ಗಣಿತನಗರ, ಸೆ.6: ಹಳ್ಳಿಯ ರೈತ ಮನಸ್ಥಿತಿಯ ಶಿಕ್ಷಕ ಪ್ರಜ್ಞೆ ದೂರವಾಗಿ ನಗರಪ್ರಜ್ಞೆಯ ಶಿಕ್ಷಕರ ಧೋರಣೆ ಜಾಸ್ತಿಯಾಗಿ ಮನುಷ್ಯ ಯಂತ್ರಜೀವಿಯಾಗಿ ರೂಪುಗೊಳ್ಳುತ್ತಿದ್ದಾನೆ. ಎಲ್ಲಾ ಶಾಸ್ತ್ರಗಳನ್ನು ಬಲ್ಲವರಾಗಿರುವ ನಾವು ಮನುಷ್ಯತ್ವದ ಶಾಸ್ತ್ರವನ್ನು ಅರಿಯದೆ ಇರುವುದು ದುಃಖಕರ ಎಂದು ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ತಾಲೂಕಿನ ಆಯ್ದ ಐವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಕೊರೋನಾ ಕಾಲಘಟ್ಟದ ನಂತರ ಮೊಬೈಲ್‌ವಾಣಿಗೆ ಮುಗಿಬಿದ್ದ ವಿದ್ಯಾರ್ಥಿಗಳು, ಜಾಲಧ್ಯಾನಿಗಳಾಗಿ ಇಂದು ತರಗತಿಯಲ್ಲಿ ಅಧ್ಯಾಪಕರ ಪಾಠವನ್ನು ಗೊಮ್ಮಟ ಧ್ಯಾನದಿಂದ ಕೇಳದೆ ಏಕಾಗ್ರತೆಯನ್ನು ಮರೆತು ಯಾಂತ್ರಿಕರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕರಾವಳಿ ಜಿಲ್ಲೆಗೆ ಮಾದರಿ ಜ್ಞಾನಸುಧಾ. ಊರು ಕಟ್ಟಿದ ಶಿಕ್ಷಕರನ್ನು ಗುರುತಿಸಿದ ಸಂಸ್ಥೆಯ ಕಾರ್ಯವು ಶ್ಲಾಘನೀಯ. ಸಾಂಸ್ಕೃತಿಕ ಜೀವಂತಿಕೆ ಜ್ಞಾನಸುಧಾ ಹೊಂದಿರುವುದನ್ನು ಇಲ್ಲಿ ಕಾಣಬಹುದು ಎಂದರು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಕಾರ್ಕಳ ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸನ್ಮತ್ ಕುಮಾರ್, ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ್ ಎನ್. ಸುವರ್ಣ, ಎಸ್.ವಿ.ಟಿ ಅ.ಹಿ.ಪ್ರಾ.ಶಾಲೆ ಕಾರ್ಕಳದ ಮುಖ್ಯ ಶಿಕ್ಷಕ ಎಂ.ಜಾನಕಿನಾಥ ರಾವ್, ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆ ನಿಟ್ಟೆಯ ನಿವೃತ್ತ ಶಿಕ್ಷಕ ಕೃಷ್ಣ ಆಚಾರ್ಯ, ಸ.ಮಾ.ಹಿ.ಪ್ರಾ.ಶಾಲೆ ಹೆಬ್ರಿಯ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಆರ್ ವಿಶ್ವನಾಥ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಮುಖ್ಯ ಶಿಕ್ಷಕ ಎಂ.ಜಾನಕಿನಾಥ ರಾವ್ ಮಾತನಾಡಿದರು. ಇತ್ತೀಚೆಗೆ ಜಿಲ್ಲಾಮಟ್ಟದಲ್ಲಿ ನಡೆದ ಈಜು ಹಾಗೂ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದ ಆರು ಮಕ್ಕಳನ್ನು ಗುರುತಿಸಲಾಯಿತು. ನಿವೃತ್ತ ಶಿಕ್ಷಕಿ ಸುಮಿತ್ರಾ ಜೈನ್ ಕವನ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ವಹಿಸಿದ್ದರು. ಅನಿಲ್ ಕುಮಾರ್ ಜೈನ್, ಉಪಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು., ಹಾಗೂ ವಾಣಿ ಕೆ ಉಪಸ್ಥಿತರಿದ್ದರು. ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ನಿರೂಪಿಸಿ, ವಂದಿಸಿದರು.