ಮೊದಲ ಹಾಡಿಗೇ ರಾಷ್ಟ್ರಪ್ರಶಸ್ತಿ ಪಡೆದವರು ಶ್ರೇಯಾ: 2000ದಲ್ಲಿ ಝೀ ಟಿವಿ ನಡೆಸಿದ ರಾಷ್ಟ್ರಮಟ್ಟದ ರಿಯಾಲಿಟಿ ಶೋ ‘ಸಾರೆಗಮ’ ಗೆದ್ದಾಗ ಆಕೆಗೆ ಇನ್ನೂ 16 ವರ್ಷ ವಯಸ್ಸು! ಆಕೆಯ ಧ್ವನಿಯಲ್ಲಿ ಇದ್ದ ಒಂದು ಮುಗ್ಧತೆ ಮತ್ತು ವೈವಿಧ್ಯತೆಗಳು ಇಡೀ ರಾಷ್ಟ್ರದ ಗಮನವನ್ನು ಸೆಳೆದಾಗಿತ್ತು. ಆ ಶೋ ನೋಡುತ್ತಿದ್ದ ನಿರ್ಮಾಪಕ ಸಂಜಯ ಲೀಲಾ ಬನ್ಸಾಲಿ ಅವರ ತಾಯಿ ಮುಂದಿನ ಸಿನೆಮಾದಲ್ಲಿ ಆಕೆಯಿಂದ ಹಾಡಿಸಲೇಬೇಕು ಎಂದು ತಮ್ಮ ಮಗನಿಗೆ ಹೇಳಿದ್ದರು. ತಾಯಿಯ ಮಾತಿಗೆ ಗೌರವ ಕೊಟ್ಟ ಬನ್ಸಾಲಿ ತನ್ನ ಮುಂದಿನ ದೇವದಾಸ್ ಹಿಂದೀ ಸಿನೆಮಾದ ಐದು ಹಾಡುಗಳನ್ನು ಆಕೆಯಿಂದ ಹಾಡಿಸಲು ಪ್ಲಾನ್ ಮಾಡಿದ್ದರು. ಆಗ ಆಕೆಗೆ ಸೆಕೆಂಡ್ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದವು.
ಆಕೆ ವಿಜ್ಞಾನದ ವಿದ್ಯಾರ್ಥಿ ಬೇರೆ: ಮೊದಲ ಹಾಡಿಗೇ ರಾಷ್ಟ್ರಪ್ರಶಸ್ತಿ! ಪರೀಕ್ಷೆಗಳ ಒತ್ತಡದಲ್ಲಿ ಕೂಡ ಆಕೆ ಹಾಡಲು ಬಂದರು. ಸ್ಟುಡಿಯೊಕ್ಕೆ ಬರುವಾಗ ಪುಸ್ತಕ ತೆಗೆದುಕೊಂಡು ಬಂದು ಓದುವ ಗುಂಗಿನಲ್ಲಿಯೇ ಇದ್ದರು! ಅದರ ಮಧ್ಯೆ ಕೂಡ ಒಮ್ಮೆ ರಿಹರ್ಸಲ್ ತೆಗೆದುಕೊಂಡು ಒಂದೇ ಉಸಿರಲ್ಲಿ ಕಣ್ಣು ಮುಚ್ಚಿ ಎರಡು ಹಾಡುಗಳನ್ನು ಹಾಡಿ ಮುಗಿಸಿದರು. ಆ ಹಾಡುಗಳೆಂದರೆ ಭೈರೆ ಪಿಯಾ ಮತ್ತು ಡೊಲಾರೆ ಆಗಿದ್ದವು.
