ಕೋಟ, ಸೆ.15: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯಾದ್ಯಂತ ಮಾನವ ಸರಪಳಿಯನ್ನು ವಿವಿಧ ಹೆದ್ದಾರಿಗಳಲ್ಲಿ ಹಮ್ಮಿಕೊಂಡಿದ್ದು ಅದರಂತೆ ಉಡುಪಿ ಜಿಲ್ಲಾಡಳಿತ ನಿರ್ದೇಶದಂತೆ ಕೋಟ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿವಿಧ ಪಂಚಾಯತ್, ಪಟ್ಟಣ ಪಂಚಾಯತ್ ಗಳು, ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಹೆದ್ದಾರಿಯಲ್ಲಿ ಕೈ ಕೈ ಹಿಡಿದು ಭಾರತ ಮಾತೆಗೆ ನಮನ ಸಲ್ಲಿಸಿಕೊಂಡವು. ಪೂರ್ವಾಹ್ನ ಕೋಟದ ರಾಷ್ಟ್ರೀಯ ಸಾಲಿಗ್ರಾಮ, ಸಾಸ್ತಾನ ಹೀಗೆ ವಿವಿಧ ಭಾಗಗಳಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕ ಉಪನ್ಯಾಸಕ ವೃಂದ, ವಿವಿಧ ಸಮುದಾಯಗಳು ಸಂವಿಧಾನದ ಆಶಯ ವಿಧಿಗಳು, ಪ್ರಜಾಪ್ರಭುತ್ವ ಮಹತ್ವವನ್ನು ಪ್ರತಿಗಳ ಮೂಲಕ ಬೋಧಿಸಿಕೊಂಡರು.
ಸಂಸದ ಕೋಟ ಭೇಟಿ: ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾನವ ಸರಪಳಿಯಲ್ಲಿ ಭಾಗಿಯಾಗಿ ಕೋಟ ಆರಕ್ಷಕ ಠಾಣೆಯಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು. ಅಲ್ಲದೆ ಕೋಟ ಬಸ್ ನಿಲ್ದಾಣದ ಬಳಿ ಪಂಚವರ್ಣ ಸಂಸ್ಥೆಯ ಕಾರ್ಯಕರ್ತರೊಂದಿಗೆ ಮಾನವ ಸರಪಳಿಯಲ್ಲಿ ಭಾಗಿಯಾದರು.
ಒಂದೇ ಮಾತರಂ ಘೋಷಣೆ: ಪ್ರಜಾಪ್ರಭುತ್ವ ಮಹತ್ವದ ದಿನದ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ವಂದೇ ಮಾತರಂ ಘೋಷಣೆ ಮೊಳಗಿಸಿದರು.
ಸ್ಥಳೀಯಾಡಳಿತ, ಸಂಸ್ಥೆಗಳು ಭಾಗಿ: ಕೋಟತಟ್ಟು, ಸಾಲಿಗ್ರಾಮ ಪಟ್ಟಣ ಪಂಚಾಯತ್, ಪಾಂಡೇಶ್ವರ, ಐರೋಡಿ, ಕೋಡಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಗಳು, ಕೋಟದ ಲಕ್ಷ್ಮಿ ಸೋಮ ಬಂಗೇರ ಕಾಲೇಜು, ಪದವಿಪೂರ್ವ ಕಾಲೇಜು ಪಡುಕರೆ, ಸಂಯುಕ್ತ ಪ್ರೌಢಶಾಲೆ ಪಡುಕರೆ, ಕೋಟ ವಿವೇಕ ವಿದ್ಯಾ ಸಂಸ್ಥೆ, ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದವು. ಕೋಟದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ತಂಡ, ಆರಕ್ಷಕ ಠಾಣೆಯ ಠಾಣಾಧಿಕಾರಿಗಳ ತಂಡ ಮಾನವ ಸರಪಳಿಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದರು. ಕೋಟ ಗ್ರಾಮ ಪಂಚಾಯತ್ ಪಿ.ಡಿಓ. ಸುರೇಶ್ ಬಂಗೇರ, ಕಾರ್ಯದರ್ಶಿ ಶೇಖರ್ ಮರವಂತೆ, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾ.ಪಂ ಅಧ್ದಕ್ಷ ಸತೀಶ್ ಕುಂದರ್, ಪಿ.ಡಿಓ ರವೀಂದ್ರ ರಾವ್ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.