Home ಅಂಕಣ ಇನ್ನೊಬ್ಬರನ್ನು ಗೌರವಿಸುವುದು ಎಂದರೇನು?

ಇನ್ನೊಬ್ಬರನ್ನು ಗೌರವಿಸುವುದು ಎಂದರೇನು?

235
0

ಚಿಕ್ಕಂದಿನಿಂದಲೂ ನಾವು ಎಲ್ಲರನ್ನೂ ಗೌರವಿಸಬೇಕು ಎಂದು ಕೇಳಿರುತ್ತೇವೆ. ಹಿರಿಯ ಅಥವಾ ಕಿರಿಯರೆ ಇರಲಿ ನಾವು ಅವರನ್ನು ಗೌರವಿಸಬೇಕು ಎಂಬ ಮನಸ್ಥಿತಿ ನಮ್ಮಲ್ಲಿದೆ. ಆದರೆ ಗೌರವಿಸುವುದು ಎಂದರೇನು? ಎದುರಿಗೆ ಬಂದಾಗ ನಮಸ್ಕರಿಸುವುದು ಅವರ ಮಾತನ್ನು ಕೇಳುವುದು ಅಷ್ಟು ಮಾತ್ರವೇ? ಅಲ್ಲ, ಗೌರವ ಎನ್ನುವುದು ನಮ್ಮ ಹೃದಯದಿಂದ ಬರತಕ್ಕದ್ದು. ಮನಸ್ಸಿನಲ್ಲಿ ಗೌರವ ಇಟ್ಟುಕೊಳ್ಳದೆ ಬೂಟಾಟಿಕೆಯ ಗೌರವ ಯಾರನ್ನು ಕೂಡ ಹಿತವನ್ನು ನೀಡುವುದಿಲ್ಲ. ಹೃದಯದಿಂದ ಗೌರವ ಬರಬೇಕಾದರೆ ಏನು ಮಾಡಬೇಕು? ನಾವು ಎಲ್ಲರನ್ನೂ ಪ್ರೀತಿಸಬೇಕು. ಎಲ್ಲರೂ ನಮ್ಮ ತರಹ ಪ್ರೀತಿ ಪಾತ್ರರು ಎನ್ನುವಂತಹ ಮನೋಭಾವ ಬೆಳೆಯಬೇಕು. ಆಗ ಗೌರವ ತನ್ನಿಂದ ತಾನೇ ಬರುತ್ತದೆ. ಇಲ್ಲಿ ಹಿರಿಯರು ಕಿರಿಯರು ಎನ್ನುವ ತಾರತಮ್ಯವಿಲ್ಲ.

ಪ್ರೀತಿ ಹೇಗೆ ಹುಟ್ಟುವುದು?: ಎಲ್ಲರೂ ಸಮಾನರು. ನಮ್ಮಂತೆ ಅವರು ಎನ್ನುವ ಆಲೋಚನೆ ಇರಬೇಕು ಅಷ್ಟೇ. ಅವರು ಹೇಳಿದ ಮಾತುಗಳನ್ನು ಆಲಿಸಿ, ಅವರವರ ಅಭಿಪ್ರಾಯವನ್ನು ಗೌರವಿಸಬೇಕು. ಅವರು ಮಾಡಿದ ಒಳ್ಳೆಯ ಕಾರ್ಯಗಳಿಗೆ ಪ್ರಶಂಸೆ ಮಾಡಬೇಕು. ಯಾರಾದರೂ ನಮ್ಮನ್ನು ಬೈದರೆ ನಾವು ಕೂಡ ತಿರುಗಿ ಅವರಿಗೆ ಬೈಯುವುದಲ್ಲ. ನಮಗೆ ಹೇಳಬೇಕಾದದ್ದನ್ನು ಹೇಳಿ ಶಾಂತಚಿತ್ತರಾಗಿ ಇರುವುದು. ಇತರರ ಕಷ್ಟಗಳನ್ನು ಕೇಳುವುದು ಅವರಿಗೆ ಸಾಂತ್ವನ ನೀಡುವುದು ಕೂಡ ಅವರಿಗೆ ನೀಡುವ ಗೌರವ. ಮಕ್ಕಳ ಅಭಿಪ್ರಾಯವನ್ನು ಸ್ವೀಕರಿಸುವುದು. ಅದಕ್ಕೆ ತಕ್ಕಂತೆ ಸಲಹೆ ನೀಡುವುದು ಅಥವಾ ಪ್ರೋತ್ಸಾಹಿಸುವುದು ಕೂಡ ಗೌರವವೇ. ಮಾತನಾಡುವಾಗ ನಮ್ಮ ವಿಚಾರವನ್ನು ಮಾತ್ರ ಹೇಳದೆ ಬೇರೆಯವರ ಮಾತನ್ನು ಕೇಳುವುದು ಗೌರವವನ್ನು ಸೂಚಿಸುತ್ತದೆ. ಗೌರವವು ಅನೇಕ ರೀತಿಯದ್ದು ಇರುತ್ತದೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ, ಅಪ್ಪ ಅಮ್ಮ ಮಕ್ಕಳಿಗೆ, ಗೆಳೆಯರಿಗೆ ಹಿರಿಯರಿಗೆ ಕಿರಿಯರಿಗೆ ಎಲ್ಲರಿಗೆ ಗೌರವ ನೀಡುವ ಅಗತ್ಯವಿರುತ್ತದೆ. ಇನ್ನು ನಾವು ಮಾಡುವ ಕೆಲಸದ ಬಗ್ಗೆ ಗೌರವ.

ವ್ಯಕ್ತಿಯನ್ನು ಅವರವರ ನಡತೆಯ ಮೇಲೆ ಅಳೆಯಬೇಕೆ ವಿನಹ ಅವರ ವೃತ್ತಿಯ ಮೇಲೆ ಅಲ್ಲ. ಇದನ್ನು ಮಕ್ಕಳಿಗೂ ಅವಶ್ಯವಾಗಿ ಹೇಳಬೇಕು. ನಾವು ಕೂಡ ಪಾಲಿಸುವುದು ಮುಖ್ಯ. ನಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ ಅಲ್ಲವೇ? ಮನೆ ಕೆಲಸದವರೇ ಇರಲಿ, ಕೂಲಿ ಮಾಡುವವರು ಇರಲಿ ಅವರಿಗೆ ಗೌರವ ಕೊಟ್ಟು ಮಾತನಾಡುವುದು ಮುಖ್ಯ. ಇದನ್ನು ನೋಡಿ ನಮ್ಮ ಮಕ್ಕಳು ಕೂಡ ಕಲಿಯುತ್ತಾರೆ. ಯಾರ ಬಗ್ಗೆಯೂ ಕೀಳಾಗಿ ಯೋಚಿಸದೆ ಮಾತನಾಡದೆ ಎಲ್ಲರನ್ನೂ ಗೌರವಿಸುವ ಮನಸ್ಥಿತಿ ಬೆಳೆಯಬೇಕು.

-ಡಾ.ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.