ಉಡುಪಿ, ಜ.21: 12 ನೇ ಶತಮಾನವು ವಚನ ಸಾಹಿತ್ಯದಲ್ಲಿ ಬಹು ಮುಖ್ಯವಾದ ಕಾಲಘಟ್ಟವಾಗಿದ್ದು, ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಮಂಗಳವಾರ ನಗರದ ಅಜ್ಜರಕಾಡುವಿನ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ, ಶ್ರೀ ಮಹಾಯೋಗಿ ವೇಮನ ಮತ್ತು ಶ್ರೀಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ವಚನಕಾರರು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದರೊಂದಿಗೆ ಸಮಾಜದಲ್ಲಿನ ಮೌಢ್ಯ, ಮೇಲು-ಕೀಳು, ಶ್ರೀಮಂತ-ಬಡವ, ಕಂದಾಚಾರದ ವಿರುದ್ಧ ಹೋರಾಡಿದ್ದಾರೆ. ಇಂತಹ ವಚನಕಾರರ ಜಯಂತಿಗಳನ್ನು ಆಚರಿಸುವ ಮೂಲಕ ಅವರುಗಳ ಚಿಂತನೆಗಳನ್ನು, ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಶಿವಶರಣೆಯರು ನಡೆದಬಂದ ಹಾದಿ ಪ್ರತಿಯೊಬ್ಬರಿಗೂ ದಾರಿದೀಪವಾಗಲಿದೆ ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ ಮತ್ತು ಅಂಬಿಗರ ಚೌಡಯ್ಯ ನವರು ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ವಚನಕಾರರು ತಮ್ಮ ಅಗಾಧ ಅನುಭವದ ಆಧಾರದ ಮೇಲೆ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದಲು ಸರಳವಾಗಿ ವಚನಗಳನ್ನು ಸೃಷ್ಠಿಸಿ, ಸಮಾಜ ಸರಿದಾರಿಯಲ್ಲಿ ಹೋಗಲು ಪ್ರಯತ್ಮ ಮಾಡಿದ್ದಾರೆ ಎಂದರು.
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಉಪನ್ಯಾಸ ನೀಡಿ, ಮಾತನಾಡಿ, ಜನಸಾಮಾನ್ಯರಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಅವರುಗಳ ಆಡು ಮಾತಿನಲ್ಲಿಯೇ ತಿಳಿಸುವ ಅನಿವಾರ್ಯತೆ ಶಿವಶರಣೆಯರಲ್ಲಿ ಇತ್ತು. ಸಾಮಾನ್ಯ ಜನರೂ ಸಹ ಭಗವಂತನ್ನು ಪೂಜಿಸಲು ಸಾಧ್ಯ ಎಂದು ವಚನಕಾರರು ತೋರಿಸಿಕೊಟ್ಟಿದ್ದರು ಎಂದರು. ಮಹನೀಯರು, ದಾರ್ಶನಿಕರ ತತ್ವ ಆದರ್ಶಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ, ಇಡೀ ಮನುಕುಲಕ್ಕೆ ಅನ್ವಯವಾಗಲಿದ್ದು, ಇವುಗಳನ್ನು ಎಲ್ಲಾ ವರ್ಗದ ಜನರು ಪಾಲಿಸಬಹುದಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳು ವಚನಕಾರರ ಸಂದೇಶವನ್ನು ತಮ್ಮ ಬದುಕಿನಲ್ಲಿ ಮೈಗೊಡಿಸಿಕೊಳ್ಳಬೇಕು ಎಂದರು.
ಡಾ. ಜಿ ಶಂಕರ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಪ್ರಸಾದ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹನ್ನರಡನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗನಾದರೂ ಪ್ರವೃತ್ತಿಯಲ್ಲಿ ವಚನಕಾರರಾಗಿ ಕನ್ನಡಕ್ಕೆ ಸಾಕಷ್ಟು ವಚನಗಳನ್ನು ನೀಡಿದ್ದಾರೆ.ಅವರ ಸನ್ಮಾರ್ಗದಲ್ಲೇ ಇಂದಿನ ಜನತೆ ನಡೆಯಬೇಕಿದೆ. ತಮ್ಮ ವಚನಗಳಿಂದಲೇ ಜನರನ್ನು ಜಾಗೃತರನ್ನಾಗಿ ಮಾಡಿದ ಮಹಾನ್ ಸಂತ ಎಂದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾ, ಜಿಲ್ಲಾ ಮೊಗವೀರ ಸಂಘದ ಅಧ್ಯಕ್ಷ ದಿನೇಶ್ ಎರ್ಮಾಳು, ವಿದ್ಯಾರ್ಥಿ ನಾಯಕಿಯರಾದ ನಿಷ್ಮಾ, ಪ್ರೀತಿ, ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿನಿ ಕಾತ್ಯಾಯಿನಿ ನಿರೂಪಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ವಂದಿಸಿದರು.