ಆಕೆ ಹಾಡು ಮುಗಿಸಿದಾಗ ಸ್ಟುಡಿಯೋ ಒಳಗೆ ಇದ್ದ ಅಷ್ಟೂ ಸ್ಟಾಫ್, ನಿರ್ಮಾಪಕ ಬನ್ಸಾಲಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಸೇರಿ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದನೆಯ ಹೂಮಳೆ ಸುರಿದಿದ್ದರು! ಆ ಹೊತ್ತಿಗೆ ಒಬ್ಬ ಮಹಾನ್ ಪ್ರತಿಭೆಯ ಉದಯ ಆಗಿತ್ತು. ಆ ಎರಡೂ ಹಾಡುಗಳಿಗೆ ಫಿಲಂಫೇರ್ ಪ್ರಶಸ್ತಿ ದೊರೆಯಿತು. ಬೆಸ್ಟ್ ಸಿಂಗರ್ ರಾಷ್ಟ್ರಪ್ರಶಸ್ತಿ ಕೂಡ ದೊರೆಯಿತು. ಅದರ ಜೊತೆಗೆ ಉದಯೋನ್ಮುಖ ಗಾಯಕರಿಗೆ ಕೊಡುವ ಆರ್ ಡಿ ಬರ್ಮನ್ ಪ್ರಶಸ್ತಿ ಕೂಡ ಆಕೆಗೆ ಒಲಿಯಿತು. ಆಕೆ ಶ್ರೇಯಾ ಘೋಷಾಲ್, ದೇವದಾಸ ಸಿನೆಮಾದ ಐಶ್ವರ್ಯ ರೈಯವರ (ಪಾರೋ) ಪಾತ್ರದ ಐದು ಹಾಡುಗಳು ಸೂಪರ್ ಹಿಟ್ ಆದವು. ಮುಂದೆ ಆಕೆ ಮುಟ್ಟಿದ್ದೆಲ್ಲ ಚಿನ್ನ ಆಯ್ತು.
ಬಾಲ್ಯದಲ್ಲಿ ಅಮ್ಮನ ಹಾಡುಗಳೇ ಆಕೆಗೆ ಸ್ಫೂರ್ತಿ: ಆಕೆಯ ತಾಯಿ ಶರ್ಮಿಷ್ಟಾ ಘೋಷಾಲ್ ಬಂಗಾಳಿ ಮೂಲದವರು. ಆಕೆಯು ಅಡುಗೆ ಕೆಲಸ ಮಾಡುವಾಗ ಬಂಗಾಳಿ ಹಾಡುಗಳನ್ನು ಹಾಡುತ್ತಿದ್ದರು. ಭಜನ್ ತುಂಬಾ ಚೆನ್ನಾಗಿ ಹಾಡುವವರು. ಅವುಗಳನ್ನು ಕೇಳುತ್ತಾ ಬೆಳೆದವರು ಶ್ರೇಯಾ. ಆಕೆಯ ಸಿಂಗಿಂಗ್ ಪ್ರತಿಭೆಯನ್ನು ನಾಲ್ಕನೇ ವಯಸ್ಸಿಗೇ ಗುರುತಿಸಿ ವೇದಿಕೆಯಲ್ಲಿ ಹಾಡಿದವರು ಅದೇ ಅಮ್ಮ. ಮುಂದೆ ಆರನೇ ವಯಸ್ಸಿನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತರಬೇತಿ ಆರಂಭ ಆಯಿತು. ಅದರ ಜೊತೆಗೆ ಲಘು ಸಂಗೀತ, ಭಜನ್, ಘಜಲ್ ಎಲ್ಲವನ್ನೂ ಆಕೆ ಕಲಿತರು. ಆಕೆ ಮನೆಯಲ್ಲಿ ರಿಯಾಝ್ ಮಾಡಲು ಕುಳಿತಾಗ ಅದೇ ಅಮ್ಮ ತಂಬೂರಾ ಹಿಡಿದು ಕುಳಿತಿದ್ದರು. ತಪ್ಪುಗಳನ್ನು ನೇರವಾಗಿ ಹೇಳುತ್ತಿದ್ದರು. ಎಲ್ಲಿ ಸಂಗೀತ ಸ್ಪರ್ಧೆ ಇದ್ದರೂ ಮಗಳನ್ನು ಸಿದ್ಧತೆ ಮಾಡಿ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಮಗಳ ಸಾಧನೆಯಲ್ಲಿ ಸ್ಫೂರ್ತಿ ತುಂಬಿದ ಮೊದಲ ಹೆಸರು ಅದೇ ಅಮ್ಮ ಶರ್ಮಿಷ್ಟ.
