ನವದೆಹಲಿ, ಸೆ.12: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಗುರುವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಅವರು ಕೊನೆಯುಸಿರೆಳೆದರು. ಕಳೆದ ತಿಂಗಳು 19 ರಂದು ಆಸ್ಪತ್ರೆಗೆ ದಾಖಾಲಾಗಿತ್ತು. ಅವರ ಇಚ್ಛೆಯಂತೆ ವೈದ್ಯಕೀಯ ಸಂಶೋಧನೆಗಾಗಿ ಅವರ ಶರೀರ ದಾನ ಮಾಡಲಾಗುವುದು ಎಂದು ಸಿಪಿಐ(ಎಂ) ನಾಯಕರು ತಿಳಿಸಿದ್ದಾರೆ.
1952 ರಲ್ಲಿ ಚೆನ್ನೈನಲ್ಲಿ ಜನಿಸಿದ ಸೀತಾರಾಮ್ ಯೆಚೂರಿ ಅವರು ಸಿಪಿಐ (ಎಂ) ಅಗ್ರ ನಾಯಕರಾಗಿದ್ದರು. ಅವರು ಮೂರು ಬಾರಿ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಯೆಚೂರಿ ಅವರು 1975 ರಲ್ಲಿ ಸಿಪಿಐ(ಎಂ) ಗೆ ಸೇರ್ಪಡೆಗೊಂಡರು ಮತ್ತು ಅವರ ರಾಜಕೀಯ ಚಟುವಟಿಕೆಗಳಿಗಾಗಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲಾಯಿತು. ಅವರು 2015 ರಲ್ಲಿ ಸಿಪಿಐ (ಎಂ) ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಯೆಚೂರಿ ಅವರು ಪಶ್ಚಿಮ ಬಂಗಾಳದಿಂದ 2005 ರಿಂದ 2017 ರವರೆಗೆ ಎರಡು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾದರು. ಅವರು ಸಂಸತ್ತಿನ ಮೇಲ್ಮನೆಯಲ್ಲಿ ಸಿಪಿಐ(ಎಂ) ನಾಯಕರಾಗಿ ಸೇವೆ ಸಲ್ಲಿಸಿದರು.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ, ಮತ್ತು ಹಿರಿಯ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.