1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು! ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಸಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಸರ ಎದುರು ಕೂತು ಅವರ ಮಾತುಗಳನ್ನೇ ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಸರಿಗೆ ಹೇಳಿದರು – ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ! ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ ಬಿಟ್ಟರೆ ಬೇರೆ ಯಾರೂ ಇಲ್ಲ!
ಸುಭಾಸರು ಆಕೆಯ ತಲೆ ನೇವರಿಸಿ ಕೇಳಿದರು – ಹೌದಾ ಬೆಹನ್? ಆಕೆ ಹೌದೆಂದು ತಲೆ ಆಡಿಸಿ ‘ಸುಭಾಸ್ ಬಾಬು, ನನಗೆ ಬೇರೆ ಯಾವುದೇ ಕನಸುಗಳಿಲ್ಲ. ಭಾರತವು ಸ್ವಾತಂತ್ರ್ಯ ಪಡೆಯಲು ಅಗತ್ಯ ಬಿದ್ದರೆ ನನ್ನ ಪ್ರಾಣವನ್ನು ಕೊಡಲು ನಾನು ಹಿಂದೆ ಮುಂದೆ ನೋಡುವುದಿಲ್ಲ!’ ಎಂದಾಕೆ ಗಟ್ಟಿಯಾಗಿ ಹೇಳುವಾಗ ಆಕೆಯ ಕಣ್ಣಲ್ಲಿ ಸುಭಾಸರಿಗೆ ಬೆಂಕಿ ಮತ್ತು ಬೆಂಕಿ ಮಾತ್ರ ಕಂಡಿತ್ತು!
ಆಕೆ ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್: ಆಕೆಯ ಬದುಕು ಮತ್ತು ಹೋರಾಟಗಳು ಯಾರಿಗಾದರೂ ಪ್ರೇರಣೆ ಕೊಡುವಂಥದ್ದು. ಬಂಗಾಳದಲ್ಲಿ 1920-40ರ ಅವಧಿಯಲ್ಲಿ ನೂರಾರು ಕ್ರಾಂತಿಕಾರಿ ಮಹಿಳೆಯರು ಸುಭಾಸರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಭಾರತ ಮಾತೆಗೆ ಸಮರ್ಪಣೆ ಆದ ನೂರಾರು ಉದಾಹರಣೆಗಳು ದೊರೆಯುತ್ತವೆ. ಅದರಲ್ಲಿ ಒಂದು ಶ್ರೇಷ್ಟ ಹೆಸರು ಬೀನಾ ದಾಸ್!
ಆಕೆಯ ಕುಟುಂಬವೇ ಕ್ರಾಂತಿಕಾರಿ ಕುಟುಂಬ: ಬೀನಾದಾಸ್ (1911-1986) ಹುಟ್ಟಿದ್ದೇ ಒಂದು ಕ್ರಾಂತಿಕಾರಿ ಕುಟುಂಬದಲ್ಲಿ. ಆಕೆಯ ತಾಯಿ ಸರಲಾ ದೇವಿ ಕ್ರಾಂತಿಕಾರಿಗಳಿಗೆ ಒಂದು ಹಾಸ್ಟೆಲ್ ನಡೆಸುತ್ತಾ ಇದ್ದರು. ಕ್ರಾಂತಿಕಾರಿಗಳಿಗೆ ಆಯುಧಗಳು, ಬಾಂಬ್, ರೈಫಲ್ ಎಲ್ಲವೂ ಆ ಹಾಸ್ಟೆಲ್ ಮೂಲಕ ದೊರೆಯುತ್ತಿದ್ದವು! ಆಕೆಯ ತಂದೆ ಬೇನಿ ಮಾಧಬ್ ದಾಸ್ ಒಬ್ಬ ಬ್ರಹ್ಮ ಸಮಾಜದ ಶಿಕ್ಷಕ. ಕ್ರಾಂತಿಕಾರಿ ವಿಚಾರಧಾರೆ ಹೊಂದಿದವರು. ಹಾಗೆ ಅವರ ಮನೆಗೆ ಹಲವು ಬಾರಿ ಬೋಸರು ಬರುತ್ತಿದ್ದರು. ಆಗೆಲ್ಲ ಬೀನಾ ದಾಸ್ ಮೈಮರೆತು ಸುಭಾಸ್ ಬಾಬು ಮುಂದೆ ಕೂತು ಅವರ ಮಾತುಗಳನ್ನು ಕೇಳುತ್ತಿದ್ದರು. “ನನ್ನ ಧರ್ಮವೇ ರಾಷ್ಟ್ರಧರ್ಮ! ಅದನ್ನು ಮೀರಿದ ಯಾವ ದೇವರೂ ನನಗೆ ಗೊತ್ತಿಲ್ಲ!” ಎಂದಾಕೆ ಎಲ್ಲ ವೇದಿಕೆಯಲ್ಲೂ ಹೇಳುತ್ತಿದ್ದರು.
ಆಕೆ ಕಾಲೇಜಿನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ಕ್ರಾಂತಿಕಾರಿ ವೇದಿಕೆಗೆ ಸೇರುತ್ತಾರೆ. ಕಿಡಿಕಾರುವ ಭಾಷಣಗಳನ್ನು ಮಾಡುತ್ತಾರೆ. ಕತ್ತಿ ವರಸೆ, ಕುದುರೆ ಸವಾರಿ ಮೊದಲಾದವುಗಳನ್ನು ಕಲಿಯುತ್ತಾರೆ. ಕೊಲ್ಕತ್ತ ವಿವಿಯ ಮೂಲಕ ತನ್ನ ಪದವಿಯನ್ನು ಪಡೆಯುತ್ತಾರೆ.
ಫೆಬ್ರುವರಿ 6, 1932 – ಆಕೆಯು ಕಾಯುತ್ತಿದ್ದ ದಿನವು ಬಂದೇ ಬಿಟ್ಟಿತ್ತು: ಆಕೆಯ ವಯಸ್ಸು ಆಗ ಕೇವಲ 21. ಅಂದು ಆಕೆಯ ಪದವಿ ಪ್ರದಾನ ದಿನ. ಅವಳ ದೀರ್ಘಕಾಲದ ಅಧ್ಯಯನದ ಫಲವು ಕೈ ಸೇರುವ ದಿನ. ಕೊಲ್ಕತ್ತ ವಿವಿಯ ಸೆನೆಟ್ ಹಾಲ್ ಕಿಕ್ಕಿರಿದು ತುಂಬಿತ್ತು. ಪದವಿ ಪ್ರದಾನ ಮಾಡಲು ಕೋಲ್ಕತ್ತಾದ ಆಗಿನ ಗವರ್ನರ್ ಸ್ಟಾನ್ಲಿ ಜಾಕ್ಸನ್ ಅತಿಥಿಯಾಗಿ ಆಗಮಿಸಿ ವೇದಿಕೆಯಲ್ಲಿ ಕುಳಿತಿದ್ದನು. ಬೇರೆಲ್ಲಾ ವಿದ್ಯಾರ್ಥಿಗಳು ಪದವಿ ಪಡೆಯುವ ಸಂಭ್ರಮದಲ್ಲಿ ಮುಳುಗಿದ್ದರೆ, ಬೀನಾದಾಸ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು!
ತನ್ನ ಸ್ನೇಹಿತೆ ಆದ ಕಮಲಾದಾಸ್ ಗುಪ್ತಾ ಹತ್ತಿರ ಆಕೆ ಒಂದು ಸಣ್ಣ ಪಿಸ್ತೂಲನ್ನು ಎರವಲು ತಂದಿದ್ದಳು. ಅದರಲ್ಲಿ ಐದು ಬುಲೆಟ್ ಬೆಚ್ಚಗೆ ಕೂತಿದ್ದವು! ಆಶ್ಚರ್ಯ ಅಂದರೆ ಆಕೆ ಅದುವರೆಗೆ ಪಿಸ್ತೂಲನ್ನು ಬಳಕೆ ಮಾಡಿಯೇ ಇರಲಿಲ್ಲ! ಆದರೆ ಸುಭಾಸ್ ಬಾಬು ಅವರು ತುಂಬಿದ್ದ ಧೈರ್ಯ ಮತ್ತು ರಾಷ್ಟ್ರಪ್ರೇಮಗಳು ಆಕೆಯ ಎದೆಯಲ್ಲಿ ತುಂಬಿದ್ದವು!
