Wednesday, November 27, 2024
Wednesday, November 27, 2024

ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಮೂಲ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಮೂಲ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

Date:

ಉಡುಪಿ, ನ.26: ಸ್ವಚ್ಛತೆಯಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣ ಜಿಲ್ಲೆಯ ಪೌರಕಾರ್ಮಿಕರು. ಅವರುಗಳು ತಮ್ಮ ಕರ್ತವ್ಯದ ಜವಾಬ್ದಾರಿಯನ್ನು ಅರಿತು ನಗರದ ಸ್ವಚ್ಛತೆಗೆ ಅಮೂಲ್ಯವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಮಂಗಳವಾರ ನಗರಸಭೆ ವತಿಯಿಂದ ನಗರದ ಅಜ್ಜರಕಾಡುವಿನ ಪುರಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೌರಕಾರ್ಮಿಕರು ಉಡುಪಿಯ ಆಸ್ತಿ. ತಮ್ಮ ವೃತ್ತಿಗೆ ನ್ಯಾಯ ಕೊಡಿಸುವ ಮೂಲಕ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಉಡುಪಿ ನಗರಸಭೆಯು ಇತರೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾದರಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದು, ಪೌರಕಾರ್ಮಿಕರ ಪ್ರಾಮಾಣಿಕ ಸೇವೆಯಿಂದಾಗಿ ನಗರದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಯಿತು ಎಂದರು. ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಮನೆ ನಿರ್ಮಾಣ, ಮಕ್ಕಳ ವಿಧ್ಯಾಬ್ಯಾಸ ಸೇರಿದಂತೆ ಮತ್ತಿತರ ಸವಲತ್ತುಗಳನ್ನು ತಲುಪಿಸಲು ಗರಿಷ್ಠ ಮಟ್ಟದಲ್ಲಿ ನಗರಸಭೆ ವತಿಯಿಂದ ಸಹಕಾರ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ನಗರದ ಸ್ವಚ್ಛತೆಗೆ ಪ್ರಮುಖ ಕಾರಣೀಕರ್ತರು ಪೌರ ಕಾರ್ಮಿಕರು. ಪೌರಕಾರ್ಮಿಕರ ಆರೋಗವೂ ಕೂಡ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ಸರಕಾರದ ವತಿಯಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಆಯೋಜಿಸಲಾಗುವ ಆರೋಗ್ಯ ತಪಾಸಣೆಯಲ್ಲಿ ಪೌರ ನೌಕರರು ಮಾಡಿಸಿಕೊಳ್ಳಬೇಕು. ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳುವ ಹಕ್ಕು ತಮಗಿದೆ. ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಪರಿಕರ ಉಪಕರಣಗಳನ್ನು ಧರಿಸಿ ಕೆಲಸ ಮಾಡಬೇಕು. ಪೌರಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರುಗಳು ತಮ್ಮ ಹಕ್ಕನ್ನು ಪಡೆಯುವ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಿ. ಎಂದರು. ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ನಗರಸಭೆಯ ಪೌರಕಾರ್ಮಿಕರ ಕಾರ್ಯ ಉತ್ತಮವಾಗಿರುವುದರ ಜೊತೆಗೆ ನಿರಂತರವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಉತ್ತಮವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಹಾಗೂ ಸರಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೌರಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನ ದಿನ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ಪೌಕಾರ್ಮಿಕರಿಗೆ ಆಯೋಜಿಸಲಾದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಉಡುಪಿ ನಗರಸಭಾ ಕಚೇರಿಯಿಂದ ಪುರಭವನದವರೆಗೆ ಪುರ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾದ್ಯಕ್ಷ ಕೆ. ಪ್ರಭಾಕರ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಜೆ ಕಲ್ಮಾಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಸಭಾ ಸದಸ್ಯರುಗಳು, ಪೌರಕಾರ್ಮಿಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಗರಸಭೆಯ ಪೌರಾಯುಕ್ತ ಡಾ. ಉದಯ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ನಿರೂಪಿಸಿದರೆ, ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹಾ ಕೆ.ಎಸ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಕಲಚೇತನರ ಸಪ್ತಾಹ ಉದ್ಘಾಟನೆ

ಉಡುಪಿ, ನ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ...

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಅಬ್ಬನಡ್ಕ ಭಜಕೆರೆ ಗಮ್ಮತ್ತ್ದ ಕೆಸರ್ದಗೊಬ್ಬು

ಬೆಳ್ಮಣ್, ನ.26: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...
error: Content is protected !!