ಸೆಕೆಂಡ್ ಪಿಯುಸಿ ವಿಜ್ಞಾನ ಓದುತ್ತಿದ್ದ ಶ್ರೇಯಾಗೆ ಅಧ್ಯಯನಕ್ಕೆ ಸಮಯ ಸಿಗದೆ ಹೋದಾಗ ಇಡೀ ಕೋರ್ಸನ್ನು ರಿಜೆಕ್ಟ್ ಮಾಡಿ ಆರ್ಟ್ಸ್ ದಾರಿ ಹಿಡಿದರು. ಇಂಗ್ಲಿಷ್ ಮೇಜರ್ ಜೊತೆಗೆ ಆರ್ಟ್ಸ್ ಪದವಿ ಪಡೆದರು. ಆದರೆ ಸಂಗೀತದ ಕಲಿಕೆ ಮುಂದುವರೆಯಿತು. ಹನ್ನೊಂದು ವರ್ಷ ಆದಾಗ ಹಿಂದೂಸ್ತಾನಿ ಸಂಗೀತ ಕಛೇರಿ ಕೊಡುವಷ್ಟು ಮಟ್ಟಕ್ಕೆ ಆಕೆ ಬೆಳೆದಾಗಿತ್ತು! ಮುಂದೆ ಝೀ ಟಿವಿಯ ಸಾರೆಗಮ ಶೋ ಯಶಸ್ಸು ಮತ್ತು ಅದರ ಬೆನ್ನಿಗೆ ದೊರೆತ ದೇವದಾಸ್ ಹಾಡುಗಳ ಕೀರ್ತಿಗಳು ಆಕೆಯನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋದವು
ಮುಂದೆ ಆಕೆ ಮುಟ್ಟಿದ್ದೆಲ್ಲ ಚಿನ್ನ ಆಯಿತು: ಮುಂದೆ 22 ವರ್ಷಗಳ ಅವಧಿಯಲ್ಲಿ ಆಕೆ ಸಾವಿರಾರು ಹಾಡುಗಳನ್ನು 17 ಭಾಷೆಗಳಲ್ಲಿ ಹಾಡಿ ಆಗಿದೆ. ಕನ್ನಡದಲ್ಲಿ ಕೂಡ ಆಕೆಯು 400ಕ್ಕಿಂತ ಅಧಿಕ ಹಾಡುಗಳನ್ನು ಹಾಡಿದ್ದಾರೆ. ತುಳು ಭಾಷೆಯಲ್ಲಿ ಕೂಡ ಹಾಡಿದ್ದಾರೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಾಗಿದೆ! ನಾಲ್ಕು ಕೇರಳ ರಾಜ್ಯ ಪ್ರಶಸ್ತಿಗಳು ದೊರೆತಿವೆ. ತಮಿಳುನಾಡು ರಾಜ್ಯದ ಎರಡು ರಾಜ್ಯಪ್ರಶಸ್ತಿ, ಏಳು ಫಿಲ್ಮ್ ಫೇರ್ ಪ್ರಶಸ್ತಿ, ಹತ್ತು ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿಗಳು….ಈಗಾಗಲೇ ಆಕೆಯ ಶೋ ಕೇಸಲ್ಲಿ ಇವೆ! ಎಲ್ಲಕಿಂತ ಹೆಚ್ಚಾಗಿ ಲತಾ ಮಂಗೇಷ್ಕರ್ ಆಕೆಯನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ! ‘ನಾನು ಲತಾಜೀ ಅವರ ಮುಂದೆ ಇನ್ನೂ ಸಣ್ಣ ಮಗು. ಅವರಿಂದ ತುಂಬಾ ಕಲಿತಿದ್ದೇನೆ’ ಎನ್ನುವ ಸೌಜನ್ಯ ಕೂಡ ಶ್ರೇಯಾ ಅವರಲ್ಲಿ ಇದೆ.
ಶ್ರೇಯಾ ಬರೇ ಹಾಡುವ ಪ್ರತಿಭೆ ಮಾತ್ರವಲ್ಲ, ಸೌಂದರ್ಯ ದೇವತೆ ಕೂಡ ಎಂದು ಆಕೆಯ ಅಭಿಮಾನಿಗಳು ಸಂಭ್ರಮ ಪಡುತ್ತಾರೆ. ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಆಕೆಗೆ ದೊರೆತರೂ ಅದು ನನ್ನ ಕಪ್ ಆಫ್ ಟೀ ಅಲ್ಲ ಎಂದು ಅವರು ನಯವಾಗಿ ನಿರಾಕರಿಸಿ ಸಂಗೀತದಲ್ಲಿಯೇ ಮುಂದುವರೆಯುತ್ತಿರುವುದು ನಿಜಕ್ಕೂ ಅದ್ಭುತ!
