿ ಹಾರಿಸುತ್ತಿದೆ. ಕಲ್ಕಿ ಎಂಬ ತಮಿಳು ಪತ್ರಕರ್ತ ಬರೆದ ಕಾದಂಬರಿ.

ತಮಿಳುನಾಡಿನ ಶ್ರೇಷ್ಟ ಪತ್ರಕರ್ತ ಮತ್ತು ಕತೆಗಾರ ಆಗಿದ್ದ ರಾಮಸ್ವಾಮಿ ಕೃಷ್ಣಮೂರ್ತಿ 1950-54ರ ನಡುವೆ ಬರೆದ ಮಹಾ ಕಾದಂಬರಿ ಇದು. ಕಲ್ಕಿ ಎನ್ನುವುದು ಅವರ ಕಾವ್ಯನಾಮ. ಅವರೇ ಸಂಪಾದನೆ ಮಾಡುತ್ತಿದ್ದ ಕಲ್ಕಿ ಪತ್ರಿಕೆಯಲ್ಲಿ ಈ ಕಥೆಯು ನಾಲ್ಕು ವರ್ಷಗಳ ಕಾಲ ಸಾಪ್ತಾಹಿಕ ಧಾರಾವಾಹಿ ಆಗಿ ಪ್ರಕಟವಾಯಿತು. ಅದೆಷ್ಟು ಜನಪ್ರಿಯ ಆಯಿತು ಎಂದರೆ ತಮಿಳುನಾಡನ್ನು ಪ್ರೀತಿ ಮಾಡುವ ಪ್ರತಿಯೊಬ್ಬರೂ ಆ ಧಾರಾವಾಹಿಯನ್ನು ಓದಿದರು. ಮುಂದೆ ಐದು ಭಾಗಗಳಲ್ಲಿ 2210 ಪುಟಗಳ ಮಹಾ ಕಾದಂಬರಿ ‘ಪೊನ್ನಿಯಿನ ಸೆಲ್ವನ್’ ಎಂಬ ಹೆಸರಿನಲ್ಲಿ ಪ್ರಕಟವಾಯಿತು.

ಸ್ವಾತಂತ್ರ್ಯಾನಂತರದ ಕಾಲದಲ್ಲಿ ತಮಿಳುನಾಡು ರಾಜ್ಯವು ಹುಟ್ಟಿ ತನ್ನ ಅಸ್ಮಿತೆಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಈ ಕಾದಂಬರಿಯು ಲೋಕಾರ್ಪಣೆ ಆದ ಕಾರಣ ಭಾರೀ ಜನಪ್ರಿಯತೆಯನ್ನು ಪಡೆಯಿತು. ಅದೇ ಕಥೆಯನ್ನು ಸಿನೆಮಾ ಮಾಡಲು ದಶಕಗಳ ಹಿಂದೆ ಎಂ.ಜಿ.ಆರ್, ಕಮಲಹಾಸನ್ ಮೊದಲಾದವರು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ ಅನ್ನುತ್ತದೆ ಇತಿಹಾಸ. ಈಗ ಮಣಿರತ್ನಂ ಎಂಬ ಮಹಾಹಠವಾದಿ ಮತ್ತು ಸೃಜನಶೀಲ ನಿರ್ದೇಶಕನ ಕಾರಣಕ್ಕೆ ಅದು ಫಿಲ್ಮ್ ಆಗಿದೆ. ಎರಡೂ ಭಾಗಗಳನ್ನು ಅವರು ಬ್ಯಾಕ್ ಟು ಬ್ಯಾಕ್ ನಿರ್ದೇಶನ ಮಾಡಿದ್ದಾರೆ. ಸುಮಾರು 500 ಕೋಟಿ ದುಡ್ಡಲ್ಲಿ ಈ ತಮಿಳು ದೃಶ್ಯಕಾವ್ಯವು ಭಾರತೀಯ ಸಿನೆಮಾ ರಂಗಕ್ಕೆ ಒಂದು ಅನರ್ಘ್ಯ ಕೊಡುಗೆ ಆಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇದು ಚೋಳ ಸಾಮ್ರಾಜ್ಯದ ಕಥೆ. ಕ್ರಿಸ್ತಶಕ ಹತ್ತನೇ ಶತಮಾನದಲ್ಲಿ ಸಾಹಸೀ ಬದುಕನ್ನು ಬದುಕಿದ ರಾಜರಾಜ ಚೋಳನ ಕಥೆಯೇ ಈ ಸಿನೆಮಾದ ಮೂಲ ದ್ರವ್ಯ. ಅರುಳ್ ಮೋಳಿ ವರ್ಮನ್ ಆತನ ಪೂರ್ಣ ಹೆಸರು. ಆ ಕಾಲದಲ್ಲಿ ನಡೆದ ರೋಮಾನ್ಸ್, ಸಂಚು, ದ್ರೋಹ, ರಾಷ್ಟ್ರಪ್ರೇಮ, ಶೌರ್ಯ, ರಕ್ತಪಾತ, ಸಾಹಸಗಳ ಕಥೆಯೇ ಪೊನ್ನಿಯಿನ್ ಸೆಲ್ವನ್.

