Monday, November 25, 2024
Monday, November 25, 2024

ಶಿಕ್ಷಣದಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣ ಸಾಧ್ಯ: ಪ್ರೊ. ಪಿ ಎಲ್ ಧರ್ಮ

ಶಿಕ್ಷಣದಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣ ಸಾಧ್ಯ: ಪ್ರೊ. ಪಿ ಎಲ್ ಧರ್ಮ

Date:

ಮೂಡುಬಿದಿರೆ, ಸೆ.18: ಶಿಕ್ಷಣದಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ ಎಲ್ ಧರ್ಮ ಹೇಳಿದರು. ಅವರು ಬುಧವಾರ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ‍್ಯಕ್ರಮ ‘ಆಳ್ವಾಸ್ ಆಗಮನ ೨೦೨೪’ ವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬಹಳ ಅವಶ್ಯಕ. ಅದರ ಜೊತೆ ಜೊತೆಗೆ ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಮನಸ್ಥಿತಿ ಮೂಡಬೇಕು. ಈ ಆಗಮನ ಕಾರ‍್ಯಕ್ರಮದ ಮೂಲಕ ನಿಮ್ಮೊಳಗೆ ಹುದುಗಿರುವ ಆದಮ್ಯ ಚೇತನವನ್ನು ಉದ್ದೀಪನಗೊಳಿಸುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದೆ. ಈ ವೇದಿಕೆಯ ಮೂಲಕ ನಿಮ್ಮೊಳಗಿನ ಪ್ರತಿಭೆಯ ಅನಾವರಣದ ಜೊತೆಗೆ ಮಾನವೀಯ ಮೌಲ್ಯಗಳು ಇನ್ನಷ್ಟು ವೃದ್ಧಿಸಲಿ. ಧರ‍್ಯಶಾಲಿಗಳಾಗಿರಿ, ನಿಮ್ಮ ಸುತ್ತಮುತ್ತಲಿನವರನ್ನು ಪ್ರೀತಿಸಿ, ಹೆತ್ತ ತಂದೆ ತಾಯಿ, ಶಿಕ್ಷಕರನ್ನು ಗೌರವಿಸಿ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಇಂಜಿನಿಯರಿಂಗ್ ಕ್ಷೇತ್ರ, ಕೇವಲ ಆವಿಷ್ಕಾರಕ್ಕೆ ಮಾತ್ರ ಸೀಮಿತವಾಗದೆ, ಒಬ್ಬ ಅದ್ಭುತ ಶಿಕ್ಷಕನನ್ನು ರೂಪಿಸುವ ಕೆಲಸವಾಗಬೇಕಿದೆ.

ನಾನು ನನ್ನದು ಎಂಬ ಅಹಂನ ಕಾಲ ಘಟ್ಟದಲ್ಲಿ ಡಾ ಮೋಹನ್ ಆಳ್ವರಂತವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ’. ಆಳ್ವಾಸ್ ಸಂಸ್ಥೆ ಶಿಕ್ಷಣ ಜೊತೆಗೆ ಮಾದರಿ ಜೀವನ ಮೌಲ್ಯವನ್ನು ಕಲ್ಪಿಸುತ್ತದೆ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್‌ಪಿ ನಾರಾಯಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎದುರಿಸುವ ಹಲವಾರು ಸವಾಲುಗಳಾದ ಭಾಷೆಯ ಮೇಲೆ ಹಿಡಿತ, ಗುಂಪಿನಲ್ಲಿ ಕಾರ್ಯನಿರ್ವಹಿಸುವ ಕಲೆ, ಮಾಡುವ ಪ್ರತಿ ಕಾರ್ಯದಲ್ಲಿ ಸ್ವ-ನಂಬಿಕೆ, ಗುರಿ ಸಾಧಿಸುವ ಕಡೆಗಿರುವ ಸ್ಪಷ್ಟತೆಯ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳಲ್ಲಿ ಪ್ರತಿ ಬಾರಿಯೂ ಸಾಧಿಸುವ ಹಸಿವು ಹೆಚ್ಚಾಗಬೇಕು. ಸಾಧನೆಯ ಹಾದಿಯಲ್ಲಿ ಸೋಲಿನ ಕಡೆಗೆ ಗಮನ ಮತ್ತು ತಾಳ್ಮೆ ಇರಲಿ. ಯಾವುದೇ ವಿಷಯದಲ್ಲಿ ನೆಲೆಗೊಳ್ಳುವ ಮೊದಲು ತಳಪಾಯ ಎಷ್ಟರ ಮಟ್ಟಿಗೆ ದೃಢವಾಗಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು. ಮುಂದಿನ ೪ ವರ್ಷದ ಕಲಿಕೆಯ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟು ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಪ್ರಯತ್ನಿಸಿದಾಗ ಬೆಳವಣಿಗೆ ತಾನಾಗಿಯೇ ಮೂಡುತ್ತದೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಸದಾ ಕೃತಜ್ಞರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ೬ ವಿದ್ಯಾರ್ಥಿಗಳು ಸೇರಿಕೊಂಡು ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲೀಕರಣದ ಮೂಲಕ ಸುರಕ್ಷಿತವಾಗಿ ನಿರ್ವಹಿಸುವ ಸಲುವಾಗಿ ಅಭಿವೃದ್ಧಿ ಪಡಿಸಿದ “ಸ್ಟೂಡೆಂಟ್ಸ್ ಬಯೊಮೆಟ್ರಿಕ್ಸ್” ಅನಾವರಣಗೊಳಿಸಲಾಯಿತು. ಪ್ರೊ. ಪಿ ಎಲ್ ಧರ್ಮ ಅವರನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಕಾಲೇಜಿನ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಡೀನ್ ಅಕಾಡೆಮಿಕ್ಸ್ ದಿವಾಕರ್ ಶೆಟ್ಟಿ ಸ್ವಾಗತಿಸಿ, ಡಾ. ಸಾಕ್ಷಿ ಎಸ್ ಕಾಮತ್ ನಿರೂಪಿಸಿ, ಡಾ. ರಾಮ್ ಪ್ರಸಾದ್ ಅತಿಥಿಯನ್ನು ಪರಿಚಯಿಸಿ, ಧ್ವನಿ ತಂಡ ಪ್ರಾರ್ಥಸಿ, ಡಾ. ರವಿಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿವಿ ರಾಮಚಂದ್ರ, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಪ್ರಶೀಲ್ ಶೆಟ್ಟಿ, ವಿವಿಧ ವಿಭಾಗಗಳ ಡೀನ್ ಹಾಗೂ ಮುಖ್ಯಸ್ಥರು ಇದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!