ಜಗದಗಲ ಹರಡಿದೆ ಶ್ರೇಯಾ ಕೀರ್ತಿ: ಶ್ರೇಯಾ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್ ಆಗಿವೆ. ನಿರ್ಮಾಪಕರು ತಮ್ಮ ಸಿನೆಮಾದಲ್ಲಿ ಆಕೆಯಿಂದಲೆ ಹಾಡಿಸಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಎಷ್ಟು ತಿಂಗಳು ಬೇಕಾದರೂ ಕಾಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಕೆಗೆ ಸ್ಪರ್ಧೆಯೇ ಇಲ್ಲ ಎಂಬಷ್ಟು ಆಕೆ ಪ್ರಸಿದ್ದಿ ಪಡೆದಿದ್ದಾರೆ. ವಿದೇಶದ ಆಕೆಯ ಮ್ಯೂಸಿಕಲ್ ನೈಟಗಳಿಗೆ ಜನರು ಕಿಕ್ಕಿರಿದು ಸೇರುತ್ತಾರೆ. ಅಮೆರಿಕಾದ ಓಹಿಯೋ ಎಂಬ ಸಂಸ್ಥಾನದ ಗವರ್ನರ್ ಆಕೆಯ ಬಹು ದೊಡ್ಡ ಅಭಿಮಾನಿ. ಆತನು ತನ್ನ ಸಂಸ್ಥಾನದಲ್ಲಿ ಜೂನ್ 26ನ್ನು ಶ್ರೇಯಾ ಘೋಷಾಲ್ ದಿನ ಎಂದು ಘೋಷಣೆ ಮಾಡಿದ್ದಾರೆ! ದೆಲ್ಲಿಯ ತುಸಾಡ್ ಮ್ಯೂಸಿಯಂನಲ್ಲಿ ಆಕೆಯ ಮೇಣದ ಪ್ರತಿಮೆ ಸ್ಥಾಪನೆ ಆಗಿದೆ. ಶ್ರೇಯಾ ಇಂದು ಜಗದಗಲ ಕೀರ್ತಿ ಪಡೆದಿದ್ದಾರೆ.
ಆಕೆಯ ಕ್ಲಾಸ್, ಕ್ವಾಲಿಟಿ ಮತ್ತು ಸ್ಟೈಲ್ ಯಾರಲ್ಲೂ ಇಲ್ಲ: ಇದು ಅಮೆರಿಕನ್ ಪತ್ರಿಕೆ ಆಕೆಯ ಬಗ್ಗೆ ಬರೆದ ಸಾಲುಗಳು. ಕೀರ್ತಿ ಆಕೆಯ ತಲೆ ಕೆಡಿಸಿಲ್ಲ ಅನ್ನುವುದು ತುಂಬಾ ಗ್ರೇಟ್. ಎಲ್ಲ ವಿಧವಾದ ಹಾಡುಗಳಿಗೆ ಬೇಕಾದ ಸ್ವರ ವೈವಿಧ್ಯ ಆಕೆಗೆ ದೇವರು ಕೊಟ್ಟ ವರವೇ ಆಗಿದೆ. ಬೆಂಗಳೂರಿನ ಒಂದು ಗಣೇಶೋತ್ಸವದ ಪೆಂಡಾಲ್ ಆಕೆಯನ್ನು ಕರೆದು ವಿಶೇಷವಾದ ಸಂಗೀತ ಸಂಜೆ ಏರ್ಪಾಡು ಮಾಡಿತ್ತು. ಅಂದು ಆಕೆ ಹಾಡಿದ ಅಷ್ಟೂ ಹಾಡುಗಳು ಕನ್ನಡದ್ದೇ ಹಾಡುಗಳು! ಆಕೆ ಕೆಲವು ಗಣೇಶನ ಭಕ್ತಿಗೀತೆಗಳನ್ನು ಆ ಸಂಗೀತ ಸಂಜೆಗಾಗಿ ಕಲಿತು ಬಂದಿದ್ದರು! ಎಲ್ಲವೂ ಸೂಪರ್ ಹಿಟ್!
ಆಕೆಯ ಸ್ವರ ವೈವಿಧ್ಯ ಮತ್ತು ಕಷಿಷ್ ಆಕೆಯನ್ನು ಗೆಲ್ಲಿಸುವ ಮಂತ್ರಗಳು. ಶಾಸ್ತ್ರೀಯ ಹಾಡುಗಳು, ಮುಜ್ರಾ, ಟುಮ್ರಿ, ಗಝಲ್, ಭಜನ್, ರೊಮ್ಯಾಂಟಿಕ್ ಹಾಡು, ಜೋಗುಳದ ಹಾಡು, ಸೋಲೋ, ಡುಯೆಟ್…ಯಾವ ಹಾಡಾದರೂ ಆಕೆ ಹಾಡು ಮುಗಿಸುವಾಗ ಅದರಲ್ಲಿ ಆಕೆಯದೇ ಸಿಗ್ನೇಚರ್ ಬಿದ್ದಾಗಿರುತ್ತದೆ! ಅದು ಆಕೆಯ ಪ್ರತಿಭೆ.
