ಬೆಳಗಾವಿ, ಡಿ.20: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರವು ನೀಡಿರುವ ಆಡಳಿತಾತ್ಮಕ ಅನುಮೋದನೆ ಮೇರೆಗೆ, ಅನುದಾನ ಲಭ್ಯತೆ ಅನುಸಾರ ಸೂಕ್ತ ಅನುದಾನ ಒದಗಿಸಿ, ಯೋಜನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1&2ರ ಯೋಜನೆಯನ್ನು ಪೂರ್ಣಗೊಳಿಸಲಾಗಿದ್ದು, ಹಂತ-3ರ ಯೋಜನೆಯನ್ನು ಪರಿಷ್ಕೃತ ಅನುಮೋದಿತ ಅಂದಾಜು ಮೊತ್ತ ರೂ.51,148.94 ಕೋಟಿ (2014-15ನೇ ಸಾಲಿನ ದರಪಟ್ಟಿಯಂತೆ)ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಇಲ್ಲಿಯವರೆಗೆ ರೂ.18,307.33 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಅನುಮೋದಿತ ಯೋಜನಾ ಮೊತ್ತದನ್ವಯ ಬಾಕಿ ಉಳಿದ ಮೊತ್ತ ರೂ.32,841.61 ಕೋಟಿ ಆಗಿರುತ್ತದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1&2ರಲ್ಲಿ ಮುಳುಗಡೆಯಾದ ಜಮೀನು 1,75,470 ಎಕರೆ ಕ್ಷೇತ್ರಕ್ಕೆ ಮತ್ತು ಮುಳುಗಡೆಯಾದ 78,854 ಕಟ್ಟಡಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಮುಳುಗಡೆಯಾಗುವ ಜಮೀನು 75,563 ಎಕರೆ ಮತ್ತು ಮುಳುಗಡೆಯಾಗಲಿರುವ 25,660 ಕಟ್ಟಡಗಳ ಪರಿಹಾರಕ್ಕಾಗಿ ರೂ.17,627.00 ಕೋಟಿಗಳ ಅನುಮೋದಿತ ಮೊತ್ತದಲ್ಲಿ, ಇಲ್ಲಿಯವರೆಗೆ ರೂ.3,734.53 ಕೋಟಿ ಮೊತ್ತ ಪರಿಹಾರ ನೀಡಲಾಗಿದ್ದು, ಬಾಕಿ ಉಳಿದ ಮೊತ್ತ ರೂ.13,892.47 ಕೋಟಿ ಆಗಿರುತ್ತದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ ರಾಜ್ಯಕ್ಕೆ ಹಂಚಿಕೆಯಾದ 130 ಟಿಎಂಸಿ ನೀರಿನ ಬಳಕೆಯು ಕೇಂದ್ರ ಸರ್ಕಾರದಿಂದ ಹೊರಡಿಸುವ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿನ ಅಧಿಸೂಚನೆಗೆ ಒಳಪಟ್ಟಿರುತ್ತದೆ. ನ್ಯಾಯಾಧೀಕರಣ-2ರ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಕಣಿವೆ ರಾಜ್ಯಗಳ ದಾಖಲಿಸಿರುವ ವ್ಯಾಜ್ಯಗಳು ಇತ್ಯರ್ಥಕ್ಕೆ ಬಾಕಿ ಇದ್ದು, ನ್ಯಾಯಾಧೀಕರಣ ತೀರ್ಪಿನ ಗೆಜೆಟ್ ಅಧಿಸೂಚನೆಗೆ ರಾಜ್ಯ ಸರ್ಕಾರದಿಂದ ನಿರಂತರವಾಗಿ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.