ತಮಿಳುನಾಡಿನ ಶ್ರೇಷ್ಠ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿ ಎಂಬವರು ಬರೆದ ಇತಿಹಾಸದ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಕಲ್ಕಿ ಈ ಕಾದಂಬರಿ ಬರೆದಿದ್ದಾರೆ. ಅಂದಾಜು ನಾಲ್ಕೈದು ವರ್ಷಗಳ ಕಾಲ ಬೇರೇನೂ ಯೋಚನೆ ಮಾಡದೇ, ಆಳವಾಗಿ ಅಧ್ಯಯನ ಮಾಡಿ ಬರೆದ ಕಾದಂಬರಿ ಅನ್ನುವುದು ಹೆಗ್ಗಳಿಕೆ. ಮೂರು ಬಾರಿ ಶ್ರೀಲಂಕಾಕ್ಕೆ ಕೂಡ ಹೋಗಿ ಸಾಕಷ್ಟು ಮಾಹಿತಿ ಕಲೆಹಾಕಿ ಇದನ್ನು ಬರೆಯಲಾಗಿದೆ. ಜೊತೆಗೆ ಒಂದಿಷ್ಟು ಕಲ್ಪನೆಯೂ ಸೇರಿದಾಗ ಈ ಕಾದಂಬರಿ ತಮಿಳುನಾಡಿನ ಬೆಸ್ಟ್ ಸೆಲ್ಲರ್ ಕಾದಂಬರಿ ಆಯ್ತು. ಭಾರತದ ಹಲವು ಭಾಷೆಗಳಿಗೆ, ಇಂಗ್ಲಿಷ್ ಮತ್ತು ವಿದೇಶದ ಹಲವು ಭಾಷೆಗಳಿಗೆ ಈ ಕಾದಂಬರಿಯು ಅನುವಾದ ಆಗಿದೆ.

ಮಣಿರತ್ನಂ ಎಂಬ ಮಹಾ ಸಿನಿಮಾ ನಿರ್ದೇಶಕ: ಮಣಿರತ್ನಂ ಬದುಕಿನ ಬಗ್ಗೆ ಅವರ ಸಿನೆಮಾಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಇಡೀ ಭಾರತದ ಅತ್ಯಂತ ಸೃಜನಶೀಲ ನಿರ್ದೇಶಕ ಯಾರು? ಎಂಬ ಪ್ರಶ್ನೆ ಬಂದಾಗ ಪರಿಗಣನೆಗೆ ಬರುವ ಮೊದಲ ಹೆಸರು ಅದು ಮಣಿರತ್ನಂ. ಅಂತಹ ನಿರ್ದೇಶಕ ಚಿತ್ರಕಥೆ ಬರೆದು ಈ ಸಿನೆಮಾ ಮಾಡಿದ್ದಾರೆ ಅಂದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸಹಜವೇ ಹೌದು. ಆದರೆ ಈ ಎರಡೂ ಸಿನೆಮಾಗಳು ಕೂಡ ನಿಮ್ಮ ನಿರೀಕ್ಷೆಗಳಿಗಿಂತ ಚೆನ್ನಾಗಿವೆ! ಇಡೀ ಎರಡೂವರೆ ಘಂಟೆ ಕಲ್ಪನಾ ಲೋಕದಲ್ಲಿ ನಿಮ್ಮನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತವೆ.

ಏನುಂಟು, ಏನಿಲ್ಲ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ?: ಈ ಸಿನೆಮಾದಲ್ಲಿ ನೀವು ಆಸೆ ಪಡುವ ಎಲ್ಲವೂ ಇದೆ. ಈ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಹತ್ತನೇ ಶತಮಾನದ ದೃಶ್ಯಗಳನ್ನು ಮರುಸೃಷ್ಟಿ ಮಾಡುವುದು ಸುಲಭ ಅಲ್ಲ! ಕಲಾನಿರ್ದೇಶಕ ಅಲ್ಲಿ ಗೆದ್ದಿದ್ದಾರೆ. ಆ ಕಾಲದ ಅರಮನೆಗಳು, ದರ್ಬಾರು, ಸುರಂಗಗಳು, ಹಡಗುಗಳು, ದೇವಸ್ಥಾನಗಳು, ಯುದ್ಧಗಳು, ಶಸ್ತ್ರಾಸ್ತ್ರಗಳು, ರಸ್ತೆಗಳು, ಬೆಳಕಿನ ವಿನ್ಯಾಸಗಳು, ಪೋಷಾಕುಗಳು, ಪಾತ್ರೆಗಳು, ಬೀದಿಗಳು…. ಹೀಗೆ ಎಲ್ಲವನ್ನೂ ಅದ್ಭುತವಾಗಿ ಇಲ್ಲಿ ತೋರಿಸಲಾಗಿದೆ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಈ ಸಿನೆಮಾಕ್ಕೆ ಕೊಟ್ಟ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ವರ್ಣಿಸಲು ಪದಗಳೇ ಸಾಲದು. ಶುದ್ಧ ದೇಸಿ ರಾಗಗಳ ಸೊಬಗು ಇಲ್ಲಿ ರೆಹಮಾನ್ ಹೆಪ್ಪುಗಟ್ಟಿಸಿ ಬೆರಗು ಮೂಡಿಸಿದ್ದಾರೆ.