ಜೆಹರ್ ಸಿನೆಮಾದ ಅಗರ್ ತುಂ ಮಿಲ್ ಜಾವೋ ಅಂತಹ ಮಾಧುರ್ಯ, ಆಶಿಕ್ ಬನಾಯಾ ಆಶಿಕ್ ಬನಾಯಾದ ಹಾಂಟಿಂಗ್ ಮೆಲಡಿ, ಗುರು ಸಿನೆಮಾದ ಬರ್ಸೋರೆ ಮೇಘಾ ಮೇಘಾ ಅಂತಹ ಮಳೆಯ ಹಾಡು, ಭೂಲ್ ಭೂಲಯ್ಯ ಸಿನೆಮಾದ ಮೇರೆ ಡೋಲನಾದಂತಹ ಶಾಸ್ತ್ರೀಯ ಹಾಡು, ಅಗ್ನಿ ಪಥ್ ಸಿನೆಮಾದ ಚಕ್ನಿ ಚಮೆಲಿಯ ತುಂಟತನ, ಡರ್ಟಿ ಪಿಕ್ಚರ್ ಸಿನೆಮಾದ ಉಲಾಲಾ ಊಲಾಲದ ಮಾದಕತೆ, ಹ್ಯಾಪಿ ನ್ಯೂ ಇಯರ್ ಸಿನೆಮಾದ ಮನ್ವ ಲಾಗೆ ಹಾಡಿನ ರೋಮಾನ್ಸ್, ಪದ್ಮಾವತ್ ಸಿನೆಮಾದ ಘೂಮರ್ ಹಾಡಿನ ಕ್ಲಾಸಿಕ್ ಟಚ್…! ಇವು ಆಕೆಯ ಪ್ರತಿಭೆಯ ಕೆಲವೇ ಕೆಲವು ಉದಾಹರಣೆಗಳು. ಟಿಪ್ ಆಫ್ ದ ಐಸ್ ಬರ್ಗ್ ಅಂದ ಹಾಗೆ.
ಕನ್ನಡದಲ್ಲಿಯೂ ಶ್ರೇಯಾ ಮಿಂಚು: ಪ್ಯಾರಿಸ್ ಪ್ರಣಯ ಸಿನೆಮಾದ ಕೃಷ್ಣ ನೀ ಬೇಗನೆ ಬಾರೋ ಹಾಡಿನ ಮೂಲಕ ಕನ್ನಡಕ್ಕೆ ಬಂದ ಶ್ರೇಯಾ ಮುಂದೆ ಮುಂಗಾರು ಮಳೆ, ಸಂಜು ವೆಡ್ಸ್ ಗೀತಾ, ಮೈನಾ, ಚಕ್ರವರ್ತಿ, ರಾಬರ್ಟ್, ಮುಸ್ಸಂಜೆ ಮಾತು, ಮೊಗ್ಗಿನ ಮನಸ್ಸು ಮೊದಲಾದ ನೂರಾರು ಸಿನೆಮಾಗಳಲ್ಲಿ ಹಾಡಿದ್ದಾರೆ. ಕನ್ನಡಿಗರು ಆಕೆ ನಮ್ಮದೇ ಮನೆ ಹುಡುಗಿ ಎಂಬಂತೆ ಆಕೆಯನ್ನು ಸ್ವೀಕಾರ ಮಾಡಿದ್ದಾರೆ. ಒಂದಕ್ಷರ ಸಾಹಿತ್ಯ ತಪ್ಪಾಗದ ಹಾಗೆ ಅವರು ಭಾವನೆ ತುಂಬಿ ಹಾಡುವ ರೀತಿಗೆ ಕನ್ನಡದ ಮಂದಿ ಫಿದಾ ಆಗಿದ್ದಾರೆ.
ಇಂದು ಕೀರ್ತಿಯ ಶಿಖರದಲ್ಲಿ ಇರುವ ಶ್ರೇಯಾ ಘೋಷಾಲ್ ಅವರಿಗೆ 38 ತುಂಬಿತು. ಆಕೆ ಇನ್ನಷ್ಟು ವರ್ಷ ತನ್ನ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡುವ ಸಾಧ್ಯತೆ ಇಲ್ಲ! ಯಾರೇನೇ ಹೇಳಲಿ ನಾನಂತೂ ಆಕೆಯ ಡೈ ಹಾರ್ಡ್ ಫ್ಯಾನ್ ಎನ್ನುವುದೇ ಭರತವಾಕ್ಯ. ಹ್ಯಾಪಿ ಬರ್ತಡೇ ಟು ದ ಕ್ವೀನ್ ಆಫ್ ಮೆಲಡಿ..
-ರಾಜೇಂದ್ರ ಭಟ್ ಕೆ