ಆಕೆ ಪಿಸ್ತೂಲನ್ನು ತನ್ನ ಉದ್ದವಾದ ಗೌನ್ ಒಳಗೆ ಅಡಗಿಸಿಟ್ಟು ವೇದಿಕೆಯ ಬಳಿ ಬಂದರು. ಇನ್ನೇನು ಗವರ್ನರ್ ಭಾಷಣ ಮಾಡಲು ಎದ್ದನು ಅಂದಾಗ ಪಿಸ್ತೂಲ್ ಹೊರತೆಗೆದು ಆತನ ಕಡೆಗೆ ಗುರಿ ಇಟ್ಟು ಮೂರು ಬುಲೆಟ್ ಹಾರಿಸಿದರು! ಎರಡು ಬುಲೆಟ್ ಗುರಿ ತಪ್ಪಿತ್ತು. ಮೂರನೇ ಬುಲೆಟ್ ಆ ಗವರ್ನರ್ ಕಿವಿಯನ್ನು ಸವರಿ ಹಾದು ಹೋಯಿತು.
ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಆಕೆಯನ್ನು ಸುತ್ತುವರಿದು ಪಿಸ್ತೂಲ್ ಕಸಿದುಕೊಂಡರು ಮತ್ತು ಆಕೆಯನ್ನು ಬಂಧಿಸಿದರು. ಆಕೆ ಓಡಿ ಹೋಗುವ ಯಾವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಅಂದು ಆಕೆ ಮಿಸ್ ಮಾಡಿಕೊಂಡ ಪದವಿ ಮುಂದೆ ಆಕೆಗೆ ಯಾವತ್ತೂ ದೊರೆಯಲಿಲ್ಲ. ಬ್ರಿಟಿಷ್ ಸರಕಾರ ವಿಚಾರಣೆಯ ನಾಟಕ ಮಾಡಿ ಆಕೆಯನ್ನು ಒಂಬತ್ತು ವರ್ಷಗಳ ಕಾಲ ಜೈಲಿಗೆ ಅಟ್ಟಿತ್ತು. ಬ್ರಿಟಿಷ್ ಗವರ್ನರ್ ಹತ್ಯೆಯ ಯತ್ನವು ಆಗಲೇ ರಾಷ್ಟ್ರ ಮಟ್ಟದಲ್ಲಿ ಭಾರೀ ದೊಡ್ಡ ಸುದ್ದಿ ಆಗಿತ್ತು! ಅದಕ್ಕಾಗಿ ಆಕೆ ಎದುರಿಸಿದ್ದು ಅತ್ಯಂತ ಕಠಿಣವಾದ ಸೆರೆವಾಸ! ಆಕೆ ಕ್ಷಮೆ ಕೇಳಿದರೆ ಶಿಕ್ಷೆ ಕಡಿಮೆ ಆಗುತ್ತಿತ್ತು. ಆದರೆ ಬೀನಾದಾಸ್ ಕ್ಷಮೆ ಕೇಳಲಿಲ್ಲ. ಬ್ರಿಟಿಷ್ ಸರಕಾರಕ್ಕೆ ಕರುಣೆ ಬರಲಿಲ್ಲ.
ಮತ್ತೆ ಸ್ವಾತಂತ್ರ್ಯದ ಹೋರಾಟ, ಮತ್ತೆ ಸೆರೆವಾಸ: 1939ರಲ್ಲಿ ಸೆರೆಮನೆಯಿಂದ ಹೊರಬಂದ ನಂತರ ಆಕೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. 1942-45 ಮತ್ತೆ ಮೂರು ವರ್ಷ ಸೆರೆಮನೆ ಸೇರುತ್ತಾರೆ. ತಮ್ಮ ಜೀವಮಾನದ 12 ಅಮೂಲ್ಯ ವರ್ಷಗಳನ್ನು ಆಕೆ ಜೈಲಿನಲ್ಲಿಯೇ ಕಳೆಯುತ್ತಾರೆ.
