Tuesday, November 26, 2024
Tuesday, November 26, 2024

ಸೆಲೆಬ್ರಿಟಿಗಳು ಆಗೋದು ಅಷ್ಟು ಸುಲಭನಾ?

ಸೆಲೆಬ್ರಿಟಿಗಳು ಆಗೋದು ಅಷ್ಟು ಸುಲಭನಾ?

Date:

ನ್ನಡದ ವರನಟ ಡಾ. ರಾಜಕುಮಾರ್ ಇನ್ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಹೀರೋ ಆಗಿ ಅಭಿನಯಿಸಿದ್ದರು. ಅವರ ಸಿನೆಮಾಗಳು ಮಾಡಿದ ಭಾರೀ ದೊಡ್ಡ ದಾಖಲೆಗಳು ಒಂದೆಡೆ ಆದರೆ ಅವರ ಅಸದೃಶವಾದ ವ್ಯಕ್ತಿತ್ವವು ಅದಕ್ಕಿಂತ ಹೆಚ್ಚು ಅನುಕರಣೀಯ. ಡಾ. ರಾಜ್ ಕೆಲವು ಸಿನೆಮಾಗಳಲ್ಲಿ ಪ್ರತಿನಾಯಕನ ಪಾತ್ರಗಳಲ್ಲಿ ನಟಿಸಿದ್ದು ಇದೆ. ಆದರೆ ಅವರು ತಮ್ಮ ಒಂದು ಸಿನೆಮಾದಲ್ಲಿ ಕೂಡ ಕುಡಿಯುವ, ಸಿಗರೇಟನ್ನು ಸೇದುವ, ಪಾನ್ ಜಗಿಯುವ ಅಭಿನಯವನ್ನು ಮಾಡಲೆ ಇಲ್ಲ. ತಪ್ಪಿ ಕೂಡ ಒಂದು ಹೆಣ್ಣನ್ನು ಅಪಮಾನ ಮಾಡುವ ಪಾತ್ರಗಳನ್ನು ಮಾಡಲೆ ಇಲ್ಲ. ಡಬ್ಬಲ್ ಮೀನಿಂಗ್ ಡೈಲಾಗ್, ಕೆಟ್ಟ ಶಬ್ದಗಳ ಬಳಕೆ ಯಾವುದೂ ಇಲ್ಲ. ಪಾತ್ರಗಳ ಆಯ್ಕೆಯಲ್ಲಿ ಕೂಡ ಅವರು ತುಂಬಾ ಎಚ್ಚರ ವಹಿಸುತ್ತಿದ್ದರು. ಅವರು ತುಂಬಾ ವೇದಿಕೆಯಲ್ಲಿ ಹೇಳುತ್ತಿದ್ದ ಮಾತುಗಳು ನನಗೆ ಹೆಚ್ಚು ತಟ್ಟಿವೆ. ನುಡಿದಂತೆ ನಡೆದ ಕನ್ನಡದ ವರನಟ.

“ನಾವು ಬೇಡ ಅಂದರೂ ನಮ್ಮನ್ನು ಸಾವಿರಾರು ಜನರು ಅನುಕರಣೆ ಮಾಡುತ್ತಾರೆ. ಹೆಚ್ಚಿನವರು ಯುವಜನರು. ಅವರು ನಮ್ಮನ್ನು ಅನುಕರಣೆ ಮಾಡಿ ಸಿಗರೇಟ್, ಹೆಂಡ ಅಭ್ಯಾಸ ಮಾಡಿದರೆ ಸಾಮಾಜಿಕ ಆರೋಗ್ಯವು ಹಾಳಾಗುತ್ತದೆ. ಒಬ್ಬ ಹೀರೋನನ್ನು ವಿಜೃಂಭಣೆ ಮಾಡಲು ಹೋಗಿ ನಾವು ಸಮಾಜವನ್ನು ಖಂಡಿತ ಕೆಡಿಸಬಾರದು. ನಾವು ಸಾಧ್ಯ ಆದರೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು” ಅನ್ನುತ್ತಿದ್ದರು. ಎಷ್ಟು ಅರ್ಥಗರ್ಭಿತ ಮಾತು ಅಲ್ಲವೇ. ಡಾ. ರಾಜ್ ಮಾತು ಮಾತ್ರವಲ್ಲ, ತಮ್ಮ ಮಾತಿನಂತೆಯೇ ಬದುಕಿದ್ದರು.

