ಬೆಂಗಳೂರು, ಸೆ.24: ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಅವರ್ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಆ್ಯಂಬುಲೆನ್ಸ್‌ಗಳ ಸೇವೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಸಾರಿಗೆ ಇಲಾಖೆ ಸಹಕಾರದೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರೋಡ್ ಸುರಕ್ಷತೆ ನಿಧಿಯಡಿ ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ 65 ಆ್ಯಂಬುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿಕೊಟ್ಟಿದ್ದಾರೆ.
ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಆ್ಯಂಬುಲೆನ್ಸ್‌ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಅಂತಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಆ್ಯಂಬುಲೆನ್ಸ್‌ಗಳನ್ನು ನೀಡಲಾಗಿದೆ.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಸೇರಿ ಹಲವು ನಾಯಕರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.