ಉಡುಪಿ, ನ.21: ಮಹಾಲಕ್ಷ್ಮಿ ಕೋ ಓಪರೇಟಿವ್ ಬ್ಯಾಂಕ್ ಉಡುಪಿ ಇದರ ವತಿಯಿಂದ ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಹಾಗೂ ಸ್ನಾತಕೋತ್ತರ ವಿಭಾಗದ 1,500 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 25 ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ, 2025ನೇ ಸಾಲಿನ ಡೈರಿ ಬಿಡುಗಡೆ ಹಾಗೂ ವಿಧಾನಪರಿಷತ್ ನೂತನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹಾಗೂ ಈ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಖಂಬದಕೋಣೆ ರೈತರ ಸೇವಾ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ನಾರಾಯಣ ಬಲ್ಲಾಳ್, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಉದಯ ಹಟ್ಟಿಯಂಗಡಿ ರವರಿಗೆ ಅಭಿನಂದನಾ ಕಾರ್ಯಕ್ರಮ ಉಡುಪಿಯ ಪುರಭವನದಲ್ಲಿ ನವೆಂಬರ್ 23 ಶನಿವಾರ ಮಧ್ಯಾಹ್ನ 3.00ಕ್ಕೆ ಆಯೋಜಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ತಿಳಿಸಿದ್ದಾರೆ. ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ. ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭವನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ| ಸುಧಾಕರ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರವನ್ನು ಗೀತಾನಂದ ಫೌಂಡೇಶನ್ ಕೋಟ ಪ್ರವರ್ತಕರಾದ ಆನಂದ ಸಿ. ಕುಂದರ್ ವಿತರಿಸಲಿದ್ದು, ಬ್ಯಾಂಕಿನ 2025ನೇ ಸಾಲಿನ ಡೈರಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ನಿರ್ದೇಶಕರಾದ ಶ್ಯಾಮಿಲಿ ನವೀನ್ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಉದ್ಯಮಿ ಆನಂದ ಪಿ. ಸುವರ್ಣ, ಉಜ್ವಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿ, ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.