ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯದ ಮುಂದಿನ ವಿಧಾನಸಭಾ ಚುನಾವಣಾ ಕಣ ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಅರ್ಜಿ ಮತ್ತು ಅದರ ಜೊತೆಗೆ ಅರ್ಜಿ ಶುಲ್ಕ ಮತ್ತು ಠೇವಣಿ ಸ್ವೀಕರಿಸುವ ಪ್ರಕ್ರಿಯೆಗೆ ಮುಂದಾಗಿದೆ.
ಸ್ಪರ್ಧಿಸುವ ಆಕಾಂಕ್ಷಿಗಳು ನೂಕು ನುಗ್ಗಲಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಪಕ್ಷದ ವತಿಯಿಂದಲೆ ಬಂದಿದೆ. ಹಾಗಾದರೆ ಮುಂದೆ ಇದರ ಸಾಧಕ ಬಾಧಕಗಳೇನು ಅನ್ನುವುದರ ಕುರಿತಾಗಿ ಪಕ್ಷದ ನಾಯಕರುಗಳು ಚರ್ಚೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮುಂದಿನ ಚುನಾವಣಾ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅನುಕೂಲಕರ ಪರಿಸ್ಥಿತಿ ನಿರ್ಮಿಸುವುದಿಲ್ಲ ಅನ್ನುವುದು ಅಷ್ಟೇ ಸತ್ಯ. ಹೇಗೆ? ಯಾಕೆ?
ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳಲ್ಲಿ ತಾನು ಗೆಲ್ಲುತ್ತೇನೇೂ ಸೇೂಲುತ್ತೇನೋ ಅನ್ನುವುದಕ್ಕಿಂತ ನಾನೇ ಮುಂದಿನ ಶಾಸಕ ಅನ್ನುವುದು ತಲೆಯಲ್ಲಿ ಸುತ್ತಲು ಶುರುವಾಗಿದಂತೂ ಸತ್ಯ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೂಡಾ ಘೋಷಿತ ಅಭ್ಯರ್ಥಿಗಳು ಪಕ್ಷದಿಂದ ಬಿ ಫಾರ್ಮ್ ಪಡೆದು ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಬಂದ ಹುರುಪಿನಲ್ಲಿಯೇ ಇದ್ದಾರೆ.
ಕೆಲವರು ಎಲ್ಲಿಯವರೆಗೆ ಅಂದರೆ ಈಗಾಗಲೇ ತನ್ನ ಬೆಂಬಲಿಗರಿಂದ ಪ್ರಚಾರಕ್ಕಾಗಿ ತಯಾರು ಕೂಡ ಮಾಡಿಕೊಂಡ ರೀತಿಯಲ್ಲಿ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಮೊನ್ನೆ ಒಬ್ಬರು ಪಕ್ಷ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಬಂದ ಕೂಡಲೇ ಅವರ ಬೆಂಬಲಿಗರು ಹೇಳಿದರು ನೀವು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿಯೇ ಬಿಟ್ಟರು. ಅದಕ್ಕೆ ನಾನು ಇನ್ನೊಬ್ಬರು ಅರ್ಜಿ ಹಾಕಿದ್ದಾರಲ್ಲಾ ಅಂದೆ. ಅದಕ್ಕೆ ಅವರು ಹೇಳಿದ ಉತ್ತರ ಏನು ಗೊತ್ತಾ? ಅವರು ಪ್ರಯೇೂಜನವಿಲ್ಲ. ಅವರಿಗೆ ಸೀಟು ಸಿಗುವುದಿಲ್ಲ! ಅಲ್ಲಿಗೆ ನಾನು ಅರ್ಥ ಮಾಡಿಕೊಂಡೆ.
ಆ ಕಡೆ ಕೇಳಿದರೂ ಇದೇ ಉತ್ತರ ಬರಬಹುದು. ಅಂತೂ ಕೊನೆಯಲ್ಲಿ ಅರ್ಜಿ ಸಲ್ಲಿಸಿದವರ ನಡುವೆ ಜಟಾಪಟಿ ನಡೆದು ಪಕ್ಷದ ಕಾರ್ಯಕರ್ತರೇ ದೂರವಾಗುವ ಸಾಧ್ಯತೆಯೇ ಜಾಸ್ತಿ. ಅಂತೂ ಪಕ್ಷ ಕಚೇರಿಗೆ ಎಣಿಸದಷ್ಟು ಹಣ ಬಂದು ಸೇರಿರಬಹುದು. ಆದರೆ ಕೊನೆಗೂ ಸೀಟು ವಂಚಿತರನ್ನು ಸಮಾಧಾನ ಪಡಿಸುವುದಕ್ಕೆ ಹರಸಾಹಸ ಪಡಬೇಕಾಗಿ ಬಂದು ಯಾಕಪ್ಪಾ ಹಣ ಪಡೆದುಕೊಂಡೆ ಅಷ್ಟರ ಮಟ್ಟಿಗೆ ಕೇೂಲು ಕೊಟ್ಟು ಪೆಟ್ಟು ತಿನ್ನುವ ಅನುಭವ ಆದರೂ ಆಶ್ಚರ್ಯವಿಲ್ಲ.
ಇದು ಚುನಾವಣೆಯ ಮೇಲೆ ನೇರ ಪ್ರಭಾವ ಬೀರಬಹುದು ಅನ್ನುವುದು ಮೇಲ್ನೋಟಕ್ಕೆ ಕಾಣುವ ಬೆಳವಣಿಗೆ. ಹಾಗಾಗಿ ಪಕ್ಷದ ಒಳಗೆ ಚರ್ಶಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪಕ್ಷದ ಹಿತದೃಷ್ಟಿಯಿಂದ ಹೆಚ್ಚು ಅನುಕೂಲಕರ ಅಂತ ಕಾಣುತ್ತದೆ. ಪಕ್ಷದ ಒಳಗೆ ಹೆಚ್ಚು ಪ್ರಜಾಪ್ರಭುತ್ವ ತನವಿದೆ ಅನ್ನುವುದನ್ನು ತೇೂರಿಸಲು ಮುಂದಾಗಿ ಇದು ಪಕ್ಷದಲ್ಲಿಯೇ ಮನಸ್ತಾಪ ಮೂಡಲು ಕಾರಣವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಅನ್ನುವುದು ನನ್ನ ಅಭಿಪ್ರಾಯ.
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