ಅಮಿತಾಬ್ ಒಡ್ಡಿದ ಆಮಿಷಕ್ಕೂ ರಾಜ್ ಬಗ್ಗಲಿಲ್ಲ: ಒಮ್ಮೆ ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ತನ್ನ ABCL ಕಂಪೆನಿಯ ಮೂಲಕ ‘ವಿಶ್ವ ಸುಂದರಿ’ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಆಗ ರಾಜ್ಯ ಪೂರ್ತಿ ತೀವ್ರವಾದ ನೀರಿನ ಕ್ಷಾಮವು ಇತ್ತು. ಕರ್ನಾಟಕದ ರೈತರು ಪ್ರತಿಭಟನೆ ಮಾಡಿ ಬೀದಿಗೆ ಇಳಿದಿದ್ದರು. ರಾಜ್ಯದಲ್ಲಿ ಭಾರೀ ಪ್ರತಿಭಟನೆ ಆದಾಗ ಅದನ್ನು ಶಮನ ಮಾಡಲು ಬೇರೆ ದಾರಿಯೆ ಇಲ್ಲದೆ ಅಮಿತಾಬ್ ಡಾ. ರಾಜ್ ಅವರ ಮನೆಗೆ ಬಂದು ನೀವು ಉದ್ಘಾಟನೆಗೆ ಬರಬೇಕು ಎಂದು ಕೇಳಿಕೊಂಡಿದ್ದ. ಆ ಸೌಂದರ್ಯ ಸ್ಪರ್ಧೆಯ ಕಾರ್ಯಕ್ರಮವು ಜಗತ್ತಿನ ಇನ್ನೂರಕ್ಕಿಂತ ಅಧಿಕ ಸಂಖ್ಯೆಯ ರಾಷ್ಟ್ರಗಳಲ್ಲಿ ಟಿವಿ ನೇರಪ್ರಸಾರ ಆಗುತ್ತದೆ ಎಂದೆಲ್ಲ ಹೇಳಿ ಆಮಿಷವನ್ನು ಒಡ್ಡಿದ್ದ. ರಾಜ್ ಅವರ ಮಕ್ಕಳೂ ಕೂಡ ನೀವು ಹೋಗಿ ಅಪ್ಪ ಎಂದು ಹೇಳಿದ್ದರು.

ಆದರೆ ರಾಜಕುಮಾರ್ ಅವರು ಅಮಿತಾಬ್ ಆಮಂತ್ರಣ ನಯವಾಗಿ ನಿರಾಕರಿಸಿ “ಸಾರಿ. ನನ್ನ ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಾನು ಉದ್ಘಾಟನೆಗೆ ಬರಲಾರೆ” ಎಂದು ಹೇಳಿದ್ದರು. ಡಾ. ರಾಜ್ ಅವರು ಗ್ರೇಟ್ ಆಗುವುದು ಇಂತಹ ನೂರಾರು ಕಾರಣಕ್ಕೆ. ಹೊಗೆ, ಹೆಂಡ ಇಲ್ಲದ ಸಿನಿಮಾಗಳೇ ಇಲ್ಲ: ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ ಇತ್ತೀಚೆಗೆ ಬರುವ ಎಲ್ಲ ಭಾಷೆಯ ಸಿನೆಮಾಗಳಲ್ಲಿ ಹೀರೋ ಪಾತ್ರದ ವೈಭವೀಕರಣ ಮಾಡಲು ಕುಡಿತ, ಹೊಗೆ ಬಿಡುವುದು, ಅಶ್ಲೀಲ ಪದ ಬಳಕೆ ಮೊದಲಾದವುಗಳನ್ನು ಒಂದಿಷ್ಟೂ ಸಂಕೋಚ ಮಾಡದೆ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ಬಿಡುಗಡೆಯಾದ KGF ಪಾರ್ಟ್ 2 ಸಿನೆಮಾದಲ್ಲಿ ಹೀರೋ ಐವತ್ತು ಶೇಕಡಾಕ್ಕಿಂತ ಅಧಿಕ ದೃಶ್ಯಗಳಲ್ಲಿ ಹೊಗೆ ಮತ್ತು ನಷೆಗಳಲ್ಲಿ ಮುಳುಗಿರುತ್ತಾನೆ.

ಆಗೆಲ್ಲ ಪರದೆಯ ಮೂಲೆಯಲ್ಲಿ ‘ಸ್ಮೋಕಿಂಗ್ ಆಂಡ್ ಡ್ರಿಂಕಿಂಗ್ ಆರ್ ಇಂಜುರಿಯಸ್ ಟು ಹೆಲ್ತ್’ ಎಂಬ ಸಣ್ಣ ಕ್ಯಾಪ್ಶನ್ ಇದ್ದೇ ಇರುತ್ತದೆ. ಅದು ಮಾತ್ರ ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಸೆನ್ಸಾರ್ ಮಂಡಳಿಯು ಅಂತಹ ದೃಶ್ಯಗಳ ಬಗ್ಗೆ ಯಾವ ಗಂಭೀರವಾದ ಕ್ರಮವನ್ನು ಇದುವರೆಗೆ ತೆಗೆದುಕೊಂಡ ಉದಾಹರಣೆ ಇಲ್ಲ. ಜಾಹೀರಾತುಗಳಿಗೆ ಕೂಡ ಸೆನ್ಸಾರ್ ಬೇಕು. ಡಾ. ರಾಜ್ ಸಿನೆಮಾ ಮಾತ್ರವಲ್ಲ ತಾನು ಅಭಿನಯಿಸುವ ಜಾಹೀರಾತುಗಳಲ್ಲಿ ಕೂಡ ಅಂತಹ ಪ್ರಮಾದಗಳನ್ನು ಮಾಡುತ್ತಿರಲಿಲ್ಲ. ನಂದಿನಿ ಹಾಲಿನ ಜಾಹೀರಾತಿನಲ್ಲಿ ರಾಜ್ ಸಂಭಾವನೆ ಪಡೆಯದೆ ಅಭಿನಯ ಮಾಡಿದ್ದರು.

