Sunday, November 24, 2024
Sunday, November 24, 2024

ಉದ್ಯೋಗಾವಕಾಶಗಳಲ್ಲಿ ಏರಿಕೆ- ಎಂ.ಎಸ್.ಡಬ್ಲ್ಯೂ ಕೋರ್ಸಿಗೆ ಹೆಚ್ಚಿದ ಬೇಡಿಕೆ

ಉದ್ಯೋಗಾವಕಾಶಗಳಲ್ಲಿ ಏರಿಕೆ- ಎಂ.ಎಸ್.ಡಬ್ಲ್ಯೂ ಕೋರ್ಸಿಗೆ ಹೆಚ್ಚಿದ ಬೇಡಿಕೆ

Date:

ಉಡುಪಿ ಬುಲೆಟಿನ್ ವಿಶೇಷ ವರದಿ, ಸೆ.17: ಕಳೆದೊಂದು ದಶಕಗಳಿಂದ ಸ್ನಾತಕೋತ್ತರ ಸಮಾಜಕಾರ್ಯ (ಎಂ.ಎಸ್.ಡಬ್ಲ್ಯೂ) (MSW) ಪದವಿ ಪಡೆದವರಿಗೆ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿರುವ ಕಾರಣ, ಪದವಿ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಎರಡು ವರ್ಷಗಳ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿ ಕೋರ್ಸಿಗೆ ಸೇರ್ಪಡೆಯಾಗುತ್ತಿದ್ದಾರೆ. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಬರುವ ಮೊದಲೇ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳುತ್ತಿರುವ ಉದಾಹರಣೆಗಳು ಬಹಳಷ್ಟಿವೆ. ಬಡ, ಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಎಂ.ಎಸ್.ಡಬ್ಲ್ಯೂ ಕೋರ್ಸಿಗೆ ಸೇರ್ಪಡೆಯಾಗುತ್ತಿರುವುದು ಇದಕ್ಕೆ ಹಿಡಿದ ಕನ್ನಡಿಯಾಗಿದೆ.