ಕ್ಯಾಮೆರಾ ಕೈಚಳಕ, ಸುಂದರ ಸಿನಿಮಾಟೋಗ್ರಫಿ, ಎಡಿಟಿಂಗ್, ಸಂಭಾಷಣೆ, ನಿರೂಪಣೆ ಎಲ್ಲ ವಿಭಾಗಗಳಲ್ಲಿಯೂ ಈ ಸಿನೆಮಾ ಗೆದ್ದಿದೆ. ಆ ಕಾಲದ ಯುದ್ಧದ ದೃಶ್ಯಗಳು ರೋಮಾಂಚಕ ಅನುಭವ ಕೊಡುತ್ತವೆ.

ಭಾರೀ ದೊಡ್ಡ ತಾರಾಗಣ ಇಲ್ಲಿದೆ. ರತದ ಶ್ರೇಷ್ಟವಾದ ನೂರಾರು ನಟರನ್ನು, ಕಲಾವಿದರನ್ನು ಒಂದೇ ಸಿನಿಮಾಕ್ಕೆ ತೆಗೆದುಕೊಂಡು ಬರುವುದು, ಪ್ರತಿಯೊಂದು ಪಾತ್ರಕ್ಕೂ ಪಾತ್ರಪೋಷಣೆ ಒದಗಿಸುವುದು ಸವಾಲಿನ ಕೆಲಸ. ಅಲ್ಲಿ ಕೂಡ ಮಣಿರತ್ನಂ ಗೆದ್ದಿದ್ದಾರೆ. ಪ್ರಮುಖ ಪಾತ್ರವಾದ ಆದಿತ್ಯ ಕರಿಕಾಳನ್ ಆಗಿ ವಿಕ್ರಮ್ ಎಂಬ ಮಹಾನಟ ಮಿಂಚು ಹರಿಸಿದ್ದಾರೆ. ಎರಡು ವಿಭಿನ್ನ ಶೇಡಗಳ ಪಾತ್ರಗಳಲ್ಲಿ ದ್ವಿಪಾತ್ರ ಮಾಡಿ ಐಶ್ವರ್ಯ ರೈ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಇನ್ನು ಜಯಂ ರವಿ, ತ್ರಿಷಾ ಕೃಷ್ಣನ್, ಪ್ರಕಾಶ್ ರಾಜ್, ಕಿಶೋರ್, ಕಾರ್ತಿ, ಶರತ್ ಕುಮಾರ್, ಜಯರಾಮ್, ರೆಹಮಾನ್, ಪಾರ್ತಿಬನ್, ಪ್ರಭು ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ಗೆದ್ದಿದ್ದಾರೆ. ಸಿನೆಮಾ ನೋಡಿ ಹೊರಬರುವಾಗ ಪ್ರತೀ ಪಾತ್ರವೂ ಮನಸಲ್ಲಿ ಪ್ರಿಂಟ್ ಆಗಿರುತ್ತದೆ ಅಂದರೆ ಅದು ಸಿನೆಮಾದ ಗೆಲುವು.

ಭಾರತದ 5 ಭಾಷೆಗಳಲ್ಲಿ (ಕನ್ನಡ ಕೂಡ) ಈ ಸಿನೆಮಾವನ್ನು ನಾವು ನೋಡಬಹುದು. ಆದರೆ ಒರಿಜಿನಲ್ ತಮಿಳು ಭಾಷೆಯಲ್ಲಿ ಈ ಸಿನೆಮಾ ನೋಡುವ ಫೀಲ್ ಅದು ಅದ್ಭುತವೇ ಹೌದು. ಅಂದ ಹಾಗೆ ಹೇಳಲು ಮರೆತೆ. ‘ಪೊನ್ನಿಯಿನ್ ಸೆಲ್ವನ್’ ಅಂದರೆ ಕಾವೇರಿಯ ಮಗ ಎಂದರ್ಥ. ಈ ದೃಶ್ಯಕಾವ್ಯವನ್ನು ನೀಡಿದ ಕಥೆಗಾರ ಕಲ್ಕಿ, ನಿರ್ದೇಶಕ ಮಣಿರತ್ನಂ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಇಡೀ ಚಿತ್ರತಂಡವನ್ನು ಎಷ್ಟು ಹೊಗಳಿದರೂ ಕಡಿಮೆಯೇ.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!