ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ ದೊಡ್ಡ ಆಸ್ತಿ. ಉತ್ತಮ ಸ್ನೇಹಿತರನ್ನು ಪಡೆದುಕೊಳ್ಳುವಂತಹ ವ್ಯಕ್ತಿತ್ವವನ್ನು ನಾವು ನಮ್ಮದಾಗಿಸಿಕೊಳ್ಳಬೇಕು ಎಂದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯಲ್ಲಿ ಸ್ನೇಹಿತರ ಬಳಗ ಹಮ್ಮಿಕೊಂಡಿದ್ದ ಸರಸ್ವತಿ ವಿದ್ಯಾಲಯದ ನಿವೃತ್ತ ಇತಿಹಾಸ ಉಪನ್ಯಾಸಕ ಹೆಚ್ ಭಾಸ್ಕರ್ ಶೆಟ್ಟಿ ಅವರ ಅಭಿಮಾನದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪಿ ಪೈ ಮಾತನಾಡಿ ಸರಳತೆ ಮತ್ತು ಸಜ್ಜನಿಕೆಯಂತಹ ಉತ್ತಮ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನದಲ್ಲಿ ಉತ್ತಮ ಸ್ನೇಹಿತರು ಸಿಗುತ್ತಾರೆ. ಅಂತಹ ಸ್ನೇಹವನ್ನು ಯಾವತ್ತು ಕಾಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಡುಪಿಯ ಖ್ಯಾತ ವಕೀಲ ಹೆಚ್ ರಾಘವೇಂದ್ರ ಶೆಟ್ಟಿ, ಗಂಗೊಳ್ಳಿಯ ಸಮಾಜ ಸೇವಕಿ ಮಂಜುಳ ದೇವಾಡಿಗ, ಗಂಗೊಳ್ಳಿಯ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಉಪಸ್ಥಿತರಿದ್ದರು. ಹೆಚ್ ಭಾಸ್ಕರ್ ಶೆಟ್ಟಿ ಮತ್ತು ಶೋಭಾ ರಾಣಿ ಶೆಟ್ಟಿ ದಂಪತಿಗೆ ಅಭಿಮಾನದ ಸನ್ಮಾನವನ್ನು ಮಾಡಲಾಯಿತು.
ಸ್ನೇಹಿತರ ಬಳಗದ ಶ್ರೀಧರ ಗಾಣಿಗ ಸ್ವಾಗತಿಸಿದರು ನಾರಾಯಣ್ ಈ ನಾಯ್ಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಲೇಖಾ ಮತ್ತು ಸಂಜನಾ ಪ್ರಾರ್ಥಿಸಿದರು. ಗೋಪಾಲ ಚಂದನ್ ಮತ್ತು ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜಿ. ಆರ್. ಪ್ರಭಾಕರ ಶೇರುಗಾರ್ ವಂದಿಸಿದರು.