Thursday, November 28, 2024
Thursday, November 28, 2024

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

Date:

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ, ನಾಗರಿಕತೆ, ಸಂಸ್ಕೃತಿಯಲ್ಲಿದೆ. ನಮ್ಮದು ಅಪ್ಪಟ ದೇಶೀಯ, ಅಸಮಾನತೆ ನಿರ್ಮೂಲನೆಯ ಪರಿವರ್ತನಾಶೀಲ ಸಂವಿಧಾನ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಾನೂನು ಪೀಠದ ಪ್ರಾಧ್ಯಾಪಕ ಡಾ. ಪಿ. ಪುನೀತ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮಾನವಿಕ ವಿಭಾಗಗಳು ಹಮ್ಮಿಕೊಂಡ `ರಾಷ್ಟ್ರೀಯ ಸಂವಿಧಾನ ದಿನ’ ಆಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಕುರಿತು ಅದರ ರಚನೆ ಸಂದರ್ಭದಲ್ಲಿಯೇ ಆರೋಪಗಳು ಬಂದಿದ್ದವು. ಆದರೆ, ಅದಕ್ಕೆ ರಚನಾ ಸಮಿತಿ ವಿಸ್ತೃತವಾಗಿ ಉತ್ತರಿಸಿತ್ತು ಎಂದರು. ಇತರರ ತಪ್ಪಿನಿಂದ ನೀವು ತಿದ್ದಿಕೊಳ್ಳಿ ಎಂದು ಚಾಣಕ್ಯ ಹೇಳಿದ್ದರು. ಜ್ಞಾನ ಎಲ್ಲೆಡೆಯಿಂದ ಬರಲಿ ಎಂದು ಋಗ್ವೇದ ಹೇಳಿದೆ. ಇದನ್ನು ಉಲ್ಲೇಖಿಸಿದ ಅಂಬೇಡ್ಕರ್, ಯಾವುದೇ ಉನ್ನತ ಮೌಲ್ಯಗಳನ್ನು ಅನುಕರಿಸುವುದು ಅಥವಾ ಅನುಸರಿಸುವುದು ತಪ್ಪಲ್ಲ ಎಂದು ಹೇಳಿದ್ದರು ಎಂದರು.

