ಕೋಟ, ಡಿ.2: ಯುವ ಸಮುದಾಯ ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು, ಅವರ ಜೀವನದ ಪರಿಭಾಷೆ ಅತ್ಯಂತ ಸುಂದರ ದಿನಗಳಿಗೆ ಮುನ್ನುಡಿ ಬರೆಯಬೇಕು. ಇದಕ್ಕಾಗಿ ಪಣತೊಟ್ಟ ಪಂಚವರ್ಣ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದು ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ ಅಭಿಪ್ರಾಯಪಟ್ಟರು. ಶನಿವಾರ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ವ್ಯಸನ ಮುಕ್ತ ಸಮಾಜ ಸುಂದರ ನಾಳೆಗಾಗಿ ಎನ್ನುವ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಸಂಯೋಜಕಿ ಡಾ.ಋತಿಕಾ ಸಾಲಿಯಾನ್ ಭಾಗವಹಿಸಿ ಸಧೃಢ ನಾಳೆಗಾಗಿ ವ್ಯಸನಮುಕ್ತ ಸಮಾಜಕ್ಕಾಗಿ ಯುವ ಸಮುದಾಯದ ಪಾತ್ರ ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಡಾ.ರಮೇಶ್ ಆಚಾರ್ ವಹಿಸಿದ್ದರು. ಅಭ್ಯಾಗತರಾಗಿ ಐಕ್ಯೂಎಸಿ ವಿಭಾಗದ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪೂರ್ವಾಧ್ಯಕ್ಷ ಶೇವಧಿ ನಾಗರಾಜ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸದಸ್ಯರಾದ ರವೀಂದ್ರ ಕೋಟ ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು. ಸದಸ್ಯರಾದ ದಿನೇಶ್ ಆಚಾರ್, ಶಶಿಧರ ತಿಂಗಳಾಯ ಸಹಕರಿಸಿದರು.