Thursday, November 14, 2024
Thursday, November 14, 2024

ಒನಕೆ ಓಬವ್ವ ಸ್ತ್ರೀ ಶಕ್ತಿಯ ಸಂಕೇತ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಒನಕೆ ಓಬವ್ವ ಸ್ತ್ರೀ ಶಕ್ತಿಯ ಸಂಕೇತ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ನ.11: ಒನಕೆ ಓಬವ್ವಳ ನಿಸ್ವಾರ್ಥ ನಾಡಪ್ರೇಮ, ವೀರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಒನಕೆಯನ್ನು ಆಯುಧವಾಗಿ ಹಿಡಿದು ಶತ್ರುಗಳನ್ನು ಸಂಹಾರ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀ ಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಉದ್ಘಾಟಿಸಿ, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಒನಕೆ ಓಬವ್ವ 18 ನೇ ಶತಮಾನದ ಓರ್ವ ವೀರ ವನಿತೆ ಮಹಿಳೆ. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ, ಒಬ್ಬ ಸಾಮಾನ್ಯ ಹೆಣ್ಣುಮಗಳು, ಅಸಾಮಾನ್ಯವಾಗಿ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ, ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದ ಆಕೆಯ ಸಾಹಸ, ಇಂದು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸರಕಾರ ಒನಕೆ ಓಬವ್ವ ಜಯಂತಿಯನ್ನು ಆಚರಿಸುತ್ತಿರುವುದು ಇಡೀ ನಾರಿಕುಲಕ್ಕೆ ಸಂದ ಗೌರವ ಎಂದರು. ದೇಶದ ಇತಿಹಾಸವನ್ನು ಗಮನಿಸಿದಾಗ ಪುರುಷರಷ್ಟೇ ಮಹಿಳೆಯರು ಕೂಡ ಪ್ರಭಾವಶಾಲಿಗಳಾಗಿ ಅವರಿಗೆ ಸರಿಸಮಾನರಾಗಿ ದಿಟ್ಟತನದಿಂದ ಹೋರಾಡಿರುವುದನ್ನು ನಾವು ಕಾಣಬಹುದಾಗಿದೆ. ವೀರ ವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಧೈರ್ಯ, ಪ್ರಾಮಾಣಕತೆ, ಸಂವೇದನಾಶೀಲತೆ ಮತ್ತು ಸಾಹಸ ದಂತಹ ಧೀಮಂತ ವ್ಯಕ್ತಿತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ, ವೀರವನಿತೆ ಓಬವ್ವ ಅವರ ಶೌರ್ಯ, ಮಾತೃಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು. ಅವರ ಧೈರ್ಯ, ಸಾಹಸ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತದೆ. ಚಿತ್ರದುರ್ಗದ ಉಕ್ಕಿನಂತಹ ಏಳು ಸುತ್ತಿನ ಕೋಟೆಯನ್ನು ಹೈದರಾಲಿಯ ಸೈನಿಕರು ಕುತಂತ್ರದಿಂದ ವಶಪಡಿಸಿಕೊಳ್ಳಲು ಹಠಾತ್ತಾಗಿ ಆಕ್ರಮಣ ಮಾಡಿದಾಗ, ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು, ಶತ್ರುಗಳನ್ನು ಎದುರಿಸಿ, ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಕೊಂದಿದ್ದಳು. ಅಂದಿನಿಂದ ಅವರು ಒನಕೆ ಓಬವ್ವ ಎಂದು ಪ್ರಸಿದ್ಧಿ ಹೊಂದಿದ್ದರು. ಪ್ರಸ್ತುತ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕೋಶಾಧಿಕಾರಿ ನರಸಿಂಹಮೂರ್ತಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಟಿಯು ರಾಜ್ಯಮಟ್ಟದ ವೇಯ್ಟ್ ಲಿಫ್ಟಿಂಗ್, ದೇಹದಾಢ್ಯ ಸ್ಪರ್ಧೆ

ಮೂಡುಬಿದಿರೆ, ನ.14: ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ಮಿಜಾರು ಇವರ...

‘ಕಾವಿ ಕೆಲಿಡೋಸ್ಕೋಪ್’: ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಉಡುಪಿ, ನ.14: ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು...

ಉಡುಪಿ ಜಿಲಾ ಕಾಂಗ್ರೆಸ್ ಸಮಿತಿ: ಜವಾಹರಲಾಲ್ ನೆಹರು ಜಯಂತಿ

ಉಡುಪಿ, ನ.14: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ...

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...
error: Content is protected !!