ಮಲ್ಪೆ, ಸೆ.14: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಶಿಕ್ಷಕರ ದಿನಾಚರಣೆ, ಗುರುವಂದನೆ ಹಾಗೂ ನಿವೃತ್ತ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಮಾತನಾಡಿ ಶಿಕ್ಷಕರಿಗೆ ತಾಳ್ಮೆ, ಸೌಜನ್ಯ ಹಾಗೂ ಬದ್ಧತೆ ಮುಖ್ಯ ಮತ್ತು ಈ ಕಾಲೇಜಿನ ಅಧ್ಯಾಪಕ ವೃಂದದಲ್ಲಿ ಈ ಗುಣಗಳನ್ನು ಕಾಣಲು ಸಾಧ್ಯ ಎಂದರು. 28 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಕನ್ನಡ ಸಹ ಪ್ರಾಧ್ಯಾಪಕ ರಾಧಾಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸನ್ಮಾನಗೊಳುತ್ತಿರುವ ರಾಧಾಕೃಷ್ಣ ಇವರುಗಳಿಗೆ ಗುಣಗಳಲ್ಲಿ ಸಾಮ್ಯತೆಯಿದೆ. ರಾಧಾಕೃಷ್ಣ ಅವರು ಯಾವ ಸಂಸ್ಥೆಯಲ್ಲಿದ್ದರೂ ಆ ಸಂಸ್ಥೆಗೆ ಒಂದು ಆಸ್ತಿ ಎಂದರು.
ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ., ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಘವ ನಾಯ್ಕ, ಸ್ಟಾಫ್ ಕ್ಲಬ್‌ನ ಕಾರ್ಯದರ್ಶಿ ಉಮೇಶ್ ಪೈ ಹಾಗೂ ಜಯಲಕ್ಷ್ಮಿ ರಾಧಾಕೃಷ್ಣ ಉಪಸ್ಥಿತರಿದ್ದರು. ಡಾ. ದುಗ್ಗಪ್ಪ ಕಜೆಕಾರ್ ನಿರೂಪಿಸಿ, ಉಮೇಶ್ ಪೈ ವಂದಿಸಿದರು.