ಕೋಟ, ಅ.20: ಕಾರಂತರ ವ್ಯಕ್ತಿತ್ವ ಬಹು ವಿಶಿಷ್ಟವಾದದ್ದು ಅವರ ಸಾಹಿತ್ಯಿಕ ಬದುಕು ಮಾದರಿಯಾಗಿದೆ ಎಂದು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಪ್ರವರ್ತಕ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಶನಿವಾರ ಸಾಲಿಗ್ರಾಮದ ಗಿರಿಜಾ ಸಭಾಂಗಣದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ವತಿಯಿಂದ ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣೆ ಅಂಗವಾಗಿ ಕಾರಂತ ಸಂಸ್ಮರಣೆ, ಗೆಳೆಯರ ಬಳಗ ಕಾರಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಭನಮನಗೈದು ಅವರು ಮಾತನಾಡಿದರು. ಇದೇ ವೇಳೆ ಗೆಳೆಯರ ಬಳಗ ಕಾರಂತ ಪುರಸ್ಕಾರವನ್ನು ಸಾಹಿತಿ ಡಾ.ನಾ.ಮೊಗಸಾಲೆ ಇವರಿಗೆ ನೀಡಿ ಗೌರವಿಸಲಾಯಿತು.
ಉಡುಪ ರತ್ನ ಪ್ರತಿಷ್ಠಾನ ಕೊಡವೂರು ಸಂಚಾಲಕಿ ಪೂರ್ಣಿಮಾ ಜನಾರ್ದನ ಕೊಡವೂರು ಕಾರಂತರ ಸಂಸ್ಮರಣೆಗೈದರು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಭಂಧಕ ವಾದಿರಾಜ್ ಕೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ ಕುಂದರ್, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ನಿವೃತ್ತ ಸಹಾಯಕ ನಿರ್ದೇಶಕ ಸಿ ಸುರೇಶ್ ತುಂಗ ಶುಭಾಶಂಸನೆಗೈದರು. ಅಧ್ಯಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಹೆಚ್ ಜನಾರ್ದನ ಹಂದೆ ಉಪಸ್ಥಿತರಿದ್ದರು. ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. .ಸನ್ಮಾನಪತ್ರವನ್ನು ಮಂಜುನಾಥ ಉಪಾಧ್ಯ ವಾಚಿಸಿದರು. ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಶೀನ ವಂದಿಸಿದರು. ಮೆಕ್ಕೆಕಟ್ಟು ಮೇಳದ ಕಲಾವಿದರಿಂದ ಪಾರಿಜಾತ ನರಕಾಸುರ ಪೌರಾಣಿಕ ಪ್ರಸಂಗ ಪ್ರದರ್ಶನಗೊಂಡಿತು.