Home ಅಂಕಣ ಶಶಿಯ ಧ್ರುವ ಪ್ರದೇಶದಲ್ಲಿ ತುಕ್ಕು

ಶಶಿಯ ಧ್ರುವ ಪ್ರದೇಶದಲ್ಲಿ ತುಕ್ಕು

950
0

ಚಂದ್ರನ ನೆಲವನ್ನು ಗಣಿಗಾರಿಕೆ ಮಾಡಿದರೆ ಸುಮಾರು 100 ಕೆ.ಜಿ ಪರಿಷ್ಕೃತ ಹೀಲಿಯಂ-3 ಸಿಗಬಹುದು. ಇದರಿಂದ ವರ್ಷಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು! ಈ ಕುರಿತು ಚಂದ್ರನಲ್ಲಿ ಗಣಿಗಾರಿಕೆಗೆ ಆಸಕ್ತಿ ತೋರಿಸಿರುವ ಅಮೆರಿಕ, ರಷ್ಯಾ, ಚೀನಾ ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲುತ್ತದೆ.

ಚಂದ್ರನೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಂದ್ರನ‌ ತಂಪಾದ ಬೆಳದಿಂಗಳು ಪ್ರೇಮಿಗಳಿಗೆ ಮಧುರತೆಯನ್ನು, ಕವಿಗೆ ಕಲ್ಪನೆಯಲ್ಲಿ ಮುಳುಗುವಂತೆಯೂ ಹಾಗೂ ವಿಜ್ಞಾನಿಗೆ ತನ್ನ ಹೊಸ ಸಂಶೋಧನೆಯಲ್ಲಿ ಆಸಕ್ತಿ ಮೂಡುವಂತೆಯೂ ಮಾಡುತ್ತದೆ. ಇಂತಹ ಚಂದ್ರನಿಗೆ ತುಕ್ಕು ‌ಹಿಡಿಯುತ್ತದೆ ಎಂದು ಹೇಳಿದರೆ ನಂಬುವುದು ಅಸಾಧ್ಯವಾದರೂ ನಂಬಲೇಬೇಕು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ 2018ರಲ್ಲಿ ಉಡಾಯಿಸಿದ ಚಂದ್ರಯಾನ-1 ಈ ನಿಟ್ಟಿನಲ್ಲಿ ಕುತೂಹಲಕಾರಿಯಾದ ಮಾಹಿತಿಯೊಂದನ್ನು ರವಾನಿಸಿದೆ. ಇದಾಗಲೇ ಜಗತ್ತಿನ ಬಹ್ಯಾಕಾಶ ವಿಜ್ಞಾನಿಗಳಿಗೆ ಚಂದ್ರನ ಧ್ರುವ ಪ್ರದೇಶದ ಬಂಡೆಗಳಲ್ಲಿ ಕಬ್ಬಿಣಾಂಶದ ಅದಿರಿರುವುದು ಗೊತ್ತಿತ್ತು. ಆದರೆ ಚಂದ್ರನಲ್ಲಿರುವ ಈ ಬಂಡೆಗಳು ತುಕ್ಕು ಹಿಡಿಯುತ್ತಿವೆ ಎಂಬುದನ್ನು ಮಾತ್ರ ಇತ್ತೀಚೆಗೆ ಇಸ್ರೋ ತಿಳಿಸಿದೆ. 