1946-47ರ ಅವಧಿಯಲ್ಲಿ ಬಂಗಾಳದಲ್ಲಿ ಮಧ್ಯಂತರ ಅಸೆಂಬ್ಲಿ ರಚನೆ ಆದಾಗ ಆಕೆ ಮೊದಲ ಬಾರಿಗೆ ಶಾಸಕಿ ಆಗುತ್ತಾರೆ. ತಮ್ಮ ಕನಸಿನ ಸ್ವಾತಂತ್ರ್ಯವನ್ನು ಪಡೆದಾಗ ಆನಂದ ಬಾಷ್ಪ ಸುರಿಸುತ್ತಾರೆ. 1947-51ರ ಮೊದಲ ಬಂಗಾಳದ ಅಸೆಂಬ್ಲಿ ರಚನೆ ಆದಾಗ ಆಕೆ ಮತ್ತೆ ಶಾಸಕಿ ಆಗಿ ಅಸೆಂಬ್ಲಿ ಪ್ರವೇಶ ಮಾಡುತ್ತಾರೆ. ತನ್ನ ಕಿಡಿ ಕಾರುವ ರಾಷ್ಟ್ರಪ್ರೇಮದ ಭಾಷಣಗಳನ್ನು ಅದೇ ರೀತಿಯಲ್ಲಿ ಗಟ್ಟಿಯಾಗಿ ಮುಂದುವರೆಸುತ್ತಾರೆ.
ಮುಂದೆ ಬೀನಾದಾಸ್ ಎಲ್ಲಿ ಹೋದರು: ಈ ಪ್ರಶ್ನೆಗೆ ಉತ್ತರ ಯಾರಿಗೂ ದೊರೆಯಲಿಲ್ಲ. ಆಕೆ ಮದುವೆ ಆಗಿದ್ದಾರೆ, ಗಂಡನ ಜೊತೆ ಹೃಷಿಕೇಶದಲ್ಲಿ ಸಂತರ ಹಾಗೆ ಬದುಕುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಗಳು. ಮುಂದೆ ಒಮ್ಮೆ ಅವರ ಗಂಡ ಕೂಡ ತೀರಿ ಹೋದರು ಎನ್ನುವ ಸುದ್ದಿ ಹರಡಿತ್ತು. ಆಕೆ ತುಂಬಾ ಕಷ್ಟದಲ್ಲಿ ಬದುಕುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಅದು ನಿಜವಾದ ಸುದ್ದಿ ಆಗಿತ್ತು. ಏಕೆಂದರೆ ಆಕೆ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಕೂಡ ಬೇಡ ಅಂದಿದ್ದರು!
Her death was UN KNOWN, UN WEPT and UN SUNG ಎಂದಿತ್ತು ಪತ್ರಿಕೆಯ ಶೀರ್ಷಿಕೆ:
ಡಿಸೆಂಬರ್ 26, 1986ರಂದು ಹೃಷಿಕೇಶದಲ್ಲಿ ರಸ್ತೆಯ ಬದಿಯಲ್ಲಿ ಒಬ್ಬ ಅನಾಥ ಮಹಿಳೆಯ ಶವವು ದೊರೆಯಿತು. ಅದು ಆಗಲೇ ಅರ್ಧ ಕೊಳೆತು ನಾರುತ್ತಿತ್ತು! ಅಲ್ಲಿನ ನಗರಸಭೆಯೇ ಆ ಶವದ ಅಂತಿಮ ಸಂಸ್ಕಾರ ಪೂರ್ತಿ ಮಾಡಿತ್ತು. ಒಂದು ತಿಂಗಳಾದ ನಂತರ ಆಕೆಯ ವಿಳಾಸವನ್ನು ಬಹಳ ಕಷ್ಟಪಟ್ಟು ಪತ್ತೆ ಮಾಡಲಾಯಿತು. ಹೇಗೆಂದರೆ ಆಕೆಯ ಪರ್ಸಲ್ಲಿ ಆಕೆಯ ಆರಾಧ್ಯ ದೇವರಾದ ಸುಭಾಸ್ ಬಾಬು ಫೋಟೋ ಮತ್ತು ಆಕೆಯ ಅಮ್ಮನ ಫೋಟೋ ಇತ್ತು. ಆಕೆ ಬೀನಾದಾಸ್! ಅನಾಮಧೇಯವಾಗಿ ಆಕೆ ಪ್ರಾಣವನ್ನು ಕಳೆದುಕೊಂಡಾಗ ಅಲ್ಲಿನ ಯಾರಿಗೂ ಆಕೆಯ ಬದುಕಿನ ಹೋರಾಟವು ಗೊತ್ತಿರಲಿಲ್ಲ. ಜೈ ಹಿಂದ್..
-ರಾಜೇಂದ್ರ ಭಟ್ ಕೆ.