ಸಂವಿಧಾನ ರಚನಾ ಸಮಿತಿಯಲ್ಲಿ ನಡೆದ ಚರ್ಚೆಯು ದೇಶದಲ್ಲಿ ನಡೆದ ಅತ್ಯುತ್ತಮ ಚರ್ಚೆ ಎಂದು ವಿವರಿಸಿದರು. ಸಂವಿಧಾನಗಳ ಸರಾಸರಿ ಜೀವಿತಾವಧಿ 17 ವರ್ಷವಾಗಿದೆ. ಆದರೆ, 76ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ. 106 ತಿದ್ದುಪಡಿ ಆಗಿದ್ದರೂ ಸ್ಥಿರವಾಗಿದೆ ಎಂದರು. ಥಾಮಸ್ ಗಿನ್ಸ್ ಬರ್ಗ್ ನಡೆಸಿದ ಅಧ್ಯಯನದ ಪ್ರಕಾರ ಸಂವಿಧಾನದ ಸರಾಸರಿ ಜೀವಿತಾವಧಿ 17 ವರ್ಷ. ವಿಶ್ವದ 798 ಸಂವಿಧಾನ ವ್ಯವಸ್ಥೆಯನ್ನು ಅವರು ಅಧ್ಯಯನ ನಡೆಸಿದ್ದು, ಈ ಪೈಕಿ 192 ಮಾತ್ರ ಇನ್ನೂ ಅನುಷ್ಠಾನದಲ್ಲಿವೆ ಎಂದರು. ಈ ಪೈಕಿ ಜಗತ್ತಿನ ಶೇಕಡಾ 50 ಸಂವಿಧಾನಗಳು ಈಗಿಲ್ಲ. ಕೆಲವು ವರ್ಷಾಚರಣೆಯನ್ನೂ ಮಾಡಿಲ್ಲ. ಆದರೆ ಸಂವಿಧಾನ ರಚಿಸುವಾಗ ಅಮರ ಎಂಬ ಚಿಂತನೆ ಸಹಜ ಎಂದರು. ಸಂವಿಧಾನ 50 ವರ್ಷ ಬದುಕಿದರೆ, ಅದರ ಭವಿಷ್ಯ ಉತ್ತಮವಾಗಿರುತ್ತದೆ. ಅದು ಸ್ಪಟಿಕೀಕರಣಗೊಂಡು ಸದೃಢವಾಗುತ್ತದೆ ಎಂದರು. ನವೆಂಬರ್ 26 ದಿನವನ್ನು ಸಂವಿಧಾನದ ಅನುಷ್ಠಾನ ದಿನ ಎಂದು ಆಚರಿಸಲಾಗುತ್ತದೆ. ಆದರೆ, ಆ ದಿನವನ್ನು ಮೊದಲೇ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಆಲೋಚನಾ ಕ್ರಮ ಬದಲಾಗಬೇಕಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನಂತರವಾಗಿ ಕಾಣಬೇಕು ಎಂದರು. ಪ್ರಸ್ತುತ ಸಮಾಜದಲ್ಲಿ ಔದ್ಯೋಗಿಕ ಕೊರತೆಗಿಂತ ಹೆಚ್ಚಾಗಿ, ಬೇಡಿಕೆ ಅನುಗುಣವಾಗಿ ವಿಷಯ ಆಯ್ಕೆಯ ಸಮತೋಲನ ಆಗುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಜ್ಞಾನ ತುಂಬಿದ ಡಬ್ಬಗಳು ತೆರೆದುಕೊಳ್ಳಬೇಕು. ಸೀಮಿತ ದೃಷ್ಟಿಕೋನ ಬಿಟ್ಟು, ಅಂತರಶಿಸ್ತೀಯ ಅಧ್ಯಯನ ನಡೆಸಬೇಕು ಎಂದರು. ದೇಶದ ಬಹುತ್ವ ಬಹುಮುಖ್ಯ. ನಮ್ಮೆಲ್ಲರನ್ನು ಒಂದು ಮಾಡಿರುವುದು ದೇಶದ ಸಂವಿಧಾನ. ಸೀಮಿತ ಸಿದ್ಧಾಂತಗಳಿಂದ ಹೊರಬನ್ನಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮಾನವೀಯತೆಯ ಅತ್ಯುತ್ತಮ ಮೌಲ್ಯಗಳನ್ನು ಹೊಂದಿದ ಸಂವಿಧಾನ ನಮ್ಮದು. ದಾಸ್ಯ, ಶೋಷಣೆ ಮುಕ್ತ ಸಮಾಜ ನೀಡಿದೆ ಎಂದರು. ಅಂದು, ಸತಿ ಪದ್ಧತಿ ಪರವಾಗಿಯೂ ಹೋರಾಡಿದ ಜನ ನಮ್ಮ ದೇಶದಲ್ಲಿ ಇದ್ದರು. ಆದರೆ, ಜನರ ಇಚ್ಛೆಯೇ ಜನರನ್ನು ಆಳಬೇಕು ಎಂದರು. ಗಿಡ ನೆಟ್ಟು ಬೆಳೆಸಿದವರಿಗೆ ಫಲ ದೊರೆಯಬೇಕು. ವೈಚಾರಿಕತೆ ಇದ್ದ ಸಮಾಜ ಮಾತ್ರ ಜನರನ್ನು ಬದುಕಲು ಬಿಡುತ್ತದೆ. ಇಲ್ಲದಿದ್ದರೆ ಅವಸಾನ ಸಹಜ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಡಿ, ಕುಲಸಚಿವ (ಶೈಕ್ಷಣಿಕ) ಡಾ.ಟಿ.ಕೆ.ರವೀಂದ್ರನ್ ಇದ್ದರು. ವಿದ್ಯಾರ್ಥಿನಿ ಅನುಷಾ ಮತ್ತು ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು. ದಿಶಾ ಸ್ವಾಗತಿಸಿದರು. ರಕ್ಷಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ತೇಜಸ್ವಿನಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...

ಫ್ರೆಂಡ್ಸ್ ಗುಂಡ್ಮಿ: ಕನ್ನಡ ರಾಜ್ಯೋತ್ಸವ ಸಂಭ್ರಮ

ಕೋಟ, ನ.27: ಕನ್ನಡಾಭಿಮಾನ ಕಾರ್ಯಕ್ರಮಗಳಲ್ಲಿ ಮೊಳಗುವುದರ ಜತೆಗೆ ಮನೆ ಮನಗಳಲ್ಲಿ ಮೊಳಗಲಿ...
error: Content is protected !!