ತುಕ್ಕಿಗೆ ಕಾರಣ ನೀರು ಹಾಗೂ ವಾತಾವರಣದಲ್ಲಿನ ಆಮ್ಲಜನಕ. ಸದ್ಯ, ಚಂದ್ರನ ಆ ಧ್ರುವ ಪ್ರದೇಶದ ಬಂಡೆಗಳಿಗೆ ತುಕ್ಕು ಹಿಡಿದಿದೆ ಎಂದಾದರೆ, ಚಂದ್ರನ ವಾತಾವರಣದಲ್ಲಿ ನೀರು, ಆಮ್ಲಜನಕ ಲಭ್ಯವಿದೆಯೆಂದೇ ತಿಳಿಯಬೇಕಾಗುತ್ತದೆ. ಈ ವಿಷಯವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಭೂಮಿಯ ವಾತಾವರಣದ ಸಹಾಯದಿಂದ ಈ ರೀತಿಯ ತುಕ್ಕು ಚಂದ್ರನ ಧ್ರುವ ಪ್ರದೇಶದ ಬಂಡೆಗಳಲ್ಲಿ ಉಂಟಾಗಿದೆ. ಅಲ್ಲದೇ, ಭೂಮಿಯ ವಾತಾವರಣವೇ ಚಂದ್ರನನ್ನು ರಕ್ಷಿಸುತ್ತಿರಬಹುದು ಎಂಬುದೇ ಇಸ್ರೋ ವಿಜ್ಞಾನಿಗಳ ವಾದ. ಇಂತಹ ಹತ್ತು ಹಲವು ಸಂಶೋಧನೆಗಳ ಮಧ್ಯ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳು 2021ರ ಆದಿಭಾಗದಲ್ಲಿ  ಚಂದ್ರಯಾನ-3ರ ತಯಾರಿ ನಡೆದಿತ್ತು. ಅದೀಗ, ಕೊರೊನಾ ಮುಂತಾದ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.

ಚಂದ್ರನಲ್ಲಿ  ಹೀಲಿಯಂ:

ಸೌರ ಮಾರುತದ ಮೂಲಕ ಚಂದ್ರನತ್ತ ವೇಗದಿಂದ ಬರುವ ಹೈಡ್ರೋಜನ್, ನೈಟ್ರೋಜನ್ ಮತ್ತು ಹೀಲಿಯಂ ಅನಿಲಗಳ ಜೊತೆಗೆ ವಿಕಿರಿಣಶೀಲ ಧಾತು ಹೀಲಿಯಂ-3 ಸಹ ತೂರಿ ಬಂದು ಚಂದ್ರನ ನೆಲದ ಮೇಲೆ ಸೇರಿಕೊಳ್ಳುತ್ತದೆ.  ಇಂತಹ ಹೀಲಿಯಂ-3 ಚಂದ್ರನ ಮೇಲ್ಮೈಯಲ್ಲಿ ಸುಮಾರು 400 ಕೋಟಿ ವರ್ಷಗಳಿಂದ  ಶೇಖರವಾಗುತ್ತಿದೆ.  ಚಂದ್ರನ ಕುರಿತು ಅಧ್ಯಯನ ಮಾಡಲು ಹೊರಟಿರುವ ಜಗತ್ತಿನ ದೇಶಗಳಿಗೆಲ್ಲ ಈ ಹೀಲಿಯಂ ಧಾತುವಿನ ಮೇಲೆ ಕಣ್ಣಿರಿಸಿವೆ.