ಏನಿದು ಎಂ.ಎಸ್.ಡಬ್ಲ್ಯೂ ಕೋರ್ಸ್? ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ಎಂಬ ಈ ಕೋರ್ಸ್ ಬಹಳ ಆಕರ್ಷಣೀಯವಾಗಿದೆ ಎಂದರೆ ತಪ್ಪಾಗದು. ಅಂತಿಮ ವರ್ಷದಲ್ಲಿ ಮೂರು ಸ್ಪೆಷಲೈಸೇಶನ್ ಗಳಾದ ಎಚ್.ಆರ್., (ಹ್ಯೂಮನ್ ರಿರೋರ್ಸ್ ಡೆವಲಪ್ಮೆಂಟ್) ಸಿ.ಡಿ. (ಕಮ್ಯೂನಿಟಿ ಡೆವಲಪ್ಮೆಂಟ್)ಮತ್ತು ಮೆಡಿಕಲ್ ಆಂಡ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ಈ ರೀತಿ ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆಯ ಸ್ವಾತಂತ್ರ್ಯವಿದೆ. ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಕ್ಷೇತ್ರಕಾರ್ಯ ಇರುವ ಕಾರಣ ಅಂದು ಅವರೆಲ್ಲರೂ ಅವರನ್ನು ನಿಯೋಜಿಸಿದ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ) ಕಂಪನಿ, ಆಸ್ಪತ್ರೆ, ಸರ್ಕಾರಿ ಇಲಾಖೆ ಹೀಗೆ ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಕಲಿತುಕೊಳ್ಳುತ್ತಾರೆ. ಎರಡನೆಯ ಸೆಮಿಸ್ಟರ್ ನಲ್ಲಿ ಒಂದು ವಾರಗಳ ಗ್ರಾಮೀಣ ಶಿಬಿರದಲ್ಲಿ ಬಹುತೇಕ ವಿದ್ಯಾರ್ಥಿಗಳು ಜೀವನಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಅತ್ಯುತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಮೂರನೇ ಸೆಮಿಸ್ಟರ್ ನಲ್ಲಿ ಒಂದು ವಾರಗಳ ಕಾಲ ಶಿಕ್ಷಣಿಕ ಪ್ರವಾಸ ಇರುವ ಕಾರಣ ಬೋಧಕರ ಜತೆಗೂಡಿ ರಾಜ್ಯದ, ಹೊರ ರಾಜ್ಯದ ಪ್ರತಿಷ್ಠಿತ ಮಲ್ಟಿ ನ್ಯಾಶನಲ್ ಕಂಪನಿ, ಎನ್.ಜಿ.ಒ, ಆಸ್ಪತ್ರೆಗಳಿಗೆ ಭೇಟಿಯಾಗಿ ಅಲ್ಲಿಯ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಕಲೆ ಹಾಕುತ್ತಾರೆ. ನಾಲ್ಕನೇ ಸೆಮಿಸ್ಟರ್ ನಲ್ಲಿ ಕಿರು ಸಂಶೋಧನೆಯನ್ನು ಕೈಗೊಳ್ಳುವ ವಿದ್ಯಾರ್ಥಿಗಳಿಗೆ ತಮ್ಮ ಫೀಲ್ಡ್ ವರ್ಕ್ ವೈವಾ ಪರೀಕ್ಷೆಯ ಮುಂಚಿತವಾಗಿ ಒಂದು ತಿಂಗಳ ಬ್ಲಾಕ್ ಪ್ಲೇಸ್ಮೆಂಟ್ ಕಡ್ಡಾಯವಾಗಿ ಮಾಡಲು ಇದೆ. ಈ ಬ್ಲಾಕ್ ಪ್ಲೇಸ್ಮೆಂಟ್ ಬಹುತೇಕ ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಾಲೇಜುಗಳಲ್ಲಿ ಈ ಹಿಂದೆ ಎಂ.ಎಸ್.ಡಬ್ಲ್ಯೂ ವ್ಯಾಸಂಗ ಮಾಡಿರುವ ಬಹುತೇಕ ಮಂದಿ ಪ್ರತಿಷ್ಠಿತ ಕಂಪನಿಗಳಲ್ಲಿ ಎಚ್.ಆರ್. ವಿಭಾಗದಲ್ಲಿ ಮ್ಯಾನೇಜರ್, ಆಫೀಸರ್, ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಮೆಡಿಕಲ್ ಆಂಡ್ ಸೈಕಾಟ್ರಿ ವಿಭಾಗ ಆಯ್ದುಕೊಂಡವರು ಬೆಂಗಳೂರಿನ ನಿಮ್ಹ್ಯಾನ್ಸ್ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಜತೆಗೆ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಕಂಪನಿಗಳಲ್ಲಿ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿರುವುದು ಸಂತಸದ ವಿಚಾರ. ನಮ್ಮ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಪದವಿ ಪಡೆದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿಗಳಾದ ಹಿಂದೂಜಾ ಗ್ಲೋಬಲ್ ಸೊಲ್ಯೂಷನ್ಸ್, ಶಾಹಿ ಎಕ್ಸ್ಪೋರ್ಟ್ಸ್, ಗೋಕಾಲ್ದಾಸ್ ಎಕ್ಸ್ಪೋರ್ಟ್, ಟೀಮ್ ಲೀಸ್ ಸರ್ವಿಸ್, ಜೆ.ಎಸ್.ಎಸ್. ಪ್ರೊ, ವಿಮಾನ್ ಮಲ್ಟಿಪ್ಲಗ್ ಮಾಲೂರ್, ಜಿ.ಐ. ಆಟೋ ಪ್ರೈ.ಲಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆ.ಎಂ.ಸಿ., ಪರಿವರ್ತನಾ ಸಂಸ್ಥೆ ಹೀಗೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳು ಮತ್ತು ವಿವಿಧ ಸ್ಕಾಲರ್ಷಿಪ್ ಗಳ ಸದುಪಯೋಗ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಜೀವನದಲ್ಲಿಯೂ ಸಮಾಜಕಾರ್ಯ ಕೋರ್ಸು ಕಲಿಸಿಕೊಟ್ಟ ಮೌಲ್ಯಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿಭಾಗ ಮುಖ್ಯಸ್ಥರಾದ ಡಾ. ಹೇಮಾ ಎಸ್. ಕೊಡದ್.

ಬಿ.ಎ., ಬಿ.ಕಾಂ., ಬಿಬಿಎ., ಬಿ.ಎಸ್ಸಿ, ಬಿಸಿಎ, ಬಿ.ಎಸ್.ಡಬ್ಲ್ಯೂ ಹೀಗೆ ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳು ಎಂ.ಎಸ್.ಡಬ್ಲ್ಯೂ ಕೋರ್ಸ್ ಗೆ ಅರ್ಜಿ ಸಲ್ಲಿಸಬಹುದು. ಒಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಎಂ.ಎಸ್.ಡಬ್ಲ್ಯೂ ಕೋರ್ಸಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಈ ಕೋರ್ಸ್ ಬಹುಬೇಡಿಕೆಯ ಕೋರ್ಸ್ ಆಗುವಲ್ಲಿ ಎರಡು ಮಾತಿಲ್ಲ. 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!