ಗಬ್ಬೆಸ್ಸಿದ ವಿಮಲ್ ಜಾಹೀರಾತು: ‘ಮಾತು ಮಾತಲ್ಲಿ ಕೇಸರಿ’ ಎಂದರು ಮಹಾನಟರು. ಕಳೆದ ವರ್ಷ ಆರಂಭವಾದ ಮಹಾ ಜಾಹೀರಾತಿನಲ್ಲಿ ಮಹಾ(?) ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಇವರು ದೊಡ್ಡ ಮೊತ್ತವನ್ನು ಕಂಪೆನಿಯಿಂದ ಪಡೆದುಕೊಂಡು ಅಭಿನಯ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲಿಯೂ ಒಂದು ಕಾಲದಲ್ಲಿ ಎಷ್ಟು ದುಡ್ಡು ಕೊಟ್ಟರೂ ಅಂತಹ ಜಾಹೀರಾತಲ್ಲಿ ನಟಿಸುವುದೇ ಇಲ್ಲ ಅಂತ ಹೇಳಿಕೆಯನ್ನು ಕೊಟ್ಟಿದ್ದ ಅಕ್ಷಯಕುಮಾರ್ ಎಂಬ ಸೆಲೆಬ್ರಿಟಿ ನಟನು ಆ ಜಾಹೀರಾತಲ್ಲಿ ಅಭಿನಯ ಮಾಡಿದ್ದು ತಪ್ಪು ಎಂದು ಜನರು ನೇರವಾಗಿ ಖಂಡಿಸಿದ್ದರು. ಅದಕ್ಕೆ ಅಕ್ಷಯ್ ತನ್ನ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿ ತನ್ನ ಒಪ್ಪಂದದಿಂದ ಹೊರಬಂದಿದ್ದಾನೆ.

ಆದರೆ ಉಳಿದ ಇಬ್ಬರು ಸೆಲೆಬ್ರಿಟಿಗಳು ಕ್ಷಮೆ ಕೇಳಿದ್ದು ಕೂಡ ಇಲ್ಲ. ಒಪ್ಪಂದದಿಂದ ವಿಮುಖ ಆದದ್ದೂ ಇಲ್ಲ. ಆ ಜಾಹೀರಾತು ಮಾತ್ರ ಈ ವರ್ಷದ ಐಪಿಎಲ್ ಪಂದ್ಯಗಳು ಮುಗಿಯುವ ತನಕ(ಮುಂದೆ ಕೂಡ) ಟಿವಿ ಪರದೆಯಲ್ಲಿ ಹೊಗೆ ಬಿಡುತ್ತಾ ಇರುತ್ತದೆ. ಈಗ ಐಪಿಎಲ್ ಪಂದ್ಯಗಳ ಪ್ರತೀ ಓವರುಗಳ ನಡುವೆ ಬರುವ ಇಂತಹ ಜಾಹೀರಾತುಗಳನ್ನು ನಿಧಾನವಾಗಿ ಗಮನಿಸಿ. ಸಾಧ್ಯವಾದರೆ ಅವುಗಳನ್ನು ನಿಮ್ಮ ಮಕ್ಕಳಿಗೆ ತೋರಿಸಬೇಡಿ.

ಸೆಲೆಬ್ರಿಟಿ ಆಗುವುದು ಅಷ್ಟು ಸುಲಭ ಅಲ್ಲವೇ ಅಲ್ಲ. ಎಲ್ಲ ಸ್ಟಾರ್ ನಟರು ರಾಜಕುಮಾರ್ ಅವರ ಹಾಗೆ ಯೋಚನೆ ಮಾಡಿದರೆ ಒಂದಿಷ್ಟು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಹುದು. ಅಲ್ಲವೇ? ಅಂದ ಹಾಗೆ ಇಂದು ಡಾಕ್ಟರ್ ರಾಜಕುಮಾರ್ ಹುಟ್ಟಿದ ಹಬ್ಬ. ಕನ್ನಡಿಗರು ಸಂಭ್ರಮಿಸಬೇಕಾದ ದಿನ ಇದು.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...

ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ, ನ.26: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ...

ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.25: ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ...
error: Content is protected !!