ವಿಕಿರಿಣಶೀಲ ಧಾತು ಹೀಲಿಯಂ-3 ಇದೊಂದು ಅಪರೂಪದ ಇಂಧನ ಕೂಡ.  ನ್ಯೂಕ್ಲೀಯರ್ ಫ್ಯೂಜನ್ ( ಬೈಜಿಕ ಸಮ್ಮಿಲನ ) ಕ್ರಿಯೆಯ ಮೂಲಕ ಮಾಲಿನ್ಯವಿಲ್ಲದ ಶುದ್ಧ, ಅಪರಿಮಿತ ಶಕ್ತಿ ಸಂಪಾದಿಸಲು ಸಾಧ್ಯವಿದೆ.  ಹೀಲಿಯಂ ನಿಂದ ಯಾವುದೇ ಹಸಿರುಮನೆ ಅನಿಲಗಳು ಹೊರಹೊಮ್ಮುವುದಿಲ್ಲ.  ಬೇರೆ ಪರಮಾಣುಗಳಿಗೆ ತದ್ವಿರುದ್ಧವಾಗಿ ಇದರಿಂದ ಬಾಂಬು ತಯಾರಿಸಲು ಸಾಧ್ಯವಿಲ್ಲ.  ನಾಸಾ ಈ ಕುರಿತು ಸಾಕಷ್ಟು ಅಧ್ಯಯನ ಕೈಗೊಂಡಿದೆ.  ಒಂದು ವೇಳೆ ಚಂದ್ರನಲ್ಲಿ ಗಣಿಗಾರಿಕೆ ಮತ್ತು ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಿದ್ದೇ ಆದರೆ ಈ ಪರಿಷ್ಕೃತ ಹೀಲಿಯಂ-3 ನ್ನು ಭೂಮಿಗೆ ತರಲು ಸಾಧ್ಯವಿದೆ.  ಹಾಗೇನಾದರೂ ಆದರೆ ಸಮಸ್ತ ಭೂಮಂಡಲದ ಇಂಧನದ ಅಗತ್ಯವನ್ನು ಶಾಶ್ವತವಾಗಿ ಪೂರೈಸಲು ಸಹಾಯವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.  

ಅಪೋಲೋ-18 ರಲ್ಲಿ ಪಯಣಿಸಿ ಚಂದ್ರನನ್ನು ತಲುಪಿದ್ದ ಭೂಶಾಸ್ತ್ರಜ್ಞ ಗಗನಯಾನಿ ‘ಹ್ಯಾರಿಸನ್ ಸ್ಮಿತ್ ‘ ತಾವು ಬರೆದ ‘ರಿಟರ್ನ್ ಟು ದ ಮೂನ್ ‘ ಪುಸ್ತಕದಲ್ಲಿ ಅಂದಾಜು ಮಾಡಿರುವಂತೆ ಚಂದ್ರನ ಮೇಲೆ ಎರಡು ಚ.ಕಿ.ಮೀಟರ್ ವಿಸ್ತೀರ್ಣ, ಮೂರು ಮೀಟರ್ ಆಳದ ಚಂದ್ರನ ನೆಲವನ್ನು ಗಣಿಗಾರಿಕೆ ಮಾಡಿದರೆ ಸುಮಾರು 100 ಕೆ.ಜಿ ಪರಿಷ್ಕೃತ ಹೀಲಿಯಂ-3 ಸಿಗಬಹುದು. ಇದರಿಂದ ವರ್ಷಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು! ಈ ಕುರಿತು ಚಂದ್ರನಲ್ಲಿ ಗಣಿಗಾರಿಕೆಗೆ ಆಸಕ್ತಿ ತೋರಿಸಿರುವ ಅಮೆರಿಕ, ರಷ್ಯಾ, ಚೀನಾ ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲುತ್ತದೆ.  ಕಳೆದ ಸಾಲಿನಲ್ಲಿ‌ ನಮ್ಮ ಚಂದ್ರಯಾನ-2 ಪ್ರಾಜೆಕ್ಟ್ ನಲ್ಲಿ ಹೀಲಿಯಂ-3 ಕುರಿತ ಅನ್ವೇಷಣಾ ಕಾರ್ಯಚಟುವಟಿಕೆಗೂ ವೇದಿಕೆ ನಿರ್ಮಿಸಲಾಗಿತ್ತು. ಆದರೆ ವಿಕ್ರಂ ಲ್ಯಾಂಡರ್ ನ ಸಂಪರ್ಕ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ.

-ಎಲ್.ಪಿ. ಕುಲಕರ್ಣಿ, ಬಾದಾಮಿ.
ಲೇಖಕರ ಪರಿಚಯ: ಲೇಖಕರು ಗಣಿತಶಾಸ್ತ್ರ ಶಿಕ್ಷಕರು ಹಾಗೂ ಅಂಕಣಕಾರರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.